ಹುಟ್ಟು ಹಬ್ಬ ಸಂಭ್ರಮದ ಮರು ದಿನವೇ ಬಾಲಕ ಸಾವು!

Spread the love

ಹುಟ್ಟು ಹಬ್ಬ ಸಂಭ್ರಮದ ಮರು ದಿನವೇ ಬಾಲಕ ಸಾವು!

  • ಅಕ್ಕನ ಸಾವಿನ ದುರಂತದ ಒಂದು ವರ್ಷದೊಳಗೆ ತಮ್ಮನ ಸಾವು.
  • ಪೋಷಕರ ಒಡಲ ನೋವು ಎಂತವರ ಹೃದಯವನ್ನು ಕರಗಿಸುತ್ತಿದೆ

ಕುಂದಾಪುರ: ಮನೆಯಿಂದ ಶಾಲೆಗೆ ಹೊರಟಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿಯೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ ಬೆಳಿಗ್ಗೆ ತಲ್ಲೂರಿನಲ್ಲಿ ಸಂಭವಿಸಿದೆ.

ಪ್ರಥ್ವಿರಾಜ್ ಶೆಟ್ಟಿ

ಪ್ರಥ್ವಿರಾಜ್ ಶೆಟ್ಟಿ ಮತ್ತು ಅಕ್ಕ ಅನುಶ್ರೀ

ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅರುಣ್ ಶೆಟ್ಟಿ ಹಾಗೂ ಹಕ್ಲಾಡಿ ಪೌಢಶಾಲೆಯ ಶಿಕ್ಷಕಿ ಭಾರತಿ ದಂಪತಿಗಳ ಪುತ್ರ, ಹಟ್ಟಿಯಂಗಡಿ ಶ್ರೀ ಸಿದ್ದಿವಿನಾಯಕ ವಸತಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಪ್ರಥ್ವಿರಾಜ್ ಶೆಟ್ಟಿ (13) ಮೃತ ಬಾಲಕ.

ಶನಿವಾರ ಬೆಳಿಗ್ಗೆ ಸುಮಾರು 9 ಗಂಟೆಯ ವೇಳೆ ಶಾಲೆಯ ಬಸ್ಸಿಗೆ ತೆರಳಲು ಮನೆಯಿಂದ ಪೋಷಕರಿಗೆ ಟಾಟಾ ಹೇಳಿ ಓಡುತ್ತಲೆ ಹೋಗಿದ್ದ ಪ್ರಥ್ವಿರಾಜ್ ಆಕಸ್ಮಿಕವಾಗಿ ಕುಸಿದು ಬಿದ್ದಿದ್ದನು. ಪುತ್ರ ಬಿದ್ದಿರುವುದನ್ನು ನೋಡಿ ದೌಡಾಯಿಸಿದ ತಂದೆ, ಮಗನನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಮೃತರಾಗಿರುವ ಮಾಹಿತಿ ನೀಡಿದ್ದಾರೆ.

ಪ್ರಥ್ವಿರಾಜ್ ಅವರ ಮರಣಕ್ಕೆ ಹೃದಯಾಘಾತ ಆಗಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ಸಾವಿನ ನಿಜ ಕಾರಣ ತಿಳಿಯಬೇಕಾಗಿದೆ.

ವರ್ಷದೊಳಗೆ ಎರಡು ದುರಂತ:
ಓರ್ವ ಪುತ್ರಿ ಹಾಗೂ ಪುತ್ರರನ್ನು ಹೊಂದಿದ್ದ, ಅರುಣ್ ಶೆಟ್ಟಿ ಹಾಗೂ ಭಾರತಿ ದಂಪತಿಗಳಿಗೆ ಪ್ರಥ್ವಿರಾಜ್ ಸಾವು ಎರಡನೇ ದುರಂತ. ಕಳೆದ ವರ್ಷ ಅಕ್ಟೋಬರ್ 27 ರಂದು 8ನೇ ತರಗತಿಯಲ್ಲಿ ಓದುತ್ತಿದ್ದ ಪುತ್ರಿ ಅನುಶ್ರೀ (14) ಅವರು ಮನೆಯ ಮೊದಲ ಮಹಡಿಯಲ್ಲಿ ಓದುತ್ತಿದ್ದಾಗ, ಇದೇ ರೀತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರೂ ಯಾವುದೇ ಪ್ರಯೋಜನವಾಗದೆ ಆಕೆ ಮೃತಪಟ್ಟಿದ್ದರು.

ಶುಕ್ರವಾರ ಹುಟ್ಟು ಹಬ್ಬದ ಸಂಭ್ರಮ:
ಅ.20 ಪ್ರಥ್ವಿರಾಜ್ ಶೆಟ್ಟಿಯವರ ಹುಟ್ಟು ಹಬ್ಬ. ಕಳೆದ ವರ್ಷ ತಮ್ಮನ ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದ ಅಕ್ಕ ಅನುಶ್ರೀ, ಸಂಭ್ರಮ ಮುಗಿದ ಒಂದು ವಾರದ ಬಳಿಕ ಇಹಲೋಕ ತ್ಯಜಿಸಿದ್ದರು. ಈ ಬಾರಿ ಶುಕ್ರವಾರ ಅಗಲಿದ ಪ್ರೀತಿಯ ಅಕ್ಕನ ನೆನಪಿನಲ್ಲೇ ದುಖಃದಿಂದ ಹುಟ್ಟು ಹಬ್ಬ ಪೂರೈಸಿದ್ದ ಪ್ರಥ್ವಿರಾಜ್, ಮರುದಿನವೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಪದೇ-ಪದೇ ವೈದ್ಯಕೀಯ ಪರೀಕ್ಷೆ:
ಪುತ್ರಿ ಅನುಶ್ರೀ ಅವರ ಆಕಸ್ಮಿಕ ದುರಂತದಿಂದ ಕಂಗೆಟ್ಟಿದ್ದ ಪೋಷಕರು ಪುತ್ರನ ಆರೋಗ್ಯದ ಬಗ್ಗೆ ಅತೀವ ಕಾಳಜಿ ವಹಿಸಿದ್ದರು. ಮಗಳ ಸಾವಿನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಹೃದಯ ಸಂಬಂಧಿ ಕಾರಣಗಳನ್ನು ಹೇಳಿದ್ದರಿಂದ, ನಿಯಮಿತವಾಗಿ ಪುತ್ರನನ್ನು ಹೃದಯ ತಜ್ಞರ ಬಳಿಯಲ್ಲಿ ತಪಾಸಣೆ ನಡೆಸಿ, ಆರೋಗ್ಯದ ಕುರಿತು ಮಾಹಿತಿ ಪಡೆದುಕೊಂಡಿದ್ದರು. ಮಗಳನ್ನು ಕಳೆದುಕೊಂಡ ಒಂದು ವರ್ಷದ ಒಳಗೆ ಇರುವ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರ ಒಡಲ ನೋವು ಎಂತವರ ಹೃದಯವನ್ನು ಕರಗಿಸುತ್ತಿದೆ.


Spread the love