ಸಚಿವ ರೈ ಮೇಲಿನ ಹರಿಕೃಷ್ಣ ಬಂಟ್ವಾಳ್ ಆರೋಪ ಸುಳ್ಳು: ರಾಜೇಶ್ ರಾವ್

Spread the love

ಸಚಿವ ರೈ ಮೇಲಿನ ಹರಿಕೃಷ್ಣ ಬಂಟ್ವಾಳ್ ಆರೋಪ ಸುಳ್ಳು: ರಾಜೇಶ್ ರಾವ್

ಮಂಗಳೂರು: ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಜನಾರ್ಧನ ಪೂಜಾರಿ ವಿರುದ್ದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ಅವಹೇಳನಕಾರಿಯಾದ ಮಾತುಗಳನ್ನು ಆಡಿದ್ದಾರೆ ಎಂದು ಹರಿಕೃಷ್ಣ ಬಂಟ್ವಾಳ್ ಅವರು ಮಾಡಿರುವ ಆರೋಪಗಳು ಸತ್ಯಕ್ಕೆ ದೂರವಾದವು ಹಾಗೂ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ರಾಜೇಶ್ ರಾವ್ ಅವರು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ ಅವರು ಹರಿಕೃಷ್ಣ ಬಂಟ್ವಾಳ್ ಅವರು ನನ್ನ ಮದುವೆ ಸತ್ಕಾರ ಕೂಟದಲ್ಲಿ ಜನಾರ್ದನ ಪೂಜಾರಿಯವರ ವಿರುದ್ದ ರೈ ಯವರು ಅವಹೇಳನ ಪದಗಳನ್ನು ಬಳಸಿದ್ದಾರೆ ಎನ್ನುವುದು ಶುದ್ದ ಸುಳ್ಳು. ನನ್ನ ಮದುವೆ ಸತ್ಕಾರ ಕೂಟ ಸಮಾರಂಭ ಸುರತ್ಕಲ್ ಬಂಟರ ಭವನದಲ್ಲಿ ನಡೆದಿದ್ದು, ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದರು.

ಹರಿಕೃಷ್ಣ ಬಂಟ್ವಾಳ್ ಸುದ್ದಿಗೋಷ್ಟಿಯಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿದ್ದು, ಅದಕ್ಕಾಗಿ ಸ್ಪಷ್ಟೀಕರಣ ನೀಡುವ ಉದ್ದೇಶದಿಂದ ಮಾಧ್ಯಮದ ಮುಂದೆ ಬಂದಿದ್ದೇನೆ ಎಂದ ರಾಜೇಶ್ ನನಗೆ ತಿಳಿದಿರುವ ಮಟ್ಟಿಗೆ ಸಚಿವ ರೈಯವರಿಗೆ ಜನಾರ್ದನ ಪೂಜಾರಿಯವರ ಬಗ್ಗೆ ಅಪಾರ ಗೌರವಿದ್ದು, ದೇಶ ಕಂಡ ಕರಾವಳಿಯ ಪ್ರಭಾವಿ ನಾಯಕರಲ್ಲಿ ಅವರು, ಆಸ್ಕರ್ ಪೇರ್ನಾಂಡಿಸ್ ಮತ್ತು ವೀರಪ್ಪ ಮೊಯ್ಲಿ ಪ್ರಮುಖರು. ಅವರು ನನ್ನ ಕಾರ್ಯಕ್ರಮದಲ್ಲಿ ಆ ರೀತಿಯಾಗಿ ಮಾತನಾಡಿದ್ದರೆ ಅದು ಯಾರ ಮೂಲಕವಾದರೂ ನನಗೆ ತಿಳಿಯಬೇಕಿತ್ತು. ವಿವಾಹದ ಕಾರ್ಯಕ್ರಮವಾಗಿ ಸುಮಾರು ಐದು ತಿಂಗಳ ಬಳಿಕ ಈ ವಿಚಾರ ಪ್ರಸ್ತಾಪಿಸಿರುವ ಉದ್ದೇಶ ಯಾಕೆ ಎನ್ನುವುದು ತಿಳಿದಿಲ್ಲ ಎಂದರು.

ಕಾರ್ಯಕ್ರಮದ ಸಂಜೆ 7 ಗಂಟೆಗೆ ಆರಂಭವಾಗಿ ಸುಮಾರು 10 ಗಂಟೆಯ ವೇಳೆಗೆ ಮುಗಿದಿದೆ. ಕೊನೆ ಹಂತದಲ್ಲಿ ಸಚಿವ ರೈ ಕಾರ್ಯಕ್ರಮಕ್ಕೆ ಬಂದು ಆಶೀರ್ವದಿಸಿ ಊಟ ಮಾಡಿ 15 -20 ನಿಮಿಷಗಳಲ್ಲೇ ವಾಪಾಸು ತೆರಳಿದ್ದಾರೆ ಹಾಗಿರುವಾಗ ಅಂತಹ ಪ್ರಸಂಗ ಅಲ್ಲಿ ನಡೆಯಲು ಸಾಧ್ಯವೇ ಇಲ್ಲ ಎಂದರು.

ಕಾಂಗ್ರೆಸಿನ ಹಿರಯ ಮುಖಂಡ ಆಸ್ಕರ್ ಫೆರ್ನಾಂಡಿಸ್ ಕುರಿತು ಕೂಡ ಬಂಟ್ವಾಳ್ ಕೇವಲವಾಗಿ ಮಾತಾನಾಡಿರುವುದು ಬೇಸರವಾಗಿದೆ. ದೇಶದ ಪ್ರಭಾವಿ ನಾಯಕರಲ್ಲಿ ಅವರೂ ಒಬ್ಬರು. ಮಾತ್ರವಲ್ಲದೆ ಅವರು ನಮ್ಮ ಕುಟುಂಬದ ಸ್ನೇಹಿತರು ಕೂಡ. ಆಸ್ಕರ್ ಅವರ ಪತ್ನಿಯ ಬಗ್ಗೆ ಬಂಟ್ವಾಳ್ ಅವಹೇಳನಕಾರಿಯಾಗಿ ಮಾತನಾಡಿರುವುದಕ್ಕೆ ಯೂಟ್ಯೂಬಿನಲ್ಲಿ ಸಾಕ್ಷ್ಯ ಇದ್ದು, ಆದರೆ ರೈ ಯವರು ಮಾತನಾಡಿರುವ ಬಗ್ಗೆ ಸಾಕ್ಷ್ಯ ಎಲ್ಲಿದೆ ಎಂದು ಪ್ರಶ್ನಿಸಿದರು. ಅರುಣ್ ಕುವೆಲ್ಲೊ ಅವರು ಇದರ ಮಾಹಿತಿ ನೀಡಿದ್ದು ಎಂದ ಬಂಟ್ವಾಳ್ ಪತ್ರಿಕಾಗೋಷ್ಟಿ ನಡೆಸುವಾಗ ಅರುಣ್ ಕುವೆಲ್ಲೋ ಅವರನ್ನು ಯಾವ ಕಾರಣಕ್ಕೆ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಲಿಲ್ಲ ಎಂದರು.


Spread the love