ಸೆ 7 ರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸೇವೆಗಳ ಆರಂಭ

Spread the love

ಸೆ 7 ರಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದಲ್ಲಿ ಸೇವೆಗಳ ಆರಂಭ

ಕುಂದಾಪುರ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಸೋಮವಾರದಿಂದ ಎಲ್ಲಾ ಸೇವೆಗಳು ಆರಂಭವಾಗಲಿದೆ ಎಂದು ದೇಗುಲದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ ತಿಳಿಸಿದ್ದಾರೆ.

ದೇಶಾದ್ಯಾಂತ ಕೊರೊನಾ ಕಾರಣದಿಂದ ಲಾಕ್ ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಭಕ್ತರಿಗೆ ದರ್ಶನ ಹಾಗೂ ಪೂಜಾ ಸೇವೆಯನ್ನು ನಿರ್ಬಂಧಿಸಲಾಗಿತ್ತು. ನಂತರ ದರ್ಶನಕ್ಕೆ ಅವಕಾಶ ನೀಡಿದ್ದರೂ ಸೇವೆ ಹಾಗೂ ತೀರ್ಥ-ಪ್ರಸಾದಕ್ಕೆ ನಿರ್ಬಂಧ ಮುಂದುವರೆಸಲಾಗಿತ್ತು. ಇದೀಗ 4 ನೇ ಹಂತದ ನಿರ್ಬಂಧ ಸಡಿಲಿಕೆಯಲ್ಲಿ ದೇವಸ್ಥಾನದಲ್ಲಿ ಎಲ್ಲಾ ರೀತಿಯ ಸೇವೆಗಳಿಗೆ ಅವಕಾಶ ನೀಡಲಾಗಿದೆ.

ನಿರ್ಬಂಧ ಸಡಿಲಿಕೆಯ ನಂತರವೂ ದೇಗುಲಕ್ಕೆ ಬರುವ ಭಕ್ತರ ಹಿತರಕ್ಷಣೆಗಾಗಿ, ಸರ್ಕಾರದ ಎಲ್ಲಾ ಮುನ್ನೆಚ್ಚರಿಕೆ ಹಾಗೂ ನಿಯಮಾವಳಿಗಳ ಪಾಲನೆಗೆ ಒತ್ತು ನೀಡಲಾಗಿದೆ.

ಕ್ಷೇತ್ರದ ಪ್ರಮುಖ ಸೇವೆಯಿಂದ ಚಂಡಿಕಾ ಹೋಮ ಸೋಮವಾರದಿಂದಲೇ ಆರಂಭವಾಗಲಿದೆ. ಈ ವೇಳೆ ನಿಯಮಿತ ಭಕ್ತರಿಗೆ ಮಾತ್ರ ಯಜ್ಞಶಾಲೆಗೆ ಪ್ರವೇಶ ಅವಕಾಶ ದೊರಕಲಿದೆ.

ಕುಂಕುಮಾರ್ಚನೆ, ತುಪ್ಪದ ಆರತಿ, ಭಸ್ಮಾರ್ಚನೆ, ಲಾಡು ಪ್ರಸಾದ, ಅಲಂಕಾರ ಪೂಜೆ, ತುಲಾಭಾರ, ಬೆಳ್ಳಿ, ಚಿನ್ನದ ರಥೋತ್ಸವ ಸೇರಿದಂತೆ ಎಲ್ಲಾ ಸೇವೆಗಳು ಪ್ರಾರಂಭವಾಗಲಿದೆ.

ಭಕ್ತರಿಗೆ ಮಧ್ಯಾಹ್ನದ ಪ್ರಸಾದ ಊಟಕ್ಕೆ ಮಾತ್ರ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸದ್ಯಕ್ಕೆ ರಾತ್ರಿಯ ಊಟ ಇಲ್ಲ ಎಂದು ಸುತ್ತುಗುಂಡಿ ಮಾಹಿತಿ ನೀಡಿದ್ದಾರೆ.


Spread the love