ವರಾಹಿ ಪಂಪ್ಡ್ ಸ್ಟೋರೇಜ್ ಜನ ವಿರೋಧಿ ಯೋಜನೆ – ಕೆ ವಿಕಾಸ್ ಹೆಗ್ಡೆ

Spread the love

ವರಾಹಿ ಪಂಪ್ಡ್ ಸ್ಟೋರೇಜ್ ಜನ ವಿರೋಧಿ ಯೋಜನೆ – ಕೆ ವಿಕಾಸ್ ಹೆಗ್ಡೆ

ಕುಂದಾಪುರ: ತಾಲ್ಲೂಕಿನ ಹೊಸಂಗಡಿ ಹಾಗೂ ಮಚ್ಚಟ್ಟು ಗ್ರಾಮಗಳ ವ್ಯಾಪ್ತಿಯಲ್ಲಿ ಕರ್ನಾಟಕ ವಿದ್ಯುತ್ ನಿಗಮವು ಕೇಂದ್ರ ಸರ್ಕಾರದ ರಾಷ್ಟ್ರಿಯ ಉಷ್ಣ ವಿದ್ಯುತ್ ನಿಗಮದ ಅಂಗ ಸಂಸ್ಥೆಯಾದ ತೆಹ್ರಿ ಹೈಡ್ರೋ ಡೆವಲಪ್ಮೆಂಟ್ ಕಾರ್ಪೋರೇಶನ್ ಸಂಸ್ಥೆಯೊಂದಿಗಿನ ಸುಮಾರು 1,500 ಕೋಟಿ ವೆಚ್ಚದ ವೆಚ್ಚದ ಒಪ್ಪಂದದಲ್ಲಿ ಸುಮಾರು 1500 ಮೆಗಾವ್ಯಾಟ್ ವಿದ್ಯುತ್ ಉತ್ಪಾದಾನ ಸಾಮರ್ಥ್ಯದ ವರಾಹಿ ಪಂಪ್ಡ್ ಸ್ಟೋರೇಜ್ ಕೂಡ ಸೇರಿರುವುದು ವರಾಹಿ ನದಿ ಪಾತ್ರದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಅತ್ಯಂತ ಅಪಾಯಕಾರಿ ಯೋಜನೆಯಾಗಿದೆ ಎಂದು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಹೇಳಿದ್ದಾರೆ.

ಮಾಣಿ ಆಣೆಕಟ್ಟುವಿನಿಂದ ಹರಿದು ಬಂದ ನೀರು ಹೊಸಂಗಡಿಯ ಕರ್ನಾಟಕ ವಿದ್ಯುತ್ ನಿಗಮದ ಜಲ ವಿದ್ಯುತ್ ಉತ್ಪಾದನಾ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಮಾಡಿ ವರಾಹಿ ನದಿಯ ಮೂಲಕ ಹರಿದುಬಂದು ಹೋರಿಯಬ್ಬೆಯ ಅಣೆಕಟ್ಟುವಿನಲ್ಲಿ ಶೇಖರಣೆಯಾಗಿ ಅಲ್ಲಿಂದ ವರಾಹಿ ನದಿ ಮತ್ತು ವರಾಹಿ ಕಾಲುವೆ ಮೂಲಕ ರೈತರ ಕೃಷಿ ಭೂಮಿಗೆ ಹರಿಯುತ್ತದೆ. ಇವತ್ತು ವರಾಹಿ ಎಡ ದಂಡೆ ಕಾಲುವೆಯ ಕಾಮಗಾರಿ ಮುಗಿದಿದ್ದು ಸುಮಾರು 8,000 ಹೆಕ್ಟೇರ್ ಕೃಷಿ ಭೂಮಿಗೆ ನೀರು ಹರಿಯುತ್ತಿದ್ದರೆ, ವರಾಹಿ ಏತ ನೀರಾವರಿ ಕಾಲುವೆ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಹಾಗೂ ಅದರ ಜೊತೆ ವರಾಹಿ ನದಿಯಲ್ಲಿ ಬಳ್ಕೂರು ಗ್ರಾಮದ ತನಕ ಸಾವಿರಾರು ರೈತರು ಕೃಷಿ ಪಂಪುಸೆಟ್ ಗಳ ಮೂಲಕ ತಮ್ಮ ಕೃಷಿ ಭೂಮಿಗಳಿಗೆ ನೀರನ್ನು ಬಳಸುತ್ತಿದ್ದಾರೆ. ಇನ್ನು ಕುಂದಾಪುರ ಪುರಸಭೆ ಮತ್ತು ಸುಮಾರು ಹನ್ನೆರಡು ಗ್ರಾಮ ಪಂಚಾಯತುಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜಾಗುವುದು ವರಾಹಿ ನದಿಯಿಂದ. ಆದುದರಿಂದ ಈ ಪಂಪ್ಡ್ ಸ್ಟೋರೇಜ್ ಯೋಜನೆ ಆದರೆ ವರಾಹಿ ನದಿಯಲ್ಲಿ ನೀರಿನ ಹರಿಯುವಿಕೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿ ರೈತರಿಗೆ, ಪುರಸಭೆ ಹಾಗೂ ಗ್ರಾಮ ಪಂಚಾಯತುಗಳಿಗೆ ಮುಂದೆ ನೀರಿನ ಹಾಹಾಕಾರ ತಲೆದೋರಲಿದೆ. ಆದುದರಿಂದ ಜನಪ್ರತಿನಿದಿನಗಳು ಕೂಡಲೇ ಎಚ್ಚೆತ್ತುಕೊಂಡು ಈ ಜನವಿರೋಧಿ ಯೋಜನೆ ಜಾರಿಯಾಗದಂತೆ ಕ್ರಮವಹಿಸಬೇಕು ಹಾಗೂ ಸರ್ಕಾರ ಈ ಯೋಜನೆ ಜಾರಿಗೆ ಮುಂದಾದರೆ ಉಗ್ರಹೋರಾಟ ಮಾಡುತ್ತೇವೆ ಎಂದು ಕುಂದಾಪುರ ತಾಲ್ಲೂಕು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿರುತ್ತಾರೆ.


Spread the love
Subscribe
Notify of

0 Comments
Inline Feedbacks
View all comments