ವಂಡ್ಸೆ ಹೊಲಿಗೆ ಕೇಂದ್ರದ ಮಹಿಳೆಯರನ್ನು ಬೀದಿಗೆ ಹಾಕಿಲ್ಲ, ಬದಲಿ ವ್ಯವಸ್ಥೆ ಮಾಡಿದ್ದೇವೆ – ಶಾಸಕ ಬಿ ಎಮ್ ಎಸ್

Spread the love

ವಂಡ್ಸೆ ಹೊಲಿಗೆ ಕೇಂದ್ರದ ಮಹಿಳೆಯರನ್ನು ಬೀದಿಗೆ ಹಾಕಿಲ್ಲ, ಬದಲಿ ವ್ಯವಸ್ಥೆ ಮಾಡಿದ್ದೇವೆ – ಶಾಸಕ ಬಿ ಎಮ್ ಎಸ್

ಕುಂದಾಪುರ: ವಂಡ್ಸೆಯಲ್ಲಿ ಹೊಲಿಗೆ ಕೇಂದ್ರ ನಡೆಸುತ್ತಿದ್ದ ಮಹಿಳೆಯರನ್ನು ನಾವು ಬೀದಿಗೆ ಹಾಕಿಲ್ಲ. ಜಿಲ್ಲಾ ಆರೋಗ್ಯಾಧಿಕಾರಿಯವರ ಜೊತೆ ಚರ್ಚಿಸಿ, ಸ್ಥಳಾಂತಗೊಂಡಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಹಳೆಯ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಿ ಕೊಟ್ಟಿದ್ದೇವೆ ಎಂದು ಶಾಸಕ ಬಿ.ಎಂ ಸುಕುಮಾರ್ ಶೆಟ್ಟಿ ಹೇಳಿದರು.

ಮಂಗಳವಾರ ಸಂಜೆ ಚಿತ್ತೂರಿನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹೊಸ ನಾಡ ಕಚೇರಿ ಮಂಜೂರಾಗಿದ್ದರೂ, ಕಾಂಗ್ರೆಸ್ ಪಕ್ಷದ ದ್ವೇಷದ ರಾಜಕಾರಣದಿಂದ ತಡೆಯಾಜ್ಞೆ ತಂದು ಜನರಿಗೆ ಅನೂಕೂಲವಾಗುವುದನ್ನು ತಪ್ಪಿಸಲಾಗಿದೆ. ಸ್ವಾವಲಂಬನಾ ಹೊಲಿಗೆ ಕೇಂದ್ರದ ಸ್ಥಳಾಂತರದ ವಿಷಯದಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿಯವರು ರಾಜಕೀಯ ಮಾಡುತ್ತಿದ್ದು, ಇದು ಅವರಿಗೆ ಶೋಭೆ ತರುವಂತದಲ್ಲ. ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಯ ದೃಷ್ಟಿಯಲ್ಲಿ ಈ ರಾಜಕೀಯ ನಡೆಯುತ್ತಿದ್ದು, ಈ ಬಾರಿ ವಂಡ್ಸೆಯಲ್ಲಿಯೂ ಬಿಜೆಪಿ ಪಕ್ಷದ ಬೆಂಬಲಿತರು ಅಧಿಕಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.

ಬೈಂದೂರಿನ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಈಗಾಗಲೇ 1,350 ಕೋಟಿ ರೂ ಅನುದಾನ ಬಂದಿದೆ. ವಿಮಾನ ನಿಲ್ದಾಣ ಕೇಂದ್ರ ಸೇರಿದಂತೆ ಈ ಹಿಂದೆ ಭರವಸೆ ನೀಡಿದ್ದ ಎಲ್ಲ ಯೋಜನೆಗಳ ಅನುಷ್ಠಾನಕ್ಕೂ ಪ್ರಯತ್ನ ನಡೆಯುತ್ತಿದೆ. ಕೊರೋನಾ ಚಿಕಿತ್ಸೆಗೆ ಸರ್ಕಾರಕ್ಕೆ ಬಿಲ್ ನೀಡಿರುವುದಾಗಿ ದೂರಿದ್ದಾರೆ. ಆದರೆ ಬಿಲ್ ನೀಡಿರುವುದು ನನ್ನ ಕಣ್ಣಿನ ಶಸ್ತ್ರ ಚಿಕಿತ್ಸಾ ವೆಚ್ಚಕ್ಕೆ. ಪ್ರತಿ ಶಾಸಕರು ತಮ್ಮ ಆರೋಗ್ಯದ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಪಡೆಯುವ ಅವಕಾಶ ಇದೆ. ಶಾಸಕರಾಗಿದ್ದ ಗೋಪಾಲ ಪೂಜಾರಿಯವರಿಗೆ ಇದು ಗೊತ್ತಿಲ್ಲದೆ ಇರುವುದು ವಿಪರ್ಯಾಸ ಎಂದು ಹೇಳಿದ ಅವರು, ಅವರ ಎಲ್ಲಾ ದೂರುಗಳಿಗೂ ನನ್ನ ಬಳಿ ದಾಖಲೆ ಇದ್ದು, ಎಲ್ಲಿ ಬೇಕಾದರೂ ಒದಗಿಸಲು ನಾನು ಸಿದ್ದನಿದ್ದೇನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಶಂಕರ ಪೂಜಾರಿ ಯಡ್ತರೆ, ಸುರೇಶ್ ಬಟವಾಡಿ, ತಾಲೂಕು ಪಂಚಾಯಿತಿ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ ಉಪ್ಪುಂದ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಮಂಜಯ್ಯ ಶೆಟ್ಟಿ, ಪ್ರಮುಖರಾದ ನಾಗರಾಜ್, ಪ್ರಶಾಂತ್ ಪೂಜಾರಿ ಇದ್ದರು


Spread the love