ಹುಣಸೂರಿನಲ್ಲಿ ನಿಷೇಧಾಜ್ಞೆ ಉಲ್ಲಂಘಸಿ ಮೆರವಣಿಗೆ ಯತ್ನ; ಸಂಸದ ಪ್ರತಾಪ್ ಸಿಂಹ ಬಂಧನ

Spread the love

ಹುಣಸೂರಿನಲ್ಲಿ ನಿಷೇಧಾಜ್ಞೆ ಉಲ್ಲಂಘಸಿ ಮೆರವಣಿಗೆ ಯತ್ನ; ಸಂಸದ ಪ್ರತಾಪ್ ಸಿಂಹ ಬಂಧನ

 ಹುಣಸೂರು: ನಿಷೇಧಾಜ್ಞೆ ಉಲ್ಲಂಘಿಸಿಯೂ ಹನುಮ ಜಯಂತಿ ಪ್ರಯುಕ್ತ ಇಲ್ಲಿ ಮೆರವಣಿಗೆ ನಡೆಸಲು ನಡೆಸಿರುವ ಪ್ರಯತ್ನವನ್ನು ಪೊಲೀಸರು ತಡೆದಿದ್ದಾರೆ. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಸ್ಪಿ ಕಾರು ಸೇರಿದಂತೆ ಪೊಲೀಸ್ ವಾಹನಗಳ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಪಟ್ಟಣದಲ್ಲಿ ಈದ್‌ ಮಿಲಾದ್‌ ಮತ್ತು ಹನುಮ ಜಯಂತಿ ಪ್ರಯುಕ್ತ ಮುಂಜಾಗ್ರತೆ ಕ್ರಮವಾಗಿ ಡಿ. 2ರಿಂದ ಎರಡು ದಿನಗಳ ಕಾಲ 144 ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 1500 ಪೊಲೀಸರನ್ನು ನಿಯೋಜಿಸಲಾಗಿದೆ.

ಡಿ. 2ರಂದು ಈದ್‌ ಮಿಲಾದ್‌ ಮತ್ತು ಡಿ. 3ರಂದು ಹನುಮ ಜಯಂತಿಗೆ ಯಾವುದೇ ಲೋಪವಾಗದಂತೆ ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿದೆ. ‘ಹುಣಸೂರಿನಲ್ಲಿ ಕಳೆದೆರಡು ವರ್ಷಗಳಿಂದ ಹನುಮ ಜಯಂತಿ ಮತ್ತು ಈದ್‌ಮಿಲಾದ್‌ ಹಬ್ಬಗಳಲ್ಲಿಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ನಗರದಾದ್ಯಂತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ.

ಲಾಠಿ ಚಾರ್ಜ್ ಮಾಡಿಲ್ಲ ; ಎಸ್ಪಿ ರವಿ.ಡಿ. ಚನ್ನಣ್ಣವರ್

ಹನುಮ ಮಾಲಾಧಾರಿಗಳ ಮೆರವಣಿಗೆ ವೇಳೆ ಯಾವುದೇ ಲಾಠಿ ಚಾರ್ಜ್ ಮಾಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ. ಚನ್ನಣ್ಣವರ್ ಹೇಳಿದ್ದಾರೆ.

ಗುಂಪು ಚದುರಿಸುವ ವೇಳೆ ಕೆಲವು ಉದ್ರಿಕ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಸುಮಾರು 50 ಜನರನ್ನು ವಶಕ್ಕೆ ಪಡೆದಿದ್ದೇವೆ ಎಂದು ಜಿಲ್ಲಾ ವರಿಷ್ಠಾಧಿಕಾರಿ ರವಿ ಡಿ.ರವಿ ಚನ್ನಣ್ಣವರ್ ಸ್ಪಷ್ಟನೆ ನೀಡಿದ್ದಾರೆ.

ಹನುಮ ಮಾಲಾಧಾರಿಗಳು ನಗರದಲ್ಲಿ ಮೆರವಣಿಗೆ ನಡೆಸಲು ಪ್ರತ್ಯೇಕ ಮಾರ್ಗವನ್ನು ನಿಗದಿ ಮಾಡಲಾಗಿತ್ತು. ಆದರೆ ಕೆಲವರು ಬೇರೆ ಮಾರ್ಗದಲ್ಲಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಮನವಿ ಪತ್ರ ಸಲ್ಲಿಸಿದ್ದರು. ಆದರೆ ಜಿಲ್ಲಾಧಿಕಾರಿಗಳಿಂದ ಈ ಪತ್ರಕ್ಕೆ ಅನುಮತಿ ಸಿಗದ ಕಾರಣ ಮೆರವಣಿಗೆ ವೇಳೆ ಶಾಂತಿ ಕಾಪಾಡಲು ಭದ್ರತೆ ಕ್ರಮವನ್ನು ತೆಗೆದುಕೊಂಡಿದ್ದೆವು. ಈ ವೇಳೆ ಕೆಲ ಮಂದಿ ಅನುಮತಿ ರಹಿತ ಮಾರ್ಗವಾಗಿ ಮೆರವಣಿಗೆ ನಡೆಸಲು ಹೊರಟಿದ್ದರು. ಅವರನ್ನು ನಾವು ತಡೆದಿದ್ದೆವೆ. ಶಾಂತಿ ವ್ಯವಸ್ಥೆಗೆ ಧಕ್ಕೆ ತರುವ ಇಂತಹ ಕ್ರಮಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಬಿಳಕೆರೆ ಬಳಿ ಸಂಸದರನ್ನು ತಡೆಯಲು ಪೊಲೀಸರು ಮುಂದಾಗಿದ್ದರು. ಆದರೆ ವಾಹನ ತಡೆಯಲು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ದೂಡಿ ಕಾರನ್ನು ಚಲಾಯಿಸಿದ್ದಕ್ಕೆ ಸಂಸದ ಪ್ರತಾಪ್‍ಸಿಂಹ ಅವರನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ವಿಡಿಯೋ ಲಭ್ಯವಾಗಿದ್ದು, ಸ್ಥಳದಲ್ಲಿರುವ ಅಧಿಕಾರಿಗಳನ್ನು ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸದ್ಯ ಸಂಸದ ಪ್ರತಾಪ್ ಸಿಂಹ ಅವರು ನಮ್ಮ ಜತೆಯಲ್ಲೇ ಇದ್ದಾರೆ. ಸಾರ್ವಜನಿಕರು ಯಾವುದೇ ಊಹಾಪೋಹಗಳಿಗೆ ಕಿವಿಗೊಡಬಾರದು. ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಜನರು ಹಾಗೂ ಜನಪ್ರತಿನಿಧಿಗಳು ಸಹಕಾರ ನೀಡಬೇಕು ಎಂದು ವಿನಂತಿ ಮಾಡಿದರು.

ಸಂಸದರಾಗಲಿ, ಶಾಸಕರಾಗಲಿ ತಾವೇ ಮಾಡಿದ ಕಾನೂನಿಗೆ ಗೌರವ ಕೊಡದಿದ್ದರೆ ಜನ ಸಾಮಾನ್ಯರು ಹೇಗೆ ಗೌರವ ಕೊಡುತ್ತಾರೆ. ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು.

ಪ್ರತಾಪ ಸಿಂಹ ಮಾಡಿರುವುದು ಅಪರಾಧ – ಸಿದ್ದರಾಮಯ್ಯ

ಘಟನೆ ಕುರಿತು ಪ್ರತಿಕ್ರಿಯಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಸದರೇ ಕಾನೂನು ಕೈಗೆ ತೆಗೆದುಕೊಂಡರೆ ಜನರೂ ಅವರನ್ಬೇ ಅನುಕರಿಸಿದರೆ ಕಾನೂನು ಸುವ್ಯವಸ್ಥೆ ಏನಾಗಬೇಕು ? ಸ್ವತಃ ಸಂಸದ ಪ್ರತಾಪ್ ಸಿಂಹ ಅವರೇ ವಾಹನ ಚಾಲನೆ ಮಾಡಿಕೊಂಡು ಬಂದು ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳ ಮೇಲೆ ನುಗ್ಗಿಸಿರುವುದು ಅಪರಾಧ. ಕಾನೂನು ಕೈಗೆ ತೆಗೆದುಕೊಳ್ಳುವುದಕ್ಕೆ ಯಾರಿಗೂ ಅವಕಾಶ ಇಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಾವು ಹನುಮ ಜಯಂತಿ, ಮೆರವಣಿಗೆ ಮಾಡಬೇಡಿ ಎಂದು ಹೇಳಿಲ್ಲ. ಅದಕ್ಕಾಗಿ ಮಾರ್ಗವನ್ನೂ ನಿಗಧಿ ಮಾಡಲಾಗಿತ್ತು. ಆದರೆ, ನಾವು ಹೇಳಿದ ಮಾರ್ಗದಲ್ಲೇ ಮೆರವಣಿಗೆ ಹೋಗಬೇಕು ಎಂದು ಸಂಸದರು ಹೇಳುವುದಾದರೆ ಪೊಲೀಸರ ಜವಾಬ್ದಾರಿ ಏನು ? ಸಾಮರಸ್ಯ ಹಾಳಾಗಬಾರದು ಎಂಬುದು ನಮ್ಮ ಉದ್ದೇಶ.  ಹನುಮ ಜಯಂತಿ, ರಾಮನವಮಿ ನಾವೂ ಮಾಡುತ್ತೇವೆ. ಅವರೊಬ್ಬರೇ ಅಲ್ಲ. ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಸರಿಯಲ್ಲ. ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಎತ್ತಿ ಕಟ್ಟಿ ಸಾಮರಸ್ಯ ಹಾಳು ಮಾಡುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ.

ಸಂಸದರೇ ವಾಹನ ಚಾಲನೆ ಮಾಡಿಕೊಂಡು ಬಂದು ಬ್ಯಾರಿಕೇಡ್ ಗಳ ಮೇಲೆ ನುಗ್ಗಿಸಿಕೊಂಡು ಹೋಗುವುದನ್ನು ಯಡಿಯೂರಪ್ಪ ಒಪ್ಪುವರೇ ? ಅದು ಕಾನೂನಿನ ಉಲ್ಲಂಘನೆ ಅಲ್ಲವೇ ?  ಬಿಜೆಪಿ ಏನೇ ಮಾಡಿದರೂ ರಾಜ್ಯದ ಜನತೆಗೆ ಎಲ್ಲವೂ ಗೊತ್ತಾಗುತ್ತದೆ. ಕೊನೆಗೆ ಬಿಜೆಪಿಯವರ ಮೇಲೆಯೇ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇದು ಚುನಾವಣಾ ವರ್ಷವಾದ್ದರಿಂದ ರಾಜ್ಯದಲ್ಲಿ ಕೋಮು ಸಾಮರಸ್ಯ ಹಾಳು ಮಾಡಲು ಬಿಜೆಪಿ ಹೊರಟಿದೆ ಎಂದರು.

ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಿಡುಗಡೆ ಮಾಡಿ – ನಳಿನ್ ಕುಮಾರ್ ಕಟೀಲ್

ಸಂಸದ ಪ್ರತಾಪಸಿಂಹ ಅವರನ್ನು ಬಂಧಿಸುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಹಿಂದು ಪರ ಸಂಘಟನೆಗಳನ್ನು ಹತ್ತಿಕ್ಕಲು ಕಾಂಗ್ರೆಸ್ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಮಾಲೆ ಧರಿಸಿದ ಹಿಂದು ಯುವಕರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಮುಖ್ಯಮಂತ್ರಿಯವರ ಕುಮ್ಮಕ್ಕಿನಿಂದಲೇ ಪೊಲೀಸರು ಇಂತಹ ಕಾರ್ಯ ನಡೆಸುತ್ತಿರುವುದು ಸ್ಪಷ್ಟವಾಗಿ ದೆ.ಸಂಸದ ಪ್ರತಾಪ್ ಬಿಡುಗಡೆಗೆ ರಾಜ್ಯಾದ್ಯಂತ ಹೋರಾಟ ನಡೆಯಲಿದೆ. ಅಹಿತಕರ ಘಟನೆಗಳು ನಡೆದರೆ ಸರ್ಕಾರ ವೇ ಅದಕ್ಕೆ ನೇರ ಹೊಣೆ ಎಂದು ಸಂಸದ ನಳಿನ್ ಕುಮಾರ್ ಪ್ರಕಟಣೆಯ ಲ್ಲಿ ತಿಳಿಸಿದ್ದಾರೆ.


Spread the love