ಕೆರೆಕಾಡು ಕೊರಗ ಕಾಲನಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಸಚಿವ ಅಂಜನೇಯ; ಸಮಸ್ಯೆಗಳ ಕುರಿತು ಶೀಘ್ರ ಸಭೆ

Spread the love

ಮಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅರಣ್ಯದಲ್ಲಿ ವಾಸವಾಗಿರುವ ಆದಿವಾಸಿಗಳ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಅರಣ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯನ್ನು ನಡೆಸುವುದಾಗಿ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಎಚ್ ಅಂಜನೇಯ ತಿಳಿಸಿದರು.
ಅವರು ಶುಕ್ರವಾರ ಮುಲ್ಕಿಯ ಪಡುಪಣಂಬೂರಿನ ಕೆರೆಕಾಡಿ ಕೊರಗರ ಹಾಡಿ ಕಾಲನಿಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಾಮರಾಜನಗರ, ಮೈಸೂರು, ಕೊಡಗು, ಉಡುಪಿ ಉತ್ತರ ಕನ್ನಡ ಶಿವಮೊಗ್ಗ ಹಾಗೂ ದಕ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳನ್ನು ಒಗ್ಗೂಡಿಸಿ ಸಭೆ ನಡೆಸುವ ಮೂಲಕ ಅರಣ್ಯ ಕಾಯಿದೆಯಿಂದ ಆದಿವಾಸಿಗಳಿಗೆ ಆಗುತ್ತಿರುವ ತೊಂದರೆ ಅಭಿವೃದ್ಧಿ ಕಾಮಗಾರಿಗಳಲ್ಲಿನ ತೊಡಕನ್ನು ನಿವಾರಿಸಲಾಗುವುದು ಎಂದರು.
ರಾಜ್ಯದಲ್ಲಿ ಬುಡಕಟ್ಟು ಜನಾಂಗದವರು ಅಧಿಕ ಸಂಖ್ಯೆಯಲ್ಲಿರುವ ಏಳು ಜಿಲ್ಲೆಗಳಲ್ಲಿ ಗ್ರಾಮ ವಾಸ್ತವ್ಯದ ಆಶಯದೊಂದಿಗೆ ಈಗಾಗಲೇ 5 ಗ್ರಾಮಗಳಲ್ಲಿ ವಾಸ್ತವ್ಯ ಮಾಡಿದ್ದು ಇದು 6 ನೇ ಗ್ರಾಮವಾಸ್ತವ್ಯವಾಗಿದೆ. ಮುಂದೆ ಉಡುಪಿ ಜಿಲ್ಲೆಯಲ್ಲೂ ಗ್ರಾಮ ವಾಸ್ತವ್ಯ ಮಾಡುವುದರೊಂದಿಗೆ ಪ್ರತಿ ಜಿಲ್ಲೆಯ ಪ್ರತಿ ಹಾಡಿಗಳಲ್ಲೂ ವಾಸ್ತವ್ಯದ ಇಚ್ಛೆ ಇದೆ ಎಂದರು.
ಪ್ರತಿ ತಿಂಗಳು ಪ್ರತಿ ಜಿಲ್ಲೆಯಲ್ಲೂ ಆದಿವಾಸಿ ಸಭೆಯನ್ನು ನಡೆಸುವ ಮೂಲಕ ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯಕ್ರಮ ತಮ್ಮದು ಎಂದ ಸಚಿವರು, ಕೊರಗ ಸಮುದಾಯ ಶಿಕ್ಷಣದಲ್ಲಿ ಹಿಂದುಳಿದಿದ್ದು, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕು. ಸಮುದಾಯದ ಪ್ರತಿನಿಧಿಗಳು ರಾಜಕೀಯ ಹಾಗೂ ಆಡಳಿತ ಕ್ಷೇತ್ರದಲ್ಲೂ ಅಧಿಕಾರ ಪಡೆಯಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ, ಜಿಲ್ಲಾಧಿಕಾರಿ ಎ ಬಿ ಇಬ್ರಾಹಿಂ, ಉಪಮೇಯರ್ ಸುಮಿತ್ರ ಕರಿಯ, ಪಡುಪಣಂಬೂರು ಗ್ರಾಪಂ ಅಧ್ಯಕ್ಷ ಮೋಹನ್ ದಾಸ್, ಬಂಟ್ವಾಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ರಾಡ್ರಿಗಸ್, ರಾಜ್ಯ ಸಮಾಜ ಕಲ್ಯಾಣ ಮಂಡಳಿ ಅಧ್ಯಕ್ಷೆ ದಿವ್ಯಪ್ರಭಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ವಿದ್ಯಾ, ಸಮಾಜಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಡಾ ಸಂತೋಷ್ ಕುಮಾರ್, ಇನ್ನಿತರರು ಉಪಸ್ಥಿತರಿದ್ದರು.
ಶುಕ್ರವಾರ ಬೆಳಿಗ್ಗೆ ಕೆರೆಕಾಡಿನ ಕೊರಗ ಹಾಡಿಗೆ ಆಗಮಿಸಿದ ಸಚಿವರನ್ನು ಕೊರಗರ ಸಾಂಪ್ರದಾಯಿಕ ಡೋಲು ಹಾಗೂ ಕೊಳಲು ವಾದನದೊಂದಿಗೆ ಸ್ವಾಗತಿಸಲಾಯಿತು.
ಸಚಿವರು ವಾಸ್ತವ್ಯ ಹೂಡಲಿರುವ ಬೇಬಿ ಅವರ ಮನೆ ಸೇರಿದಂತೆ ಅಲ್ಲಿನ ಒಟ್ಟು 14 ಮನೆಗಳಲ್ಲಿನ ಸದಸ್ಯರು ಅತ್ಯಂತ ಸಂಭ್ರಮದಿಂದ ಭಾಗವಹಿಸಿ ಸಚಿವರಿಗೆ ಆತಿಥ್ಯ ನೀಡಿದರು.


Spread the love