ಶೈಕ್ಷಣಿಕ ಕ್ಷೇತ್ರದ ಸರ್ವೋತೋಮುಖ ಬೆಳವಣಿಗೆಗೆ ಟ್ರಸ್ಟ್‌ನಿಂದ ನೆರವು : ದಿನೇಶ್ ಹೆಗ್ಡೆ ಮೊಳಹಳ್ಳಿ

Spread the love

ಶೈಕ್ಷಣಿಕ ಕ್ಷೇತ್ರದ ಸರ್ವೋತೋಮುಖ ಬೆಳವಣಿಗೆಗೆ ಟ್ರಸ್ಟ್‌ನಿಂದ ನೆರವು : ದಿನೇಶ್ ಹೆಗ್ಡೆ ಮೊಳಹಳ್ಳಿ

  • ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಸೇವಾ ಟ್ರಸ್ಟ್ (ರಿ) ಹಾಗೂ ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ ಮೂಲಕ ವಿವಿಧ ಕಾರ್ಯಕ್ರಮ

ಕುಂದಾಪುರ: ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಕ್ಕಳ ಸರ್ವೋತೋಮುಖ ಬೆಳವಣಿಗೆಗೆ ಪೂರಕವಾಗುವ ದಿಸೆಯಲ್ಲಿ ನಮ್ಮಿಂದ ಸಮಾಜಕ್ಕೆ ಒಂದಷ್ಟು ಕೊಡುಗೆಗಳನ್ನು ನೀಡಬೇಕು ಎನ್ನುವ ಸದುದ್ದೇಶದಲ್ಲಿ ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಸೇವಾ ಟ್ರಸ್ಟ್ (ರಿ) ಹಾಗೂ ವಿದ್ಯಾರ್ಥಿ ಮಿತ್ರ ಸೇವಾ ಟ್ರಸ್ಟ್ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಪ್ರವರ್ತಕ ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ ತಿಳಿಸಿದ್ದಾರೆ.

ಮೊಳಹಳ್ಳಿಯ ಟ್ರಸ್ಟ್ ಕಚೇರಿಯಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನುರಿತ ಸಂಪನ್ಮೂಲ ವ್ಯಕ್ತಿಗಳ ಮೂಲಕ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜಿನ ಮಕ್ಕಳಿಗೆ ಉಚಿತ ಆಪ್ತ ಸಮಾಲೋಚನೆ ಮತ್ತು ಪೂರಕ ಕಾರ್ಯಗಾರಗಳನ್ನು ನಡೆಸಿಕೊಡುವುದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಬಲ್ಲಂತಹ ಚಟುವಟಿಕೆಗಳನ್ನು ಆಯೋಜಿಸುವುದು. ಶಾಲಾ-ಕಾಲೇಜು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಾಯವಾಗುವ ಪಾಠ, ಪಠ್ಯ ಹಾಗೂ ಸಾಮಗ್ರಿಗಳನ್ನು ಒದಗಿಸುವುದು. ಕ್ರೀಡಾ ಕ್ಷೇತ್ರದ ಆಸಕ್ತಿ ಕ್ಷೇತ್ರದ ಕ್ರೀಡಾಪಟುಗಳಿಗೆ ಪುನರ್ಬಲನಕ್ಕೆ ತರಬೇತಿ ಹಾಗೂ ಇತರ ಕಾರ್ಯಕ್ರಮಗಳನ್ನು ಜೋಡಣೆ ಮಾಡುವುದು. ಕ್ರೀಡಾಪಟುಗಳ ಕುಂದು ಕೊರತೆಗಳನ್ನು ನಿವಾರಿಸಲು ಪ್ರಯತ್ನಿಸಲಾಗುವುದು ಎಂದರು.

ಆರೋಗ್ಯ ಸಂಬಂಧಿತ ನೆರವು ಬಯಸಿ ಬರುವ ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಡವ ಹಾಗೂ ಅಸಹಾಯಕ ಜನರಿಗೆ ಸಹಾಯ ಒದಗಿಸುವ ಜೊತೆಗೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರದ ಆಯೋಜನೆ ಮಾಡಿ, ಆರೋಗ್ಯ ವರ್ಧನೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಉದ್ಯೋಗಾವಕಾಶವನ್ನು ಹೆಚ್ಚಿಸಲು, ಮಹಿಳೆಯರಿಗೆ ವೃತ್ತಿಪರ ತರಬೇತಿ ಹಾಗೂ ಮಾಹಿತಿ ಕಾರ್ಯಗಾರವನ್ನು ಆಯೋಜನೆ ಮಾಡಿ, ಅವರನ್ನು ಆರ್ಥಿಕವಾಗಿ ಸ್ವಾವಲಂಭನೆಗೊಳಿಸಲು ಸಬಲೀಕರಣಗೊಳಿಸಲಾಗುವುದು ಎಂದರು.

ಯುವ ಸಮುದಾಯದ ಪ್ರತಿಭಾನ್ವಿತರಿಗೆ ಹಾಗೂ ಶಿಕ್ಷಣ ಪೂರೈಸಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲು ನೆರವು ನೀಡಲು, ವಿವಿಧ ಕಂಪೆನಿಗಳ ನೆರವಿನಿಂದ ಉದ್ಯೋಗ ಮೇಳವನ್ನುನಡೆಸುವುದು. ನೆರೆ, ಮಳೆ, ಬೆಂಕಿ, ಗಾಳಿ ಮುಂತಾದ ಪ್ರಕೃತಿ ವಿಕೋಪದ ತುರ್ತು ಸಂದರ್ಭಗಳಲ್ಲಿ ಜನರಿಗೆ ಅಗತ್ಯ ನೆರವು ಹಾಗೂ ಸೌಲಭ್ಯ ಒದಗಿಸುವುದು ಸೇರಿದಂತೆ ವಿವಿಧ ರೀತಿಯ ಮಾನವೀಯ ಮೌಲ್ಯದ ಕಾರ್ಯಕ್ರಮಗಳನ್ನು ಟ್ರಸ್ಟ್‌ ಆದ್ಯತೆಯ ನೆಲೆಯಲ್ಲಿ ಕೈಗೊಳ್ಳಲಿದ್ದು, ಕ್ಷೇತ್ರದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮೊಳಹಳ್ಳಿ ದಿನೇಶ್‌ ಹೆಗ್ಡೆ ಜಯರತ್ನ ಸೇವಾ ಟ್ರಸ್ಟ್ (ರಿ.) ನ ಟ್ರಸ್ಟಿ ದೀಪಿಕಾ ದಿನೇಶ್ ಹೆಗ್ಡೆ ಮೊಳಹಳ್ಳಿ ಹಾಗೂ ಯೋಜನಾಧಿಕಾರಿ ಗಿರೀಶ್ ಎಂ ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.


Spread the love