ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮಾದರಿಯಾಗಲಿ : ಪ್ರತಿಭಾ ಕುಳಾಯಿ

Spread the love

ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮಾದರಿಯಾಗಲಿ : ಪ್ರತಿಭಾ ಕುಳಾಯಿ

ಮ0ಗಳೂರು : ಅತ್ಯಂತ ಕಷ್ಟ ಹಾಗೂ ಸಾಮಾಜಿಕವಾಗಿ ತಳಸ್ತರದಿಂದ ಮೇಲೆದ್ದು ಬಂದು ಉನ್ನತ ಶಿಕ್ಷಣ ಪಡೆದ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಂದಿನ ವಿದ್ಯಾರ್ಥಿಗಳಿಗೆ ಅನುಕರಣೀಯ ವ್ಯಕ್ತಿಯಾಗಬೇಕು ಎಂದು ಮಂಗಳೂರು ಮಹಾನಗರಪಾಲಿಕೆ ಸದಸ್ಯೆ ಪ್ರತಿಭಾ ಕುಳಾಯಿ ಕರೆ ನೀಡಿದ್ದಾರೆ.

ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಗೋವಿಂದದಾಸ ಕಾಲೇಜು ಸುರತ್ಕಲ್ ರಾಜ್ಯಶಾಸ್ತ್ರ ವೇದಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಅಂಗವಾಗಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಅಂಬೇಡ್ಕರ್ ಚಿಂತನೆಗಳ ಕುರಿತು ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯಾ ಪೂರ್ವದಲ್ಲಿ ಭಾರತದಲ್ಲಿ ಸಾಮಾಜಿಕ ಸ್ಥಿತಿಗತಿ ಬಹಳ ಕೆಳಮಟ್ಟದಲ್ಲಿತ್ತು. ದಲಿತರು ಮುಖ್ಯವಾಹಿನಿಯಿಂದ ದೂರವಿದ್ದರು. ಅಂತಹ ಸಾಮಾಜಿಕ ವಿಪ್ಲವಗಳ ಮಧ್ಯೆ ಅಂಬೇಡ್ಕರ್ ಅವರು ವಿದೇಶಕ್ಕೂ ತೆರಳಿ ಉನ್ನತ ಶಿಕ್ಷಣ ಪಡೆದು, ಈ ದೇಶ ಕಂಡ ಮಹಾನ್ ವ್ಯಕ್ತಿಯಾದರು. ಇಂದಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರು ಸಾಗಿ ಬಂದ ಹಾದಿಯನ್ನು ಮನನ ಮಾಡಿ, ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ವ್ಯಕ್ತಿಯ ಸಾಮಾಜಿಕ ಬದಲಾವಣೆಗೆ ಶಿಕ್ಷಣವೇ ಪ್ರಮುಖ ಅಸ್ತ್ರವಾಗಿದೆ. ಅಂಬೇಡ್ಕರ್ ಅವರು ಶಿಕ್ಷಣ ಪಡೆದಿದ್ದರಿಂದಲೇ ತಾನೂ ಉನ್ನತ ಸ್ಥಾನಕ್ಕೇರಿ, ದಲಿತ ಸಮಾಜದ ಉನ್ನತಿಗೂ ಕಾರಣಕರ್ತರಾದರು ಎಂದು ಪ್ರತಿಭಾ ಕುಳಾಯಿ ನುಡಿದರು.

ಉಪನ್ಯಾಸ ನೀಡಿದ ಮಂಗಳೂರು ಸರಕಾರಿ ಬಿ.ಎಡ್ ಕಾಲೇಜಿನ ಉಪನ್ಯಾಸಕಿ ಮಂಜುಳಾ ಶೆಟ್ಟಿ, ಅಂಬೇಡ್ಕರ್ ಅವರು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಈ ಮೂರು ತತ್ವದಲ್ಲಿ ನಂಬಿಕೆ ಇರಿಸಿದ್ದರು. ದಲಿತರ ಪ್ರಗತಿ ಇದರಿಂದಲೇ ಸಾಧ್ಯ ಎಂದು ಮನಗಂಡಿದ್ದರು. ಕೆಳವರ್ಗದವರನ್ನು ಶೋಷಿಸುತ್ತಿದ್ದ ಸ್ವದೇಶೀಯರ ವಿರುದ್ಧವೇ ಸಾಮಾಜಿಕ ಹೋರಾಟವನ್ನು ಅಂಬೇಡ್ಕರ್ ಮಾಡಬೇಕಾಗಿ ಬಂದದ್ದು ಗಮನಾರ್ಹವಾಗಿದೆ ಎಂದು ಹೇಳಿದರು. ತಳಸಮುದಾಯದಲ್ಲಿ ಹುಟ್ಟಿ, ಅವಮಾನಗಳ ಸರಮಾಲೆಯನ್ನೇ ಎದುರಿಸಿ ಉನ್ನತಿಗೇರಿದ ಅಂಬೇಡ್ಕರ್ ಈ ದೇಶದ ಮಹಾನ್ ಸುಧಾರಕರಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ತನ್ನ ನಿಲುವಿಗೆ ಇಡೀ ರಾಷ್ಟ್ರವೇ ಎದುರಾದರೂ, ದೃತಿಗೆಡದೆ ತನ್ನ ನಿಲುವಿಗೆ ಅಂಬೇಡ್ಕರ್ ಬದ್ಧರಾಗಿದ್ದರು ಎಂದು ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಡಾ. ಮುರಳೀಧರ್ ರಾವ್ ವಹಿಸಿದ್ದರು. ಉಪಪ್ರಾಂಶುಪಾಲ ಕೃಷ್ಣಮೂರ್ತಿ, ಪತ್ರಿಕೋದ್ಯಮ ಉಪನ್ಯಾಸಕ ಶ್ರೀನಿವಾಸ ಹೊಡೆಯಾಲ, ಯಕ್ಷಗಾನ ಕಲಾವಿದ ಗಿರೀಶ್ ನಾವಡ ಉಪಸ್ಥಿತರಿದ್ದರು.

ಜಿಲ್ಲಾ ವಾರ್ತಾಧಿಕಾರಿ ಬಿ.ಎ. ಖಾದರ್ ಶಾ ಸ್ವಾಗತಿಸಿದರು. ಗೋವಿಂದದಾಸ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅಶಾಲತಾ ವಂದಿಸಿದರು. ಉಪನ್ಯಾಸಕಿ ಸುಧಾ ಕಾರ್ಯಕ್ರಮ ನಿರೂಪಿಸಿದರು.


Spread the love