ಹೊಳಪು ಕ್ರೀಡಾಕೂಟ – ಟ್ರೋಪಿ , ಟೀ ಶರ್ಟ್ ಅನಾವರಣ

Spread the love

ಹೊಳಪು ಕ್ರೀಡಾಕೂಟ – ಟ್ರೋಪಿ , ಟೀ ಶರ್ಟ್ ಅನಾವರಣ

ಉಡುಪಿ: ಕೋಟತಟ್ಟು ಗ್ರಾಮ ಪಂಚಾಯತ್ ಹಾಗೂ ಕಾರಂತ ಪ್ರತಿಷ್ಠಾನ(ರಿ), ಕೋಟ ಇವರ ಆಶ್ರಯದಲ್ಲಿ ಡಿಸೆಂಬರ್ 28 ರಂದು ಕೋಟ ವಿವೇಕ ಸಂಸ್ಥೆಯ ಮೈದಾನದಲ್ಲಿ ನಡೆಯುವ ಉಡುಪಿ, ದ.ಕ ಜಿಲ್ಲೆಯ ಪಂಚಾಯತ್ ರಾಜ್ ಜನ ಪ್ರತಿನಿಧಿಗಳ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಹೊಳಪು-2019 ಕಾರ್ಯಕ್ರಮದ ಪ್ರಶಸ್ತಿಯ ಟ್ರೋಫಿ ಹಾಗೂ ಕ್ರೀಡಾಪಟುಗಳಿಗೆ ನೀಡುವ ಟೀ ಶರ್ಟ್ ಮತ್ತು ಕ್ಯಾಪ್ಗಳ ಬಿಡುಗಡೆ ಕಾರ್ಯಕ್ರಮ, ಕೋಟ ವಿವೇಕ ಕಾಲೇಜಿನಲ್ಲಿ ಗುರುವಾರ ನಡೆಯಿತು.

ರಾಜ್ಯದ ಮುಜರಾಯಿ ಹಾಗೂ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ, ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಟ್ರೋಫಿಗಳ ಅನಾವರಣ ಮತ್ತು ಕ್ರೀಡೋತ್ಸವದ ಗೌರವ ಕಾರ್ಯದರ್ಶಿ ಆನಂದ್ ಸಿ ಕುಂದರ್ ಟೀ ಶರ್ಟ್ ಮತ್ತು ಕ್ಯಾಪ್ಗಳನ್ನು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಮತ್ತು ದ.ಕನ್ನಡ ಜಿಲ್ಲೆಯ ಎಲ್ಲಾ 388 ಗ್ರಾಮ ಪಂಚಾಯತ್ಗಳ ಸದಸ್ಯರು, 8 ತಾ.ಪಂ.ಗಳ ಸದಸ್ಯರು, 2 ಜಿಲ್ಲಾ ಪಂಚಾಯತ್ಗಳ ಜಿ.ಪಂ ಸದಸ್ಯರು ಮತ್ತು 15 ನಗರ ಸ್ಥಳೀಯ ಸಂಸ್ಥೆಗಳ ಸುಮಾರು 6000ಕ್ಕೂ ಅಧಿಕ ಜನಪ್ರತನಿಧಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಭಾಗವಹಿಸಲಿದ್ದಾರೆ. ಗ್ರಾಮ ಪಂಚಾಯತ್ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಆಗಮಿಸುವ ಜನಪ್ರತಿನಿಧಿಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕೈಗೊಂಡಿದ್ದು, ಪಾರ್ಕಿಂಗ್ಗೆ ಸ್ಥಳ ಗುರುತಿಸಲಾಗಿದೆ. ಎಲ್ಲಾ ಜನಪ್ರತಿನಿಧಿಗಳು ಪಕ್ಷಭೇಧ ಮರೆತು ಕ್ರೀಡಾ ಕೂಟದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಹಾಗೂ ಕ್ರೀಡಾಕೂಟದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಚಿವರ ಆಪ್ತ ಸಹಾಯಕ ಹರೀಶ ಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ನರೇಂದ್ರ ಕುಮಾರ್ ಕೋಟ ವಂದಿಸಿದರು.


Spread the love