ಶಿವಮೊಗ್ಗ: ಪಾಲಿಕೆಗಳ ನಿರ್ವಹಣೆಗೆ ಆಯುಕ್ತರ ಕಚೇರಿ ಸ್ಥಾಪನೆಗೆ ಚಿಂತನೆ – ವಿನಯ್ ಕುಮಾರ್ ಸೊರಕೆ

Spread the love

ಶಿವಮೊಗ್ಗ: ರಾಜ್ಯದಲ್ಲಿನ ನಗರಪಾಲಿಕೆಗಳ ಆಡಳಿತವನ್ನು ಸಮರ್ಪಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಪ್ರಧಾನ ಆಯುಕ್ತರ ಕಚೇರಿಯನ್ನು ಆರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಹೇಳಿದರು.
ಅವರು ಶಿವಮೊಗ್ಗ ಮಹಾನಗರಪಾಲಿಕೆ ಆವರಣದಲ್ಲಿ ಸ್ಥಳೀಯ ಸಂಸ್ಥೆಗಳ ಆಡಳಿತದ ಕುರಿತು ಪ್ರಗತಿಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು.
ಈಗಾಗಲೇ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಕಡತಗಳನ್ನು ಡಿಎಂಎ ನೊಡಿಕೊಳ್ಳುತ್ತಿದೆ. ಅಲ್ಲಿ ಈಗಾಗಲೇ ಸಾಕಷ್ಟು ಹೊರೆ ಬಿದ್ದಿದ್ದು, ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿವೃತ್ತ ಐಎ ಎಸ್ ಅಧಿಕಾರಿ ಜ್ಯೋತಿರ್ಲಿಂಗಮ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಆ ಸಮಿತಿ ಹಲವು ಶಿಫಾರಸುಗಳನ್ನು ಮಾಡಿದೆ. ಅದರ ಅನುಸಾರ ಪ್ರಧಾನ ಆಯುಕ್ತರ ಕಚೇರಿ ಸ್ಥಾಪಿಸಲು ಯೋಜಿಸಲಾಗಿದೆ. ಇದೆ ಸಮಿತಿ ಉಪ ವಿಭಾಗಿಯ ಕಚೇರಿಯನ್ನೂ ತೆರೆಯುವಂತೆ ಸಲಹೆ ನೀಡಿತ್ತು ಅದನ್ನು ತಿರಸ್ಕರಿಸಲಾಗಿದೆ. ಪ್ರಧಾನ ಆಯುಕ್ತರ ಕಚೇರಿ ಹಾಗೂ ಅಧಿಕಾರಿ ನೇಮಕದ ಸಂಬಂಧ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ ಎಂದರು.
ರಾಜ್ಯದ ಎಲ್ಲಾ ಸ್ಥಳೀಯ ನಗರ ಸಂಸ್ಥೆಗಳಲ್ಲಿ 2010 ರಿಂದ ಈ ವರೆಗೆ ಸುಮಾರು 2000 ಕೋಟಿ ರೂಪಾಯಿ ಮೊತ್ತ ಬಳಕೆಯಾಗದೇ ಹಾಗೇ ಇರುವುದು ಕಂಡು ಬಂದಿದೆ. ಎಸ್ ಎಫ್ ಸಿ ನಿಧಿ, ನಗರೋತ್ಥಾನ, 13 ನೇ ಹಣಕಾಸು, ಎಸ್ ಸಿ ಎಸ್ ಟಿ ನಿಧಿ, ಶೇ 7.25 ನಿಧಿ ಸೇರಿದಂತೆ ಹಲವು ಬಾಬತ್ತುಗಳಲ್ಲಿ ಬಿಡುಗಡೆಯಾದ ಅನುದಾನವನ್ನು ಖರ್ಚು ಮಾಡಿಯೇ ಇಲ್ಲ. ಈ ಮೊತ್ತವನ್ನು ಬಳಕೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ನಗರೋತ್ಥಾನ 2 ನೇ ಹಂತದ ಅನುಷ್ಠಾನದಲ್ಲಿ ಸಾಕಷ್ಟು ವಿಳಂಬವಾಗಿರುವುದು ಕಂಡು ಬರುತ್ತಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿಗಳಲ್ಲಿ ಕೈಗೊಂಡಿರುವ ಕಾಮಾಗಾರಿಗಳು ಮಂದಗತಿಯಲ್ಲಿ ಸಾಗುತ್ತಿವೆ. ಮುಖ್ಯಮಂತ್ರಿಗಳು ಬಜೆಟಿನಲ್ಲಿ 3 ನೇ ಹಂತದ ನಗರೋತ್ಥಾನ ಯೋಜನೆಯನ್ನು ಪ್ರಕಟಿಸಲಿದ್ದಾರೆ. ಹಾಗಾಗಿ ಬಾಕಿ ಉಳಿದ ಕಾಮಾಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು. ನಗರಾಡಳಿತ ಇಲಾಖೆಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದುದು ಹಾಗೂ ಗಣಕೀಕರಣವಾಗದ್ದರಿಂದ ಸಾಕಷ್ಟು ಹಿನ್ನಡೆಯಾಗಿತ್ತು. ಈಗ ಎ, ಬಿ ಮತ್ತು ಸಿ ವರ್ಗದ ಹುದ್ದೆಗಳನ್ನು ಕೆಪಿಎಸ್ಸಿ ಮೂಲಕ ಭರ್ತಿ ಮಾಡಲು ಸರಕಾರ ಅನುಮತಿ ನೀಡಿದೆ. ಡಿ ವರ್ಗದ ಹುದ್ದೆಗಳನ್ನು ಭರ್ತಿ ಮಾಡಲು ಆಯಾ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಲಾಗಿದೆ ಎಂದರು.


Spread the love