ಸಟ್ವಾಡಿ ಮನೆಗಳ್ಳತನ – ದಂಪತಿಗಳನ್ನು ಬಂಧಿಸಿದ ಕುಂದಾಪುರ ಗ್ರಾಮಾಂತರ ಪೊಲೀಸರು

Spread the love

ಸಟ್ವಾಡಿ ಮನೆಗಳ್ಳತನ – ದಂಪತಿಗಳನ್ನು ಬಂಧಿಸಿದ ಕುಂದಾಪುರ ಗ್ರಾಮಾಂತರ ಪೊಲೀಸರು

ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಸಮೀಪದ ಸಟ್ವಾಡಿಯ ಮನೆಯೊಂದರಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಬಂಧಿಸುವಲ್ಲಿ ಕುಂದಾಪುರ ಗ್ರಾಮಾಂತರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಉಪ್ಪುಂದ ಶಾಲೆಬಾಗಿಲು ನಿವಾಸಿಗಳಾದ ಶ್ರೀಧರ(32) ಹಾಗೂ ಪತ್ನಿ ಸ್ವಾತಿ(26) ಬಂಧಿತ ಆರೋಪಿಗಳು.

ಸಟ್ವಾಡಿ ನಿವಾಸಿ ದಿನಾಕರ್ ಶೆಟ್ಟಿ ಮತ್ತು ಮನೆಯವರು ಭಾನುವಾರ ರಾತ್ರಿ ಕೋಟೇಶ್ವರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆಯಲ್ಲಿ ಕಳ್ಳತನ ನಡೆದಿತ್ತು. ಮನೆಯ ಎದುರಿನ ಬಾಗಿಲು ಒಡೆದು ಒಳಪ್ರವೇಶಿಸಿದ ಕಳ್ಳರು ಕವಾಟಿನಲ್ಲಿದ್ದ 1 ವಜ್ರದ ಕರಿಮಣಿ ಸರ, 4 ಚಿನ್ನದ ಬಳೆಗಳು, 1 ಚಿನ್ನದ ಸರ, 36,000 ನಗದು ಸೇರಿದಂತೆ ಒಟ್ಟು 3,56,000 ರೂ. ಮೌಲ್ಯದ ನಗದು ಹಾಗೂ ಸೊತ್ತು ಗಳನ್ನು ದೋಚಿ ಪರಾರಿಯಾಗಿದ್ದರು. ದಿನಾಕರ್ ಶೆಟ್ಟಿ ಕಾರ್ಯಕ್ರಮ ಮುಗಿಸಿ ತಡರಾತ್ರಿ ಮನೆಗೆ ಬಂದು ನೋಡುವಾಗ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿತ್ತು. ಮರುದಿನ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಕುಂದಾಪುರ ಗ್ರಾಮಾಂತರ ಠಾಣೆಯ ಪಿಎಸ್ಐ ಶ್ರೀಧರ್ ನಾಯ್ಕ್ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಕಳ್ಳತನ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಿಗೆ ತನಿಖೆ ಕೈಗೆತ್ತಿಕೊಂಡರು. ದಿನಾಕರ್ ಶೆಟ್ಟಿಯವರ ಮನೆಯಲ್ಲಿ ಕಳ್ಳತನ ನಡೆದ ಬಳಿಕ ಮನೆಗೆಲಸ ಮಾಡಿಕೊಂಡಿದ್ದ ದಂಪತಿಗಳು ನಾಪತ್ತೆಯಾಗಿದ್ದರು. ಮನೆಗೆಲಸದವರ ಮೇಲೆ ಸಂಶಯ ವ್ಯಕ್ತಪಡಿಸಿದ ಪೊಲೀಸರು ಪತ್ತೆಗಾಗಿ ಬಲೆ ಬೀಸಿದ್ದರು. ಆರೋಪಿಗಳು ಊರಿನಿಂದ ಪರಾರಿಯಾಗಲು ಯತ್ನ ನಡೆಸುತ್ತಿರುವಾಗಲೇ ಮಂಗಳವಾರ ಬೆಳಗ್ಗಿನ ಜಾವ ಖಚಿತ ಮಾಹಿತಿಯ ಮೇರೆಗೆ ಕುಂದಾಪುರ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಕಳವಾದ ಚಿನ್ನಾಭರಣ ಹಾಗೂ 20,070 ರಷ್ಟು ನಗದನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳಾದ ಶ್ರೀಧರ್ ಹಾಗೂ ಸ್ವಾತಿ ದಿನಾಕರ್ ಶೆಟ್ಟಿ ಮನೆಯಲ್ಲಿ ಕಳೆದ ನಾಲ್ಕು ತಿಂಗಳ ಹಿಂದಷ್ಟೆ ಮನೆಗೆಲಸಕ್ಕೆ ಸೇರಿಕೊಂಡಿದ್ದರು. ದಿನಾಕರ್ ಶೆಟ್ಟರ ಮನೆಯ ಸಮೀಪದಲ್ಲಿನ ಶೆಡ್ವೊಂದರಲ್ಲಿ ವಾಸಿಸುತ್ತಿದ್ದು, ಸ್ವಾತಿ ಮನೆಗೆಲಸ ಮಾಡಿಕೊಂಡಿದ್ದರೆ, ಶ್ರೀಧರ್ ತೋಟ ಹಾಗೂ ಇನ್ನಿತರ ಕೆಲಸಗಳನ್ನು ನಿರ್ವಹಿಸುತ್ತಿದ್ದನು ಎನ್ನಲಾಗಿದೆ.

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಲಕ್ಷ್ಮಣ ನಿಂಬರ್ಗಿ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಬಿ.ಪಿ ದಿನೇಶ್ ಕುಮಾರ್, ಸಿಪಿಐ ಡಿ.ಆರ್ ಮಂಜಪ್ಪ ಸಹಕಾರದಲ್ಲಿ ಕುಂದಾಪುರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಶ್ರೀಧರ್ ನಾಯ್ಕ್, ಸಿಬ್ಬಂದಿಗಳಾದ ಸಂತೋಷ್ ಕುಮಾರ್, ಶ್ರೀಧರ, ಸುಜಿತ್ ಕುಮಾರ್, ಪದ್ಮಾವತಿ, ಕುಮಾರಿ ದೀಪಾ ಹಾಗೂ ಶಿವಾನಂದ್ ಕಾರ್ಯಾಚರಣೆಯಲ್ಲಿದ್ದರು.


Spread the love