ವಿಜಯಪುರ: ವೈದ್ಯರೊಬ್ಬರಿಗೆ ಬ್ಲ್ಯಾಕ್ ಮೇಲ್ ಪತ್ರಕರ್ತರು ಸೇರಿ 6 ಮಂದಿ ಸೆರೆ

Spread the love

ವಿಜಯಪುರ: ವೈದ್ಯರೊಬ್ಬರಿಗೆ ಬ್ಲ್ಯಾಕ್ ಮೇಲ್ ಪತ್ರಕರ್ತರು ಸೇರಿ 6 ಮಂದಿ ಸೆರೆ

ವಿಜಯಪುರ: ‘ವೈದ್ಯರೊಬ್ಬರನ್ನು ಬ್ಲ್ಯಾಕ್‌ಮೇಲ್‌ ಮಾಡಿ, ₹ 50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪತ್ರಕರ್ತರು ಹಾಗೂ ದಂಪತಿ ಸೋಗಿನಲ್ಲಿದ್ದ ಇಬ್ಬರು ಸೇರಿ ಒಟ್ಟು 6 ಜನರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ಅಮೃತ್ ನಿಕ್ಕಂ ಬುಧವಾರ ಇಲ್ಲಿ ತಿಳಿಸಿದರು.

‘ಸುವರ್ಣ 24X7 ನ್ಯೂಸ್‌ ವಾಹಿನಿ ವರದಿಗಾರ ಪ್ರಸನ್ನ ದೇಶಪಾಂಡೆ, ಕ್ಯಾಮೆರಾಮನ್ ಸಂಗಮೇಶ ಕುಂಬಾರ, ಸಂಗ್ರಾಮ ಪತ್ರಿಕೆಯ ವರದಿಗಾರ ರವಿ ಬಿಸನಾಳ, ‘ಹಲೋ ಬೆಂಗಳೂರು’ ಪಾಕ್ಷಿಕ ಪತ್ರಿಕೆಯ ವರದಿಗಾರ ಸಿದ್ರಾಮಪ್ಪ ಲಗಳಿ, ದಂಪತಿ ಸೋಗಿನಲ್ಲಿದ್ದ ವಿಜಯಪುರದ ನಿಂಗನಗೌಡ ಪಾಟೀಲ ಹಾಗೂ ಅಥಣಿಯ ಆಶಾ ಲಕ್ಷ್ಮಣ ಜಡಗೆ ಬಂಧಿತರು. ಈ ಆರೋಪಿಗಳನ್ನು ಏಪ್ರಿಲ್‌ 3ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಅವರು ಪತ್ರಿಕಾ ಗೋಷ್ಠಿಯಲ್ಲಿ ವಿವರಿಸಿದರು.

‘ಇದು, ಆರೋಪಿ ಪತ್ರಕರ್ತರು ನಡೆಸಿದ ಸ್ಟಿಂಗ್‌ ಆಪರೇಷನ್‌ ಅಲ್ಲ, ಬದಲಿಗೆ ವೈದ್ಯ ಕಿರಣ್ ಓಸ್ವಾಲ್ ವಿರುದ್ಧ ಇವರೆಲ್ಲರೂ ಸೇರಿ ಹಣ ಸುಲಿಗೆ ಮಾಡುವುದಕ್ಕಾಗಿಯೇ ರೂಪಿಸಿದ ಸಂಚು’ ಎಂದು ಎಸ್‌ಪಿ ತಿಳಿಸಿದರು.

ಘಟನೆ ವಿವರ: ‘ಡಾ.ಕಿರಣ್‌ ಅವರ ಸೊನೊಗ್ರಾಫಿ ಕ್ಲಿನಿಕ್‌ನಲ್ಲಿ ಭ್ರೂಣ ಪತ್ತೆ ನಡೆಸಲಾಗುತ್ತಿದೆ ಎಂಬ ಸುಳ್ಳು ಆರೋಪ ಹೊರಿಸಿ, ಸುಲಿಗೆ ನಡೆಸಲಿಕ್ಕಾಗಿಯೇ ಈ ಪತ್ರಕರ್ತರು ಮಂಗಳವಾರ ರಾತ್ರಿ ಕ್ಲಿನಿಕ್‌ ಎದುರು ಕಾದು ಕುಳಿತಿದ್ದರು. ದಂಪತಿಯ ಸೋಗಿನಲ್ಲಿದ್ದ ನಿಂಗನಗೌಡ ಪಾಟೀಲ, ಆಶಾ ಜಡಗೆ ಕ್ಲಿನಿಕ್ ಒಳಗಿನಿಂದ ತಪಾಸಣೆ ಮುಗಿಸಿಕೊಂಡು ಹೊರ ಬರುತ್ತಿದ್ದಂತೆ ಕ್ಲಿನಿಕ್‌ ಒಳಗೆ ನುಗ್ಗಿದ ಈ ತಂಡ ವೈದ್ಯರನ್ನು ಪ್ರಶ್ನಿಸಿದೆ’ ಎಂದರು.

‘ಡಾ.ಕಿರಣ್‌ ಆರೋಪ ನಿರಾಕರಿಸುತ್ತಿದ್ದಂತೆ, ರವಿ ಬಿಸನಾಳ ತಮ್ಮಲ್ಲಿದ್ದ ₹ 20 ಸಾವಿರ ನಗದನ್ನು ವೈದ್ಯರ ಕಿಸೆಗಿಟ್ಟು, ವಿಡಿಯೊ ಚಿತ್ರೀಕರಣ ನಡೆಸಿದ್ದಾರೆ. ನಂತರ ₹50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ತಮ್ಮ ಟಿವಿಯಲ್ಲಿ ಪ್ರಸಾರ ಮಾಡಿ ಮರ್ಯಾದೆ ಕಳೆಯುುವು ದರೊಂದಿಗೆ ಅಧಿಕಾರಿಗಳಿಗೂ ತಿಳಿಸಿ ಕಾನೂನು ಕ್ರಮ ಜರುಗಿಸುವಂತೆ ಒತ್ತಡ ಹಾಕುವುದಾಗಿ ಬೆದರಿಸಿದ್ದಾರೆ. ನಂತರ ಹೋಟೆಲ್‌ವೊಂದಕ್ಕೆ ಮಾತುಕತೆ ಸ್ಥಳಾಂತರಿಸಿ, ಹತ್ತು ಲಕ್ಷ ರೂಪಾಯಿಗಳಿಗೆ ವ್ಯವಹಾರ ಕುದುರಿಸುತ್ತಾರೆ. ನಂತರ ವೈದ್ಯರ ಕಿಸೆಯಲ್ಲಿದ್ದ ₹ 1,00,500 ನಗದನ್ನು ಕಿತ್ತುಕೊಂಡಿದ್ದಾರೆ. ಉಳಿದ ₹ 9 ಲಕ್ಷ ನಾಳೆಯೇ ಕೊಡಬೇಕು. ಈ ವಿಷಯವನ್ನು ಬಾಯಿಬಿಟ್ಟರೆ, ಖಲಾಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ’ ಎಂದು ವಿವರಿಸಿದರು.


Spread the love