10 ಶೇ. ಮೀಸಲಾತಿ ವಿರೋಧಿಸಿ ಎಸ್ ಐ ಓ ದಿಂದ ಪ್ರತಿಭಟನೆ

Spread the love

10 ಶೇ. ಮೀಸಲಾತಿ ವಿರೋಧಿಸಿ ಎಸ್ ಐ ಓ ದಿಂದ ಪ್ರತಿಭಟನೆ

ಮಂಗಳೂರು: ಜಾತಿಯ ಹೆಸರಿನಲ್ಲಿ ಮೀಸಲಾತಿ ಮಾಡುತ್ತಿದ್ದುದನ್ನು ವಿರೋಧಿಸುತ್ತಿದ್ದ ಬಿಜೆಪಿ ಪಕ್ಷವು, ಈಗ ತನ್ನ ಅಧಿಕಾರವನ್ನು ಬಳಸಿಕೊಂಡು ಮೇಲ್ಜಾತಿಯವರಿಗೆ ಶೇ.10 ಮೀಸಲಾತಿ ನೀಡಲು ತಯಾರು ನಡೆಸಿರುವುದು ಸಂವಿಧಾನದ ಆಶಯದ ಸ್ಪಷ್ಟ ವಿರುದ್ಧವಾಗಿದೆ. ಅಲ್ಲದೇ, ಇದು ಓಲೈಕೆ ರಾಜಕಾರಣದ ಪ್ರತೀಕವಾಗಿದೆ ಎಂದು ಪತ್ರಕರ್ತ, ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಏ.ಕೆ. ಕುಕ್ಕಿಲ ಹೇಳಿದರು.

ಕೇಂದ್ರ ಸರಕಾರದ ಮೀಸಲಾತಿ ಕ್ರಮದ ವಿರುದ್ಧ ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (SIಔ) ದ.ಕ. ಜಿಲ್ಲಾ ಘಟಕವು ಇಂದು ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಆಯೋಜಿಸಿದ್ದ ಪ್ರತಿಭಟನೆನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಒಂದು ಸಮುದಾಯಕ್ಕೆ ಮೀಸಲಾತಿ ಘೋಷಣೆ ಮಾಡಬೇಕಾದರೆ ಆ ಸಮುದಾಯದ ಸಂಪೂರ್ಣ ಸ್ಥಿತಿಗತಿಗಳ ಬಗ್ಗೆ ಸರಿಯಾದ ಮಾಹಿತಿ, ಅಂಕಿ-ಅಂಶಗಳು ಸರಕಾರದ ಬಳಿ ಇರಬೇಕು. ಆದರೆ ಅದ್ಯಾವುದನ್ನೂ ಮಾಡದೆ, ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೇಂದ್ರ ಸರಕಾರವು ಓಲೈಕೆ ರಾಜಕಾರಣ ಮಾಡುವಲ್ಲಿ ನಿರತವಾಗಿದೆ. ಇದು ಸಂವಿಧಾನದ ವಿರೋಧಿ ಅಜೆಂಡಾವನ್ನು ಸರಕಾರ ಜಾರಿಗೊಳಿಸುವ ಮೂಲಕ ಸಂವಿಧಾನ ನಿರ್ಮಾತೃಗೆ ಅವಮಾನ ಮಾಡುತ್ತಿದೆ ಎಂದು ತಿಳಿಸಿದರು.

ಮೇಲ್ಜಾತಿ ಸಮುದಾಯದ ಬಡವರು ಸಬಲೀಕರಣಗೊಳ್ಳಬಾರದು ಅಥವಾ ಅವರು ಸಮಾಜದಲ್ಲಿ ಮುನ್ನಡೆ ಬರಬಾರದು ಎಂಬುದು ನಮ್ಮ ಪ್ರತಿಭಟನೆಯ ಉದ್ದೇಶವಲ್ಲ. ಒಂದು ಸರಕಾರವು ತನ್ನ ಆಡಳಿತಾವಧಿಯಲ್ಲಿ ನಡೆಸಿದ ತಪ್ಪುಗಳನ್ನು ಮರೆಮಾಚಲು ಯಾವೆಲ್ಲಾ ರೀತಿಯ ನಿರ್ಧಾರಗಳನ್ನು ತೆಗೆದುಕೊಂಡು ಜನರನ್ನು ದಾರಿ ತಪ್ಪಿಸಬಹುದು ಎಂಬುದಕ್ಕೆ ಸ್ಪಷ್ಟವಾದ ಉದಾಹರಣೆಯಾಗಿದೆ. ಮಂಡಲ್ ವರದಿಯ ಜಾರಿಗೆ ಈ ಹಿಂದೆ ವಿ.ಪಿ.ಸಿಂಗ್ ಸರಕಾರವು ಯತ್ನಿಸಿದಾಗ ಅದರ ವಿರುದ್ಧ ಉತ್ತರ ಭಾರತದಲ್ಲಿ ಮೇಲ್ಜಾತಿಯವರಿಂದ ತೀವ್ರ ಪ್ರತಿಭಟನೆ ನಡೆಸಿ, ಹಲವಾರು ಗಲಭೆಗಳನ್ನೆಬ್ಬಿಸಿದ ಬಿ.ಜೆ.ಪಿಯು ಇಂದು ಚರ್ಚೆಯಲ್ಲೇ ಇರದ ಒಂದು ವಿಷಯವನ್ನು ರಾತ್ರಿ ಬೆಳಗಾಗುವುದರೊಳಗೆ ಪ್ರಸ್ತಾಪಿಸಿ, ಮೇಲ್ಜಾತಿಗೆ 10 ಶೇ. ಮೀಸಲಾತಿಯನ್ನು ತರಲು ಹೊರಟಿರುವುದು ವಿಪರ್ಯಾಸ. ಇದು ಮೋದಿ ಸರಕಾರದ ಹೊಸ ಜುಮ್ಲಾ ಆಗಿದೆ. ಈ ಮೀಸಲಾತಿ ಕ್ರಮವು ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದವರು ತಿಳಿಸಿದರು.

ಬಳಿಕ ಮಾತನಾಡಿದ ಎಪಿಸಿಆರ್ ದ.ಕ. ಜಿಲ್ಲಾಧ್ಯಕ್ಷ ಅಡ್ವೊಕೇಟ್ ಸರ್ಫರಾಝ್, ಕೇಂದ್ರ ಸರಕಾರವು ಸರಿಯಾದ ಅಂಕಿ-ಅಂಶಗಳನ್ನು ತಯಾರಿಸದೆ ತರಾತುರಿಯಲ್ಲಿ ಮೇಲ್ಜಾತಿಯ ಮಂದಿಗೆ ಆರ್ಥಿಕ ಮೀಸಲಾತಿ ತರಲು ಹೊರಟಿರುವುದು ಸುಪ್ರೀಂ ಕೋರ್ಟಿನ ತೀರ್ಮಾನದ ಉಲ್ಲಂಘನೆಯಾಗಿದೆ. ಒಂದು ವೇಳೆ ಸರಕಾರಕ್ಕೆ ಮೇಲ್ಜಾತಿಯ ಜನರ ಅಭಿವೃದ್ಧಿಗೆ ಮಹತ್ವ ಕೊಡುವುದಾದರೆ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸಲಿ. ಆದರೆ ಅದನ್ನು ಮಾಡದೆ ಒಮ್ಮಿಂದೊಮ್ಮಲೆ 10 ಶೇ. ಮೀಸಲಾತಿಯನ್ನು ನೀಡಲು ಹೊರಟಿರುವುದು ತಪ್ಪು ಎಂದರು.
ಎಸ್.ಐ.ಓ. ದ.ಕ. ಜಿಲ್ಲಾಧ್ಯಕ್ಷ ರಿಝ್ವಾನ್ ಅಝ್ಹರಿ ಮಾತನಾಡುತ್ತಾ, ಕೇಂದ್ರ ಸರಕಾರವು ಮೀಸಲಾತಿಯ ನೀತಿಯನ್ನೇ ಬುಡಮೇಲುಗೊಳಿಸುವುದಕ್ಕೆ ಯತ್ನಿಸುತ್ತಿದೆ. ದೇಶದಲ್ಲಿ ಯುವಜನರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ಸರಕಾರವು ಎಡವಿದೆ. ದೇಶದ ವಿವಿಧ ಕ್ಷೇತ್ರಗಳ ಅಭಿವೃದ್ಧಿಗೊಳಿಸುವಲ್ಲಿ ಎಡವಿದೆ. ತಮ್ಮ ತಪ್ಪುಗಳನ್ನು ಜನರು ಮರೆಯುವಂತೆ ಮಾಡಲು ಮೀಸಲಾತಿಯ ಈ ನಿರ್ಧಾರವನ್ನು ತರಾತುರಿಯಲ್ಲಿ ತರಲು ಹೊರಟಿದೆ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ, ಮತಬ್ಯಾಂಕ್ ರಾಜಕೀಯವನ್ನು ತಮ್ಮದಾಗಿಸಿ ಲಾಭ ಮಾಡಿಕೊಳ್ಳುವುದನ್ನು ಎಸ್.ಐ.ಓ ವಿರೋಧಿಸುತ್ತದೆ ಎಂದರು.

ಪ್ರತಿಭಟನೆಯಲ್ಲಿ ಎಸ್.ಐ.ಓ. ರಾಜ್ಯ ಸಲಹಾ ಸಮಿತಿಯ ಸದಸ್ಯರಾದ ದಾನಿಶ್ ಪಾಣೆಮಂಗಳೂರು. ಡಾ. ಮಿಸ್ ಅಬ್ ಇಸ್ಮಾಯೀಲ್, ಜಿಲ್ಲಾ ಕಾರ್ಯದರ್ಶಿಗಳಾದ ಮುಂಝಿರ್ ಅಹ್ಸನ್, ವಾಸಿಫ್ ಕೋಟೆಕಾರ್, ಮಂಗಳೂರು ನಗರಾಧ್ಯಕ್ಷ ಇರ್ಷಾದ್ ವೇಣೂರು, ನಿಝಾಂ ಉಳ್ಳಾಲ, ನಿಹಾಲ್ ಕುದ್ರೋಳಿ, ಇರ್ಫಾನ್ ಉಪ್ಪಿನಂಗಡಿ, ಇಜಾಝ್ ಕುದ್ರೋಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


Spread the love