ಕೋಟೇಶ್ವರ ಅಂಡರ್ ಪಾಸ್ ತಿರುವಿನಲ್ಲಿ ಸರ್ವೀಸ್ ರಸ್ತೆ ಅಗಲೀಕರಣಕ್ಕೆ ಅಶೋಕ್ ಪೂಜಾರಿ ಒತ್ತಾಯ
ಕುಂದಾಪುರ: ಕೋಟೇಶ್ವರ ಬೈಪಾಸ್ ನಲ್ಲಿ ನಿರ್ಮಾಣಗೊಂಡ ಅಂಡರ್ ಪಾಸ್ ಹಾಗೂ ಸರ್ವೀಸ್ ರಸ್ತೆ ಕಿರಿದಾದ ಪರಿಣಾಮ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ಅಂಡರ್ ಪಾಸ್ ಹಾಗೂ ಸರ್ವೀಸ್ ರಸ್ತೆ ಅಗಲೀಕರಣಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ಕೋಟೇಶ್ವರ ಬೈಪಾಸ್ ನಲ್ಲಿನ ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣದಿಂದಾಗಿ ಸೋಮವಾರ ಸಂಜೆ ಕೋಟೇಶ್ವರ ಮಾರ್ಕೋಡು ನಿವಾಸಿ ಪ್ರದೀಪ್ ಪೂಜಾರಿ ಅಪಘಾದಿಂದ ಸಾವನ್ನಪ್ಪಿರುವುದು ದುರದೃಷ್ಟಕರ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣಗೊಂಡ ದಿನದಿಂದಲೂ ಸಾರ್ವಜನಿಕರು, ಸಂಘ-ಸಂಸ್ಥೆಗಳು ಈ ಬಗ್ಗೆ ಎಚ್ಚರಿಸುತ್ತಿದ್ದರೂ, ಸಂಬಂಧಪಟ್ಟವರು ಈ ಬಗ್ಗೆ ಕ್ರಮಕೈಗೊಳ್ಳದಿರುವುದು ಖಂಡನೀಯ. ಅಂಡರ್ ಪಾಸ್ ಬಳಿ ಕಿರಿದಾದ ಸರ್ವೀಸ್ ರಸ್ತೆಯಿಂದಾಗಿ ವಾಹನ ಸವಾರರು ಪಾದಚಾರಿಗಳು ಸಮಸ್ಯೆ ಎದುರಿಸುತ್ತಿದ್ದು, ಶೀಘ್ರವೇ ಅಗಲೀಕರಣಗೊಳಿಸದಿದ್ದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಸಂಘ-ಸಂಸ್ಥೆಗಳ ಜೊತೆಗೂಡಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಕೋಟೇಶ್ವರ- ಹಾಲಾಡಿ ರಸ್ತೆಯಲ್ಲಿ ಕೈಗಾರಿಕ ಪ್ರದೇಶಗಳಿದ್ದು, ಭಾರೀ ಗಾತ್ರದ ವಾಹನಗಳು ದಿನನಿತ್ಯವೂ ಇದೇ ಅಂಡರ್ ಪಾಸ್ ನಲ್ಲಿ ಸಂಚರಿಸುತ್ತಿರುತ್ತವೆ. ಕಿರಿದಾದ ಸರ್ವೀಸ್ ರಸ್ತೆಯಿಂದಾಗಿ ಘನ ವಾಹನಗಳು ತಿರುವು ತೆಗೆದುಕೊಳ್ಳಲು ಸಾಕಷ್ಟು ಪ್ರಯಾಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಶಾಲಾ, ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು, ಮುನ್ನಚ್ಚರಿಕಾ ಕ್ರಮವಾಗಿ ಸರ್ವೀಸ್ ರಸ್ತೆ ಅಗಲೀಕರಣ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.













