96,500 ನಿರಾಶ್ರಿತರ ಹಸಿವು ನೀಗಿಸಿದ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ 

Spread the love

96,500 ನಿರಾಶ್ರಿತರ ಹಸಿವು ನೀಗಿಸಿದ ಕರಂಬಳ್ಳಿ ವೆಂಕಟರಮಣ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿ 

ಉಡುಪಿ: ಕೊರೋನ ಮಹಾಮಾರಿಯಿಂದ ಲಾಕ್ಡೌನ್ ಹಿನ್ನಲೆಯಲ್ಲಿ ಉಡುಪಿ ನಗರದಾದ್ಯಂತವಿರುವ ನಿರಾಶ್ರಿತರಿಗೆ ಶಾಸಕರಾದ  ರಘುಪತಿ ಭಟ್ರವರ ಮಾರ್ಗದರ್ಶನದಲ್ಲಿ, ಯಶ್ಪಾಲ್ ಸುವರ್ಣ ಮತ್ತು ಪ್ರವೀಣ್ ಶೆಟ್ಟಿ ಕಪ್ಪೆಟ್ಟು ನೇತೃತ್ವದಲ್ಲಿ ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯಿಂದ 96,500 ರಾತ್ರಿ ಊಟ ಹಾಗೂ ಸುಮಾರು 5.40 ಲಕ್ಷ ವೆಚ್ಚದಲ್ಲಿ ಉಡುಪಿ ನಗರ ಸಭಾ ವ್ಯಾಪ್ತಿಯ 219 ಮಂದಿ ಪೌರ ಕಾರ್ಮಿಕರಿಗೆ ತಲಾ 2000 ಗೌರವಧನ ಹಾಗೂ 10 ಕೆಜಿ ಅಕ್ಕಿಯನ್ನು ವಿತರಿಸಲಾಗಿದೆ.

ಎಪ್ರಿಲ್ 15 ರಿಂದ ಆರಂಭಗೊಂಡು ಮೇ 3 ರವರೆಗೆ 19 ದಿನಗಳು ನಿರಂತರವವಾಗಿ ನಗರದ ಕರಾವಳಿ ಜಂಕ್ಷನ್, ಸಂತೆಕಟ್ಟೆ, ಬೀಡಿನಗುಡ್ಡೆ, ಮಲ್ಪೆ, ಮೂಡಬೆಟ್ಟು, ಲಕ್ಷ್ಮೀ ನಗರ, ಕಲ್ಮಾಡಿ, ಪೆರಂಪಳ್ಳಿ ನಿಟ್ಟೂರು, ಪರ್ಕಳ, ಮಣಿಪಾಲ, ರಾಜಾಂಗಣ ಪಾರ್ಕಿಂಗ್ ಸಹಿತ ಸುಮಾರು 35 ಕೇಂದ್ರಗಳಲ್ಲಿ ದಿನಂಪ್ರತಿ ಸುಮಾರು 5500 ಮಂದಿಗೆ ಊಟವನ್ನು ವಿತರಿಸಲಾಗಿದೆ.

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ   ಬಸವರಾಜ ಬೊಮ್ಮಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ನಾಡೋಜ ಡಾ ಜಿ. ಶಂಕರ್, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು, ಉಡುಪಿ ಮದರ್ ಆಫ್ ಸಾರೋಸ್ ಚರ್ಚ್ನ ಧರ್ಮಗುರುಗಳಾದ ಫಾ| ವೆಲೇರಿಯನ್ ಮೆಂಡೋನ್ಸಾ, ಶಾಸಕರಾದ   ಸುನೀಲ್ ಕುಮಾರ್,   ಬಿ. ಎಂ. ಸುಕುಮಾರ್ ಶೆಟ್ಟಿ, ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್ ಮೊದಲಾದ ಗಣ್ಯರು ಆಹಾರ ತಯಾರಿಕಾ ಕೇಂದ್ರಕ್ಕೆ ಭೇಟಿ ನೀಡಿ ಸಮಿತಿಯ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಉಡುಪಿ ಪುರಭವನದ ಪಾಕಶಾಲೆಯಲ್ಲಿ ಪುರುಷೋತ್ತಮ ಶೆಟ್ಟಯವರ ಸಹಕಾರದಿಂದ ಸುರಕ್ಷತಾ ಕ್ರಮಗಳೊಂದಿಗೆ ಸಾಮಾಜಿಕ ಅಂತರವನ್ನು ಕಾಯ್ದುಗೊಂಡು ಆಹಾರವನ್ನು ತಯಾರಿಸಿ ವಿತರಿಸಲಾಗಿದ್ದು, ಉಡುಪಿಯ ಹೃದಯ ಶ್ರೀಮಂತಿಕೆಯ ಹಲವಾರು ದಾನಿಗಳು ಸ್ವಯಂಪ್ರೇರಿತರಾಗಿ ಈ ಯೋಜನೆಗೆ ಸಹಕಾರವನ್ನು ನೀಡಿದ್ದಾರೆ. ಎಂದು ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.

ಹರೀಶ್ರಾಮ್ ಬನ್ನಂಜೆ, ಶ್ರೀಮತಿ ಗೀತಾ ರವಿ ಶೇಟ್, ತಾಲೂಕು ಪಂಚಾಯತ್ ಸದಸ್ಯರಾದ  ಶಿಲ್ಪಾ ರವೀಂದ್ರ, ರಾಜೇಂದ್ರ ಪಂದುಬೆಟ್ಟು, ಜೀವನ್ ಹಾಳೆಕಟ್ಟೆ, ಸುಧೀರ್, ರತನ್,   ಭಾರತಿ ಭಾಸ್ಕರ್, ವಿಜಯ್ ಶೆಟ್ಟಿ, ದಯಾಶಿನಿ, ನಾಗರಾಜ್, ಶಶಿಧರ್, ಗಣೇಶ್ ಕಪ್ಪೆಟ್ಟು, ಶಿವಕುಮಾರ್, ಮಂಜು ಕೊಳ, ದಿನೇಶ್ ಶೆಟ್ಟಿಗಾರ್, ಅಜಿತ್ ಕೊಡವೂರು, ಸುಭಾಷಿತ್ ಹಾಗೂ ನೇಷನ್ ಫಸ್ಟ್ ಎನ್ ಸಿ ಸಿ ತಂಡದ ಸದಸ್ಯರು ಶ್ರೀ ಸೂರಜ್ ಕಿದಿಯೂರು ನೇತೃತ್ವದಲ್ಲಿ 150 ಸ್ವಯಂಸೇವಕರು ಈ ಯೋಜನೆಯ ಯಶಸ್ಸಿಗಾಗಿ ಸಕ್ರಿಯವಾಗಿ ಸೇವೆಸಲ್ಲಿಸಿ ಸಹಕರಿಸಿದ್ದಾರೆ.

ಅನ್ನಬ್ರಹ್ಮನ ನಾಡಾದ ಉಡುಪಿಯಲ್ಲಿ ಯಾರು ಹಸಿವಿನಿಂದ ಮಲಗಬಾರದೆಂಬ ಸದುದ್ದೇಶದಿಂದ ಹಮ್ಮಿಕೊಂಡ ಈ ರಾತ್ರಿ ಊಟ ವಿತರಣೆಯ ಮೂಲಕ 96,500 ಮಂದಿಯ ಹಸಿವನ್ನು ತಣಿಸಿದ ಸಂತೃಪ್ತಿ ಸಿಕ್ಕಿದೆ. ನಗರದ ಸ್ವಚ್ಛತೆಗಾಗಿ ಹಗಲಿರುಳು ದುಡಿಯುವ 219 ಪೌರಕಾರ್ಮಿಕರ ಸೇವೆಯನ್ನು ನಾವು ಗುರುತಿಸಿ ಪ್ರೋತ್ಸಾಹಿಸುವ ಕೆಲಸವೂ ಸಮಿತಿಯ ಮುಖಾಂತರ ಮಾಡಿದ್ದೇವೆ.ಈ ಯೋಜನೆಯ ಯಶಸ್ಸಿಗೆ ಸ್ವಯಂಪ್ರೇರಿತಾಗಿ ಸಹಕರಿಸಿರುವ ಎಲ್ಲಾ ದಾನಿಗಳಿಗೂ, ಸ್ವಯಂಸೇವಕರಿಗೆ ಹೃತ್ಪೂರ್ವಕ ಕೃತಜ್ಞತೆಗಳು ಎಂದು ಕರಂಬಳ್ಳಿ ಶ್ರೀವೆಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಯಶ ಪಾಲ್ ಸುವರ್ಣ ತಿಳಿಸಿದ್ದಾರೆ.


Spread the love