ಸೋದೆ ಮಠದಿಂದ ಕುಂಬ್ರಿ ಗ್ರಾಮ ದತ್ತು ಸ್ವೀಕಾರ

Spread the love

ಸೋದೆ ಮಠದಿಂದ ಕುಂಬ್ರಿ ಗ್ರಾಮ ದತ್ತು ಸ್ವೀಕಾರ

ಉಡುಪಿ: ಕಳೆದ ವಾರ ಸುರಿದ ಭಾರಿ ಮಳೆಗೆ ಬೇಡ್ತಿ ನದಿ ಉಕ್ಕಿ ಹರಿದ ಪರಿಣಾಮ ಸಂಪೂರ್ಣ ಮನೆ ಕಳೆದುಕೊಂಡು ಬೀದಿಯಲ್ಲಿದ್ದ ಗ್ರಾಮವೊಂದನ್ನು ದತ್ತು ಪಡೆದು ಗ್ರಾಮದ ಪುನರಾಭಿವೃದ್ಧಿಗೆ ಸೋದೆ ವಾದಿರಾಜ ಮಠ ನಿರ್ಧರಿಸಿದೆ.

ಸೋದೆ ಮಠದ ಯತಿಗಳಾದ ವಿಶ್ವವಲ್ಲಭ ಶ್ರೀಪಾದರ ಆಶಯದಂತೆ ಮನೆ, ಮನೆಯೊಳಗಿನ ವಸ್ತುಗಳನ್ನು ಅಕ್ಷರಶಃ ಕಳೆದುಕೊಂಡು ಅನಾಥ ಭಾವದಲ್ಲಿರುವ ಯಲ್ಲಾಪುರ ತಾಳೂಕು ಕಂಪ್ಲಿ ಗ್ರಾಮ ಪಂಚಾಯತ್ ವ್ಯಾಫ್ತಿಯ ಸೋಮನಳ್ಳಿ ಬಳಿಯ ಕುಂಬ್ರಿ ಊರಿನ ಆರು ಕುಣಬಿ ಕುಟುಂಬಗಳಿಗೆ ಮಠ ಆಸರೆಯಾಗಿ ನಿಲ್ಲಲು ತೀರ್ಮಾನಿಸಿದೆ.

ಪವಿತ್ರ ಚಾತುರ್ಮಾಸ ವೃತದಲ್ಲಿರುವ ಶ್ರೀಗಳು ಆರೂ ಕುಟುಂಬಗಳನ್ನೂ ದತ್ತು ಪಡೆದು ಅವರು ಕಳೆದುಕೊಂಡ ಬದುಕನ್ನ ಪುನಃ ಕಟ್ಟಿಕೊಡಲು ಸೂಚಿಸಿದ್ದಾರೆ ಎಂದು ಮಠದ ಆಡಳಿತಾಧಿಕಾರಿ ಮಾಣಿಕ್ಯ ಉಪಾಧ್ಯಯ ತಿಳಿಸಿದ್ದಾರೆ.

ಕೃಷಿಯಲ್ಲಿ ತೊಡಗಿಸಿಕೊಂಡ ಆರು ಕುಟುಂಬಗಳ ಮೂವತ್ತೈದಕ್ಕೂ ಅಧಿಕ ಕುಣಬಿ ಸಮುದಾಯ ಜನರು ಕಳೆದ ವಾರದಿಂದ ಕಂಗಾಲಾಗಿತ್ತು. ದಾನಿಗಳು, ಸಂಘ ಸಂಸ್ಥೆಗಳು, ಸ್ಥಳೀಯ ಪಂಚಾಯ್ತಿ ಸಹಕಾರ ನೀಡಿದ್ದರೂ ಬಿದ್ದು ಹೋದ ಮನೆ ಕಟ್ಟಿಕೊಳ್ಳುವ ಬಗ್ಗೆ ಚಿಂತಿತರಾಗಿದ್ದರು. ಇದೇ ವೇಳೆ ಮಠದ ಪ್ರತಿನಿಧಿಯಾಗಿ ಯಲ್ಲಾಪುರ ತಹಸೀಲ್ದಾರರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ ತುಂಬ್ರಿ ಗ್ರಾಮಕ್ಕೆ ಭೇಟಿ ನೀಡಿ ಶ್ರೀಗಳಿಗೆ ಚಿತ್ರಣ ನೀಡಿದ ಬಳಿಕ ಈ ಸಂಕಲ್ಪ ಮಾಡಿದ್ದಾರೆ ಎಂದೂ ವಿವರಿಸಿದ್ದಾರೆ.

ಪುರುಷ ಗಣಪತಿ ಕುಣಬಿ, ಗಣಪತಿ ಅರ್ಜುನ ಕುಣಬಿ, ಗೋಪಾಲ ಗಣಪು ಕುಣಬಿ, ನಾಗೇಶ ನಾರಾಯಣ ಕುಣಬಿ, ಶಿವು ನಾರಾಯಣ ಕುಣಬಿ, ಕೇಶವ ಕುಣಬಿ ಕುಟುಂಬಗಳಿಗೆ ತೀವ್ರ ತೊಂದರೆ ಆಗಿದೆ. ಇದೇ ಊರಿನ ಭುವನೇಶ್ವರಿ ಜೋಶಿ ಅವರಿಗೆ ಸಂಬಂಧಿತ ಮನೆ ಕೂಡ ಬಿದ್ದಿದೆ. ಈ ಕುಟುಂಬಗಳಿಗೆ ನೆರವಾಗಲು ಮಠ ಮುಂದಾಗಿದೆ. ತಕ್ಷಣಕ್ಕೆ ಮಳೆ ಕೂಡ ಇರುವದರಿಂದ ಸ್ಥಳೀಯ ಮಂಚಿಕೇರಿ ಸೇವಾ ಸಹಕಾರಿ ಸಂಘದ ಮೂಲಕ ದಿನಸಿ ಹಾಗೂ ತಾತ್ಕಾಲಿಕ ನೆಲ ಹಾಸಲಿಗೆ ಕಲ್ಲು ಒದಗಿಸಲು ಮಠ ಚಿಂತಿಸಿದೆ. ದೀಪಾವಳಿಯ ಬಳಿಕ ಇನ್ನೊಮ್ಮೆ ನೆರೆ ಬಂದರೂ ಸಮಸ್ಯೆ ಆಗದಂತೆ ಸ್ಥಳ ನೋಡಿ ತಾಲೂಕು ಆಡಳಿತದ ಜೊತೆ ಸಮಾಲೋಚನೆ ನಡೆಸಿ ಶಾಶ್ವತ ಮನೆ ನಿರ್ಮಾಣ ಕೂಡ ಮಠ ಮಾಡಿಕೊಡಲು ಸಿದ್ದವಿದೆ ಎಂದೂ ಮಾಣಿಕ್ಯ ಉಪಾಧ್ಯಾಯ ತಿಳಿಸಿದ್ದಾರೆ.

ನೊಂದವರಿಗೆ ಸ್ಪಂದಿಸುವುದ ಮಠದ ಕರ್ತವ್ಯ ಎಂದು ಭಾವಿಸಿ ಈ ತೀರ್ಮಾನ ಕೈಗೊಂಡಿದ್ದೇವೆ. ಕೂಲಿ, ಕೃಷಿಯನ್ನು ನಂಬಿಕೊಂಡು ಬಡತನದಲ್ಲಿ ಬದುಕನ್ನು ಮುಗ್ದತೆ, ಪ್ರಾಮಾಣಿಕತೆಯಲ್ಲಿ. ತಾತ್ಕಾಲಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ಕಲ್ಪಿಸುವುದು ನಮ್ಮ ಸಂಕಲ್ಪವಾಗಿದೆ ಎಂದು ಸೋದೆ ಸ್ವಾಮೀಜಿ ತಿಳಿಸಿದ್ದಾರೆ.


Spread the love