ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಪಕವಾಗಿ ಕಾರ್ಯವೆಸಗುವಲ್ಲಿ ಮಾಧ್ಯಮದ ಪಾತ್ರ ಪ್ರಮುಖ – ಸೊರಕೆ

Spread the love

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಪಕವಾಗಿ ಕಾರ್ಯವೆಸಗುವಲ್ಲಿ ಮಾಧ್ಯಮದ ಪಾತ್ರ ಪ್ರಮುಖ – ಸೊರಕೆ

ಕಾಪು: ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಮರ್ಪಕವಾಗಿ ಕಾರ್ಯವೆಸಗುವಲ್ಲಿ ಜವಾಬ್ದಾರಿಯುತ ಮಾಧ್ಯಮವು ಪ್ರಮುಖ ಪಾತ್ರವಾಗಿದೆ. ಸಮಾಜವನ್ನು ಜಾಗೃತಗೊಳಿಸುವ, ಉತ್ತಮ ಸಂಪದ್ಭರಿತ ಸಂದೇಶಗಳನ್ನು ಸಮಾಜಕ್ಕೆ ನೀಡಿ ಸಮಾಜದ ಉತ್ತಮ ಬೆಳವಣಿಗೆಗೆ ದೂರದೃಷ್ಟಿತ್ವದ ಪತ್ರಕರ್ತರ ಪ್ರಾಮಾಣಿಕ ಕರ್ತವ್ಯವೇ ಕೊಡುಗೆಯಾಗಿದೆ ಎಂದು ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು ಮಂಗಳವಾರ ಕಾಪು ವೀರಭದ್ರ ಸಭಾಭವನದಲ್ಲಿ ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಸಹನೆ, ಅಶಾಂತಿ, ಹಿಂಸಾ ಪ್ರವೃತ್ತಿಯಂತಹ ವಾತಾವರಣದ ನಿಯಂತ್ರಣ ಪತ್ರಕರ್ತರ ಹೊಣೆಗಾರಿಕೆಯಾಗಿದೆ. ಸಂಘಟನಾತ್ಮಕ ಸಂದೇಶವನ್ನು ನೀಡುವಲ್ಲಿ ಇಂತಹ ಕಾರ್ಯಕ್ರಮವು ಅವಶ್ಯವಾಗಿದ್ದು, ಮಂಥನದ ಮೂಲಕ ಅಮೃತವೇ ಹೊರಬರಲಿ ಎಂದರು.

ಮುಖ್ಯತಿಥಿಯಾಗಿದ್ದ ರಾಜ್ಯ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಪತ್ರಿಕೋದ್ಯಮವು ಪರಂಪರೆ, ಇತಿಹಾಸವನ್ನು ಹೊಂದಿದೆಯೇ ಹೊರತು ದಿಢೀರ್ ಬೆಳೆದದ್ದಲ್ಲ. ನಾಡಿನ ಮನೆಮನಗಳಿಗೆ ಸುದ್ದಿ ಮಾಧ್ಯಮ ತಲುಪಿದೆ. ಆದುದರಿಂದ ಗುಣಮಟ್ಟದ, ಸಮಾಜಕ್ಕೆ ಉಪಯೋಗಕಾರಿ ಸುದ್ಧಿ ನೀಡುವುದು ಪತ್ರಕರ್ತರ ಪ್ರಮುಖ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಸಾಮರಸ್ಯವನ್ನು ಬೆಸೆಯುವ, ಒಡೆದುದನ್ನು ಒಗ್ಗೂಡಿಸುವ ಪರಿಣಾಮಕಾರಿ ಜವಾಬ್ದಾರಿ ಪತ್ರಕರ್ತರದ್ದು. ಹಾಗಾಗಿ ಸಮಾಜದ ನಾಲ್ಕನೇ ಕಣ್ಗಾವಲಾದ ಮಾಧ್ಯಮದಲ್ಲಿ ಸಾಮಾಜಿಕ ಪ್ರಜ್ಞೆ, ಸಾಮಾಜಿಕ ಕಳಕಳಿಯುಳ್ಳ ವರದಿಗಾರಿಕೆ ಹೆಚ್ಚು ಮೂಡಿ ಬರಲಿ ಎಂದು ಆಶಿಸಿದರು.

ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿದ್ದ ನವದೆಹಲಿಯ ಭಾರತೀಯ ಕಾರ್ಯನಿರತ ಪತ್ರಕರ್ತ ಒಕ್ಕೂಟದ ಮಾಜಿ ಪ್ರಧಾನ ಕಾರ್ಯದರ್ಶಿ ಎಚ್.ಬಿ. ಮದನಗೌಡ ಅವರು ಗ್ರಾಮೀಣ ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳು, ಸಮೂಹ ಮಾಧ್ಯಮ ಮತ್ತು ಸ್ವಯಂ ನೀತಿ ಸಂಹಿತೆ ವಿಷಯಾಧಾರಿತ ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.

ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪ್ರಮೋದ್ ಸುವರ್ಣ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಷಾ, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಗಣೇಶ್ ಪ್ರಸಾದ್ ಪಾಂಡೇಲು, ಪ್ರಧಾನ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು, ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್ ಮಂಜನಬೈಲು, ಉಡುಪಿ ಪ್ರೆಸ್ಕ್ಲಬ್ ಸಂಚಾಲಕ ನಾಗರಾಜ ವರ್ಕಾಡಿ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಬಾಲಕೃಷ್ಣ ಪೂಜಾರಿ ಉಚ್ಚಿಲ, ಕ್ರೀಡಾಕಾರ್ಯದರ್ಶಿ ವಿಜಯ ಆಚಾರ್ಯ ಉಚ್ಚಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪತ್ರಕರ್ತರುಗಳಾದ ಕಾರ್ಯಕ್ರಮದ ಸಂಚಾಲಕ ಬಿ.ಪುಂಡಲೀಕ ಮರಾಠೆ ಪ್ರಸ್ತಾವನೆಗೈದರು. ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಬಿ. ವಾದಿರಾಜ ರಾವ್ ನಡಿಮನೆ ವಂದಿಸಿದರು. ಉಪಾಧ್ಯಕ್ಷ ರಾಕೇಶ್ ಕುಂಜೂರು ಕಾರ್ಯಕ್ರಮ ನಿರೂಪಿಸಿದರು.


Spread the love