ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿಕೊಳ್ಳಿ : ಡಾ| ಜಿ ಶಂಕರ್

Spread the love

ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿಕೊಳ್ಳಿ : ಡಾ| ಜಿ ಶಂಕರ್

ಉಡುಪಿ : ವಿದ್ಯಾರ್ಥಿಗಳು ಉತ್ತಮ ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನಗಳಿಂದ ದೂರ ಇರಬೇಕು. ಸಮಾಜ ಮತ್ತು ಹೆತ್ತವರಿಗೆ ಒಳ್ಳೆಯ ಹೆಸರನ್ನು ತರಬೇಕು. ಶಾಲೆಗೆ ಮಾದರಿ ವಿದ್ಯಾರ್ಥಿಗಳಾಗಬೇಕು ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಡಾ. ಜಿ. ಶಂಕರ್ ಹೇಳಿದರು.

ಉಡುಪಿ ಜಿ. ಶಂಕರ್ -ಫ್ಯಾಮಿಲಿ ಟ್ರಸ್ಟ್ ವತಿಯಿಂದ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲ ಸಮಾಜದ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ 1,900 ವಿದ್ಯಾರ್ಥಿಗಳಿಗೆ 2018–19ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉನ್ನತ ಶಿಕ್ಷಣ ಕೈಗೊಳ್ಳುವ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಬ್ಯಾಂಕ್ ಆಫ್ ಬರೋಡಾದಲ್ಲಿ ಯಾವುದೇ ಭದ್ರತೆ ಇಲ್ಲದೆ ₹7.50 ಲಕ್ಷದವರೆಗೆ ಸಾಲ ಸೌಲಭ್ಯ ನೀಡುವ ಯೋಜನೆಯನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಡಾ. ಜಿ. ಶಂಕರ್ ಹೇಳಿದರು.

ಈ ಸಾಲ ಸೌಲಭ್ಯ ಯೋಜನೆಯ ಅರ್ಹ ಫಲಾನುಭವಿಗಳಿಗೆ ಇದೇ ಹಾಲ್ನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಾಲವನ್ನು ವಿತರಿಸಲಾಗುವುದು. ಕಳೆದ 17 ವರ್ಷಗಳಿಂದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳು ಕೆಲಸ ದೊರೆತ ನಂತರ ಬೇರೆಯವರಿಗೆ ಸಹಾಯ ಮಾಡಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬ್ಯಾಂಕ್ ಆಫ್ ಬರೋಡ ಮಂಗಳೂರು ವಲಯದ ಮಹಾಪ್ರಬಂಧಕ ಎಂ.ಜೆ.ನಾಗರಾಜ್ ಮಾತನಾಡಿ, ‘ವಿದ್ಯಾರ್ಥಿಗಳು ದಿನ ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳ ಜ್ಞಾನ ಭಂಡಾರ ವೃದ್ಧಿ ಆಗುವುದರ ಜತೆಗೆ ಭಾಷೆ ಮೇಲೆ ಹಿಡಿತ ಹೊಂದಲು ಸಾಧ್ಯವಾಗುತ್ತದೆ. ವೃತ್ತಿಯ ಜತೆಗೆ ಕಲೆ, ಸಂಗೀತ, ನಾಟಕಗಳಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಒತ್ತಡ ನಿರ್ವಹಣೆ ಆಗುವುದು ಮಾತ್ರವಲ್ಲದೆ, ಸದಾ ಹುಮ್ಮಸ್ಸಿನಿಂದ ಇರಲು ಸಾಧ್ಯ’ ಎಂದರು.

ಬ್ಯಾಂಕ್ ಆಫ್ ಬರೋಡ ಉಡುಪಿ ಪ್ರಾದೇಶಿಕ ಶಾಖೆಯ ಉಪ ಮಹಾಪ್ರಬಂಧಕ ರವೀಂದ್ರ ರೈ ವಿದ್ಯಾರ್ಥಿ ವೇತನವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪಲ್ಲವಿ (ಕನ್ನಡ ಮಾಧ್ಯಮ), ಎಂ.ಮನ್ವಿತ್ ಪ್ರಭು (ಆಂಗ್ಲ ಮಾಧ್ಯಮ) ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ನಿವೇದಿತಾ (ಕಲಾ), ಪ್ರತೀಕ್ಷಾ ಪೈ (ವಾಣಿಜ್ಯ), ರಾಯೀಸ ಮತ್ತು ಸ್ವಾತಿ (ವಿಜ್ಞಾನ) ಅವರಿಗೆ ಪುರಸ್ಕಾರ ನೀಡಲಾಯಿತು.
ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನ ಶುಭಶ್ರೀ ಎಸ್. ಶೆಣೈ, ಕೆ.ಎಸ್. ಸುಮಂತ್ ಅವರನ್ನು ಗೌರವಿಸಲಾಯಿತು. ಹಾವು ಹಿಡಿಯುವ ಕೃಷ್ಣ ಮೂರ್ತಿ ಹೆಬ್ಬಾರ್ ಅವರನ್ನು ಸನ್ಮಾನಿಸಲಾಯಿತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಅಶಕ್ತ ಯಕ್ಷಗಾನ ಕಲಾವಿದರಿಗೆ ಸಹಾಯಧನವನ್ನು ವಿತರಿಸಲಾಯಿತು.

ಜಿಲ್ಲಾ ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು. ಟ್ರಸ್ಟ್ನ ಸದಸ್ಯ ಎಸ್.ಕೆ.ಆನಂದ ಸ್ವಾಗತಿಸಿದರು. ಕೆ.ಶಿವರಾಮ್ ಕಾರ್ಯಕ್ರಮ ನಿರೂಪಿಸಿದರು.


Spread the love