ಹಿಂಜಾವೇ ಮುಖಂಡ ಸತೀಶ್ ಪೂಜಾರಿ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಿ ಡಿಸಿ ಸ್ವರೂಪ ಟಿ.ಕೆ. ಆದೇಶ

Spread the love

ಹಿಂಜಾವೇ ಮುಖಂಡ ಸತೀಶ್ ಪೂಜಾರಿ ಉಡುಪಿ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧಿಸಿ ಡಿಸಿ ಸ್ವರೂಪ ಟಿ.ಕೆ. ಆದೇಶ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ನಿಟ್ಟಿನಲ್ಲಿ ಹಿಂದೂ ಜಾಗರಣ ವೇದಿಕೆಯ ಮುಖಂಡ, ರೌಡಿ ಶೀಟರ್ ಸತೀಶ್ ಪೂಜಾರಿ ದಾವಣಗೆರೆ ಎಂಬಾತನಿಗೆ ಜು.7ರಿಂದ ಸೆ.7 ರವರೆಗೆ 2 ತಿಂಗಳ ಕಾಲ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ಹಿಂದೂ ಜಾಗರಣ ವೇದಿಕೆ ಉಡುಪಿ ಜಿಲ್ಲೆ ವತಿಯಿಂದ ರಾಜ್ಯ ಸರಕಾರದ ವಿರುದ್ಧ ಜು.7ರಂದು ಮಣಿಪಾಲ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಗೆ ರೌಡಿ ಶೀಟರ್ ಸತೀಶ್ ಪೂಜಾರಿಯನ್ನು ಪ್ರಮುಖ ಭಾಷಣಕಾರನಾಗಿ ಕರೆಸಿ ಸಮಾಜದ ಸ್ವಾಸ್ತ್ಯ ಕದಡುವ ಸಾಧ್ಯತೆ ಇರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.

ಅಲ್ಲದೆ ಕಾರ್ಕಳ, ಕುಂದಾಪುರ ತಾಲೂಕುಗಳಲ್ಲಿಯೂ ಮುಂದಿನ ದಿನಗಳಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡು ಅಲ್ಲಿಯೂ ಸತೀಶ ಪೂಜಾರಿಯನ್ನು ಕರೆಸಿ ಕೋಮು ಪ್ರಚೋಚಕ ಭಾಷಣ ಮಾಡಿಸಿ ಗಲಾಬೆ ಎಬ್ಬಿಸುವ ಹುನ್ನಾರ ಮಾಡಿರುವುದು ತಿಳಿದು ಬಂದಿದೆ.

ಇವರ ಕೋಮು ಪ್ರಚೋದಕ ಭಾಷಣಗಳಿಂದ ಇನ್ನೊಂದು ಸಮುದಾಯದ ಜನರನ್ನು ಕೆರಳಿಸಿ ಶಾಂತಿ ಕದಡುವ ಸಾಧ್ಯತೆಗಳು ಇರುವುದರಿಂದ ಸತೀಶ್ ಪೂಜಾರಿಗೆ ಉಡುಪಿ ಜಿಲ್ಲೆಯಾದ್ಯಂತ ಪ್ರವೇಶವನ್ನು ನಿರ್ಬಂಧಿಸುವಂತೆ ಜಿಲ್ಲಾ ಪೊಲೀಸ್‌ ಅಧೀಕ್ಷಕರು ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು.

ಉಡುಪಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಎಡೆಮಾಡಿಕೊಡದಂತೆ ಸೂಕ್ತ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲು ಎಸ್ಪಿಯ ವರದಿಯನ್ನು ಆಧರಿಸಿ ಮುಂಜಾಗೃತ ಕ್ರಮವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ರ ಕಲಂ 163 ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶ ಹೊರಡಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments