ಶಿರಾಡಿ ಘಾಟ್ ನಲ್ಲಿ ಕೆಎಸ್ಆರ್ಟಿಸಿ ರಾಜಹಂಸ ಬಸ್-ಕಾರು ಮುಖಾಮುಖಿ ಡಿಕ್ಕಿ: ಮೂವರು ಮೃತ್ಯು
ಮಂಗಳೂರು: ಕಡಬ ತಾಲೂಕಿನ ಗುಂಡ್ಯ ಸಮೀಪದ ಶಿರಾಡಿ ಘಾಟ್ ಗಡಿ ಭಾಗದಲ್ಲಿ ಶುಕ್ರವಾರ ಸಂಜೆ ಅತ್ಯಂತ ಭೀಕರ ರಸ್ತೆ ಅಪಘಾತವೊಂದು ಸಂಭವಿದ್ದು,ಕೆಎಸ್ಆರ್ಟಿಸಿ ರಾಜಹಂಸ ಬಸ್ ಹಾಗೂ ಸ್ವಿಫ್ಟ್ ಡಿಸೈರ್ ಕಾರಿನ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಶಿಶಿಲ ಗ್ರಾಮದ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ ಅವರಿಗೆ ಸೇರಿದ ಸ್ವಿಫ್ಟ್ ಡಿಸೈರ್ ಕಾರು ಬೆಂಗಳೂರಿನಿಂದ ಕೊಕ್ಕಡದ ಕಡೆಗೆ ಪ್ರಯಾಣಿಸುತ್ತಿತ್ತು. ಇತ್ತ ಧರ್ಮಸ್ಥಳದಿಂದ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ರಾಜಹಂಸ ಬಸ್ ಗುಂಡ್ಯ ಸಮೀಪದ ತಿರುವಿನಲ್ಲಿ ಕಾರಿಗೆ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತದೇಹಗಳು ವಾಹನದೊಳಗೆ ಸಿಲುಕಿಕೊಂಡಿದ್ದು, ಸ್ಥಳೀಯರು ಮತ್ತು ಪೊಲೀಸರು ಹರಸಾಹಸ ಪಟ್ಟು ಹೊರತೆಗೆದಿದ್ದಾರೆ.
ಮೃತಪಟ್ಟವರನ್ನು ಚಂದ್ರಶೇಖರ ಗೌಡ ಅವರ ಕುಟುಂಬಸ್ಥರು ಅಥವಾ ಸಂಬಂಧಿಕರು ಎಂದು ಶಂಕಿಸಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಿದೆ.
ರಾಜಹಂಸ ಬಸ್ನ ಮುಂಭಾಗಕ್ಕೂ ಹಾನಿಯಾಗಿದ್ದು, ಬಸ್ಸಿನಲ್ಲಿದ್ದ ಕೆಲವು ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಗುಂಡ್ಯ ಮತ್ತು ಶಿರಾಡಿ ಘಾಟ್ ಗಡಿ ಭಾಗದಲ್ಲಿ ಈ ಅಪಘಾತ ಸಂಭವಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ಹೊತ್ತು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಘಟನಾ ಸ್ಥಳಕ್ಕೆ ಕಡಬ ಪೊಲೀಸರು ಧಾವಿಸಿದ್ದು, ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಕ್ರಮ ಕೈಗೊಂಡಿದ್ದಾರೆ. ಮೃತದೇಹಗಳನ್ನು ಶವ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.













