ಸಂಪೂರ್ಣ ಮಾಹಿತಿ ಪಡೆದು ವಸ್ತುಗಳನ್ನು ಖರೀದಿಸಿ: ಡಾ. ಎಲ್ ನಾಗರಾಜ್

Spread the love

ಸಂಪೂರ್ಣ ಮಾಹಿತಿ ಪಡೆದು ವಸ್ತುಗಳನ್ನು ಖರೀದಿಸಿ: ಡಾ. ಎಲ್ ನಾಗರಾಜ್

ಉಡುಪಿ: ಗ್ರಾಹಕರನ್ನು ವಂಚಿಸುತ್ತಿದ್ದ ವರ್ಗದಿಂದ ನ್ಯಾಯ ಪಡೆದುಕೊಳ್ಳುವ ಸಲುವಾಗ ಗ್ರಾಹಕರ ವೇದಿಕೆ ಅಸ್ಥಿತ್ವಕ್ಕೆ ಬಂದಿದ್ದು, ಈ ನಿಟ್ಟಿನಲ್ಲಿ ವೇದಿಕೆ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಡಾ. ಎಲ್ ನಾಗರಾಜ್ ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಡುಪಿ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ ಉಡುಪಿ, ಉಡುಪಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಹಾಗೂ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಾರ್ತ್ ಶಾಲೆಯ ಆವರಣದ ಬಳಕೆದಾರರ ವೇದಿಕೆಯಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವಾಸಾರ್ಹ ಸ್ಮಾರ್ಟ್ ಉತ್ಪನ್ನಗಳನ್ನು ಹೇಗೆ ಕೊಂಡುಕೊಳ್ಳಬೇಕು, ಹೇಗೆ ಬಳಸಬೇಕು ಹಾಗೂ ಆ ಉತ್ಪನ್ನಗಳ ಮಾನದಂಡಗಳನ್ನು ಪರಿಶೀಲಿಸಿ ಉತ್ಪನ್ನಗಳನ್ನು ಕೊಂಡುಕೊಳ್ಳಬೇಕು. ಸ್ಪಾರ್ಟ್ ಉತ್ಪನ್ನಗಳು ಕೇವಲ ವಸ್ತುವಾಗಿರದೆ ಅದು ಸೇವೆಗಳಾಗಿವೆ. ಆದ್ದರಿಂದ ಸ್ಮಾರ್ಟ್ ವಸ್ತುಗಳನ್ನು ಖರೀದಿಸುವಾಗ ಅದು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಅರಿತು ಕೊಂಡುಕೊಳ್ಳುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿದ್ದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಸಿವಿ ಶೋಭಾ ಮಾತನಾಡಿ, ತಂತ್ರಜ್ಞಾನಗಳು ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರು ತುಂಬಾ ಜಾಗರೂಕರಾಗಿರಬೇಕು. 1963 ರ ಮಾರ್ಚ್ 15 ರಂದು ವಿಶ್ವ ಗ್ರಾಹಕರ ದಿನವನ್ನಾಗಿ ಆಚರಿಸಲಾಗುತ್ತಿದ್ದರೂ ಅದಕ್ಕೂ ಪೂರ್ವದಲ್ಲಿ ಪ್ರಾಚೀನ ಕಾಲದಲ್ಲಿ ಗ್ರಾಹಕ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ವ್ಯಾಪಾರದಲ್ಲಿ ಮೋಸ ಹಾಗೂ ಸರಕು ಸಾಗಾಣಿಕೆಯಲ್ಲಿ ದೋಷವಿದ್ದರೆ ಅಂತಹದರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವ ಕ್ರಮ ಜಾರಿಯಲ್ಲಿತ್ತು. ಗ್ರಾಹಕರನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೇಲ್ ಆಫ್ ಗೂಡ್ಸ್ ಆಕ್ಟ್, ಕಾಂಟ್ರಾಕ್ಟ್ ಆಕ್ಟ್, ಆಹಾರ ಕಲಬೆರಕೆ ನಿಷೇಧ ಕಾಯ್ದೆ, ಆಹಾರ ಸಂರಕ್ಷಣೆ ಕಾಯ್ದೆಯನ್ನು ಗ್ರಾಹಕರ ಉಪಯೋಗಕ್ಕೆ ಮಾಡಿದ್ದರೂ ಇವುಗಳು ಕಾನೂನಿನ ಚೌಕಟ್ಟಿನಲ್ಲಿದ್ದ ಕಾರಣ ಸಾಮಾನ್ಯ ಜನರನ್ನು ತಲುಪುತ್ತಿರಲಿಲ್ಲ. ಕಾನೂನಿನ ಬಗ್ಗೆ ಅರಿವು ಇದ್ದವರು ಮಾತ್ರ ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದರು. ಈ ನಿಟ್ಟಿನಲ್ಲಿ ಎಲ್ಲಾ ಗ್ರಾಹಕರಿಗೂ ರಕ್ಷಣೆ ನೀಡಲು ಗ್ರಾಹಕರ ರಕ್ಷಣೆಗಾಗಿ ಜಾನ್ ಕೆನಡಿಯವರು ಗ್ರಾಹಕರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯಿಂದ ಹಲವಾರು ಮಂದಿ ಗ್ರಾಹಕರಿಗೆ ನ್ಯಾಯ ಸಿಕ್ಕಿದೆ. ಈ ಕಾಯ್ದೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನಮ್ಮ ಹಕ್ಕುಗಳ ಜೊತೆಗೆ ಜವಾಬ್ದಾರಿಯನ್ನು ಅರಿತಾಗ ದೇಶವಾಗಲಿ ಅಥವಾ ವ್ಯಕ್ತಿಯಾಗಲಿ ಮುಂದುವರಿಯಲು ಸಾಧ್ಯವಾಗುತ್ತದೆ. ಪ್ರತಿಯೊಂದು ವಸ್ತುಗಳನ್ನು ಕೊಳ್ಳುವಾಗ ಆ ವಸ್ತುವಿನ ಒಳಿತು ಕೆಡುಕುಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು. ಅವಶ್ಯಕವಿಲ್ಲದ ವಸ್ತುಗಳನ್ನು ಕೊಂಡುಕೊಳ್ಳುವಲ್ಲಿ ಹೆಚ್ಚು ಒಲವು ತೋರಿದಾಗ ಹೆಚ್ಚು ಮೋಸಹೋಗುತ್ತೇವೆ. ವ್ಯಕ್ತಿಗಳಲ್ಲಿ ಹೊಸ ಟ್ರೆಂಡ್ ಇರುವ ವಸ್ತುಗಳನ್ನು ಕೊಂಡುಕೊಳ್ಳಬೇಕು ಎನ್ನುವ ಮನೋಭಾವನೆ ಇರುವಾಗ ಹೊಸ ಹೊಸ ಉತ್ಪನ್ನಗಳ ಉತ್ಪಾದನೆ ಹೆಚ್ಚಾಗುತ್ತಾ ಹೋಗುತ್ತದೆ. ನಿಯಮಿತ ವಸ್ತುಗಳನ್ನು ಹೊಂದುವ ಮನೋಭಾವನೆ ಉಂಟಾದಾಗ ಉತ್ಪಾದನೆ ಕಡಿಮೆಯಾಗುತ್ತದೆ. ಯಾವುದೇ ವಸ್ತುವಿನ ಲಾಭ ಕೇವಲ ಗ್ರಾಹಕನದ್ದಾಗಿರಬೇಕು. ವಸ್ತುಗಳನ್ನು ಕೊಂಡು ಮೋಸ ಹೋದರೂ, ಹೆಚ್ಚಿನವರು ಬಳಕೆದಾರರ ವೇದಿಕೆ ಮುಂದೆ ಬರುವುದಿಲ್ಲ. ಆದ್ದರಿಂದ ಬಳಕೆದಾರರ ಕಾನೂನುಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು.

ವಂಚಿತರಾದ ಗ್ರಾಹಕರು ನೇರವಾಗಿ ಗ್ರಾಹಕರ ನ್ಯಾಯಾಲಯದಲ್ಲಿ ದೂರು ಸಲ್ಲಿಸಬಹುದು. 5 ಲಕ್ಷ ಬೆಲೆಯ ವರೆಗೆಗಿನ ವಸ್ತುಗಳ ಮೇಲೆ ದೂರುಗಳಿದ್ದಲ್ಲಿ ಯಾವುದೇ ಕೋರ್ಟ್ ಶುಲ್ಕ ಇರುವುದಿಲ್ಲ. 5 ರಿಂದ 10 ಲಕ್ಷದವರೆಗಿನ ವಸ್ತುಗಳ ಮೇಲಿನ ದೂರಿಗೆ 400 ರೂ ಹಾಗೂ 10 ರಿಂದ 20 ಲಕ್ಷದ ವರೆಗಿನ ವಸ್ತುಗಳ ಮೇಲಿನ ದೂರಿಗೆ 500 ರೂ ಶುಲ್ಕ ಪಾವತಿಸಬೇಕಾಗುತ್ತದೆ. ಗ್ರಾಹಕರ ನ್ಯಾಯಾಲಯದಲ್ಲಿ ಇತ್ಯರ್ಥವಾದ ದೂರುಗಳ ವಿಚಾರವಾಗಿ ರಾಜ್ಯ ಆಯೋಗ ಮತ್ತು ರಾಷ್ಟ್ರೀಯ ಆಯೋಗದಲ್ಲಿ ಮೇಲ್ಮನವಿ ಸಲ್ಲಿಸಬಹುದು. ಖರೀದಿಸಿದ ವಸ್ತುಗಳ ವಾರಂಟಿ ಅವಧಿ ಮುಗಿಯುವ ಒಳಗೆ ವಸ್ತುಗಳಲ್ಲಿ ದೋಷ ಕಂಡುಬಂದಲ್ಲಿ ವ್ಯಾಪಾರಸ್ಥರಿಗೆ ದೂರು ಸಲ್ಲಿಸಬಹುದು. ವ್ಯಾಪರಸ್ಥರು ಸರಿಯಾದ ಕ್ರಮ ಕೈಗೊಳ್ಳದಿದ್ದಲ್ಲಿ ಅಥವಾ ಗ್ರಾಹಕರು ನೀಡಿದ ದೂರನ್ನು ನಿರ್ಲಕ್ಷಿಸಿದಲ್ಲಿ ವಸ್ತುಗಳನ್ನು ಖರೀದಿ ಮಾಡಿದ 2 ವರ್ಷಗಳ ಅವಧಿಯ ಒಳಗೆ ದೂರು ಸಲ್ಲಿಸಬೇಕಾಗುತ್ತದೆ. ಹಿರಿಯ ನಾಗರಿಕರು ಮೆಡಿಕಲ್ ಕ್ಲೈಮ್ ಮಾಡುವಾಗ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ಬಳಕೆ ದಾರರ ವೇದಿಕೆಯಿಂದ ಹೆಚ್ಚು ಹೆಚ್ಚು ಅನುಕೂಲವಾಗುವಂತಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಬಳಕೆದಾರರ ವೇದಿಕೆ ಮತ್ತು ಉಡುಪಿ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ವಿಶ್ವಸ್ಥ ಎಚ್ ಶಾಂತರಾಜ ಐತಾಳ ಅವರು, 1986ರಲ್ಲಿ ದೇಶದಲ್ಲಿ ಗ್ರಾಹಕರ ರಕ್ಷಣಾ ಕಾನೂನು ಜಾರಿಗೆ ಬಂದಿದ್ದರೂ 1980ರ ಅವಧಿಯಲ್ಲೇ ಉಡುಪಿಯಲ್ಲಿ ಡಾ. ಕೆಪಿಎಸ್ ಕಾಮತ್ ನೇತೃತ್ವದಲ್ಲಿ ಗ್ರಾಹಕರ ರಕ್ಷಣಾ ಕಾನೂನು ಜಾರಿಗೆ ಬಂದಿದ್ದು, ಹೆಮ್ಮೆಯ ವಿಚಾರವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.ಈ ಬಾರಿಯ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಪರಿಶೀಲಿಸಿ ಮತ ಚಲಾಯಿಸುವಂತೆ ಸಲಹೆ ನೀಡಿದ ಅವರು ಈ ಬಗ್ಗೆ ತಮ್ಮ ತಮ್ಮ ಸುತ್ತ ಮುತ್ತಲಿನಲ್ಲಿರುವ ಜನರಿಗೂ ಮತದಾನದ ಜಾಗೃತಿ ಮೂಡಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಡಿ.ಆರ್.ಚೌಗುಲಾ ಆಯ್ದ ಹತ್ತು ಶಾಲೆಗಳ ಗ್ರಾಹಕ ಕ್ಲಬ್ಗಳಿಗೆ ಅನುದಾನ ವಿತರಣೆ ಮಾಡಿದರು. ಉಡುಪಿ ಜಿಲ್ಲಾ ಬಳಕೆದಾರರ ವೇದಿಕೆ ಮತ್ತುಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಕೆ.ದಾಮೋದರ ಐತಾಳ ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿದ್ದರು. ಲಕ್ಷ್ಮೀ ಬಾಯಿ ಕಾರ್ಯಕ್ರಮ ನಿರೂಪಿಸಿದರು, ಪ್ರೊ.ಕೆ ನಾರಾಯಣನ್ ವಂದಿಸಿದರು.


Spread the love