ಶಿಕ್ಷಣ ಸಂಸ್ಥೆಗಳ ಸಮೀಪದ ಅಂಗಡಿಗಳಲ್ಲಿ ಧೂಮಪಾನ ಮಾರಾಟ ಮಾಡಿದರೆ ಲೈಸನ್ಸ್ ರದ್ದತಿಗೆ ದ.ಕ. ಎಸ್ಪಿ ಸೂಚನೆ
ಮಂಗಳೂರು: ದ.ಕ.ಜಿಲ್ಲೆಯ ಶಾಲಾ-ಕಾಲೇಜುಗಳ ಸಮೀಪದಲ್ಲಿರುವ ಅಂಗಡಿ, ವಾಣಿಜ್ಯ ಸಂಸ್ಥೆಗಳಲ್ಲಿ ಸಿಗರೇಟ್, ತಂಬಾಕು ಸಹಿತ ಧೂಮಪಾನ ಮತ್ತು ಮಾದಕ ವಸ್ತುಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಅಂತಹ ಅಂಗಡಿಗಳ ಲೈಸನ್ಸ್ ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಡಾ. ಅರುಣ್ ಕೆ. ಸೂಚಿಸಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಕೇಂದ್ರ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಶಾಲಾ ಪರಿಸರದಲ್ಲಿ ಯಾವುದೇ ಧೂಮಪಾನ ಅಥವಾ ಮಾದಕ ವಸ್ತುಗಳ ಚಟುವಟಿಕೆ ನಡೆಯದಿರುವ ಬಗ್ಗೆ ಎಲ್ಲ ಶಾಲಾ ಎಸ್‌ಡಿಎಂಸಿಗಳು ಪರಿಶೀಲಿಸಿದ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯು ವರದಿ ಪಡೆಯಬೇಕು ಎಂದ ಎಸ್ಪಿ, ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಆಗ್ಗಿಂದಾಗೆ ನಡೆಸಬೇಕು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ವ್ಯಾಪ್ತಿಯ ಸಾರ್ವಜನಿಕರಲ್ಲಿ ಡ್ರಗ್ಸ್ ಮುಕ್ತ ಜಾಗೃತಿ ಕಾರ್ಯಕ್ರಮವನ್ನು ಆಗಾಗ ನಡೆಸಬೇಕು. ಹೋಂ ಸ್ಟೇ ಮತ್ತು ಲಾಡ್ಜ್‌ಗಳನ್ನು ಕೂಡ ತಪಾಸಣೆ ನಡೆಸಬೇಕು. ಕರಾವಳಿ ಭದ್ರತಾ ಪೊಲೀಸರು ಬೋಟ್‌ಗಳನ್ನು ಅನಿರೀಕ್ಷಿತ ತಪಾಸಣೆ ನಡೆಸಬೇಕು. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪಾರ್ಸೆಲ್‌ಗಳ ಮೇಲೆ ನಿಗಾ ವಹಿಸಬೇಕು. ಕೈಗಾರಿಕಾ ಘಟಕಗಳಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಬೇಕು. ರೈಲ್ವೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಕೂಡ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಎಸ್ಪಿ ಡ್ರಗ್ಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಚಟಕ್ಕೆ ಬಿದ್ದ ಮಕ್ಕಳನ್ನು ಅದರಿಂದ ಹೊರಗೆ ತರಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೌನ್ಸಿಲಿಂಗ್ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಪಾಲಕರು ತಮ್ಮ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಬಹುದಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತ ಮಿಥುನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.













