41 ಬಾರಿ ಬಂಧನ ವಾರಂಟ್ ಜಾರಿಯಾಗಿದ್ದ ಆರೋಪಿ ಬಂಧನ
ಪುತ್ತೂರು: 2017ರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಹಾಗೂ ಈತನ ವಿರುದ್ಧ 41 ಬಾರಿ ಬಂಧನ ವಾರಂಟ್ ಜಾರಿಯಾಗಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

2017ರ ಡಿಸೆಂಬರ್ 22ರಂದು ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ ಮೂವರು ಅಪರಿಚಿತರು ಮನೆಯಲ್ಲಿದ್ದವರಿಗೆ ಪಿಸ್ತೂಲ್ ಮತ್ತು ಚೂರಿ ತೋರಿಸಿ ಸುಮಾರು ₹2.88 ಲಕ್ಷ ಮೌಲ್ಯದ ಚಿನ್ನಾಭರಣಗಳು ಹಾಗೂ ₹60,000 ನಗದುದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 200/2017 ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಕೇರಳ ರಾಜ್ಯದ ತ್ರಿಶೂರ್ ನಿವಾಸಿ ನೆಲ್ಸನ್ ಸಿ.ವಿ. (38) ಎಂಬಾತನು 2021ರ ಆಗಸ್ಟ್ 27ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಈತನ ವಿರುದ್ಧ ಒಟ್ಟು 41 ಬಾರಿ ಬಂಧನ ವಾರಂಟ್ಜಾರಿಗೊಳಿಸಿತ್ತು.
ಪುತ್ತೂರು ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಸಂತೋಷ್ ಎ. (HC-413), ಪೊಲೀಸ್ ಕಾನ್ಸ್‌ಟೇಬಲ್ ವಿನಾಯಕ (PC-2347) ಹಾಗೂ ಪೊಲೀಸ್ ಕಾನ್ಸ್‌ಟೇಬಲ್ ಶಿವರಾಜ್ (PC-454) ಅವರ ತಂಡವು 2026ರ ಜುಲೈ 8ರಂದು ಕೇರಳದ ತ್ರಿಶೂರ್ ಜಿಲ್ಲೆಯ ಮಿಯೂರು ಎಂಬಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.
ಆರೋಪಿಯು ಈ ಹಿಂದೆ ನ್ಯಾಯಾಲಯದಿಂದ ಷರತ್ತುಬದ್ಧ ಜಾಮೀನು ಪಡೆದುಕೊಂಡಿದ್ದರೂ, ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಜಾಮೀನಿನ ಷರತ್ತುಗಳನ್ನು ಪದೇಪದೇ ಉಲ್ಲಂಘಿಸಿದ್ದರಿಂದ, ಆತನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 80/2026ರಡಿ ಭಾರತೀಯ ನ್ಯಾಯ ಸಂಹಿತೆ (BNS), 2023ರ ಕಲಂ 269ರ ಅನ್ವಯ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.












