ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಗೆದ್ದ ಹಣ ನೀಡದೆ ಬೆದರಿಕೆ ಪ್ರಕರಣ: ಐದು ಮಂದಿ ಆರೋಪಿಗಳ ಬಂಧನ
ಕೋಟ: ಆನ್‌ಲೈನ್ ಬೆಟ್ಟಿಂಗ್‌ಗೆ ಪ್ರಚೋದಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಕೋಟ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶಿರಿಯಾರ ಗ್ರಾಮದ ಎತ್ತಿನಟ್ಟಿ ನಿವಾಸಿಗಳಾದ ರೂಪೇಶ್ (23), ಮನೋಜ್ (25), ಕೊಳ್ಕೆಬೈಲು ನಿವಾಸಿ ಸೃಜನ್ ಶೆಟ್ಟಿ (28), ಪಡುಮುಂಡು ನಿವಾಸಿ ರಾಘವೇಂದ್ರ (37), ಶಿರಿಯಾರ ಪೋಸ್ಟ್ ಆಫೀಸ್ ಹತ್ತಿರದ ನಿವಾಸಿ ಕುಶಲ (38) ಬಂಧಿತ ಆರೋಪಿಗಳು.
ದೂರುದಾರ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಸುಮಾರು ಒಂದು ವರ್ಷದ ಹಿಂದೆ ಶಿರಿಯಾರ ನಿವಾಸಿ ಪ್ರದೀಪ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ಆತ ‘ಪಾರ್ಕರ್’ ಎಂಬ ಅಪ್ಲಿಕೇಶನ್ ಮೂಲಕ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದು, ಹೆಚ್ಚು ಲಾಭ ಸಿಗುತ್ತದೆ ಎಂದು ಪ್ರಚೋದಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಪ್ರದೀಪ್ ಪರಿಚಯಿಸಿದ ತಂಡದ ಸದಸ್ಯರಾದ ರೂಪೇಶ್, ಮನೋಜ್, ಧೀರಜ್ ಮೊದಲಾದವರು ವಾಟ್ಸಪ್ ಮೂಲಕ ಕಳುಹಿಸಿದ ಅಪ್ಲಿಕೇಶನ್ ಲಿಂಕ್, ಐಡಿ ಹಾಗೂ ಪಾಸ್‌ವರ್ಡ್ ಬಳಸಿ ದೂರುದಾರ ಬೆಟ್ಟಿಂಗ್ ಆಡಿದ್ದಾರೆ.
ಬೆಟ್ಟಿಂಗ್‌ಗೆ ಅಗತ್ಯವಿದ್ದ ಹಣವನ್ನು ಪ್ರದೀಪ್ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಸೇರಿದಂತೆ ಇತರರ ಮೊಬೈಲ್ ಸಂಖ್ಯೆಗಳ ಮೂಲಕ ಫೋನ್‌ಪೇ, ಗೂಗಲ್‌ಪೇ ಮೂಲಕ ವರ್ಗಾವಣೆ ಮಾಡಲಾಗಿದೆ. ಈ ಪ್ರಕ್ರಿಯೆಯಲ್ಲಿ ದೂರುರದಾರ ಸುಮಾರು ₹25 ಲಕ್ಷ ಹಣವನ್ನು ಸಾಲ ಮಾಡಿ ಹೂಡಿಕೆ ಮಾಡಿದ್ದು, ಬೆಟ್ಟಿಂಗ್‌ನಲ್ಲಿ ₹15 ಲಕ್ಷ ಗೆದ್ದರೂ ಆ ಹಣವನ್ನು ಆರೋಪಿಗಳು ವಾಪಸ್ಸು ನೀಡದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರದೀಪ್ ಸಂಘಟಿತ ತಂಡ ರಚಿಸಿಕೊಂಡು ಶಿರಿಯಾರ ಸೈಬ್ರಕಟ್ಟೆ, ಹಳ್ಳಾಡಿ, ಕೋಟಾ, ಬ್ರಹ್ಮಾವರ ಹಾಗೂ ಕುಂದಾಪುರ ಸುತ್ತಮುತ್ತ ಆನ್‌ಲೈನ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದು, ಅನೇಕ ಯುವಕರಿಗೆ ವಂಚನೆ ಮಾಡಿರುವ ಆರೋಪವೂ ಇದೆ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ನಗದು ರೂಪದಲ್ಲಿ ಇತರರ ಹೆಸರಿನಲ್ಲಿ ಸೊಸೈಟಿಗಳಲ್ಲಿ ಠೇವಣಿ ಇಡಲಾಗುತ್ತಿತ್ತು ಎಂಬುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಾಲಗಾರರ ಒತ್ತಡದಿಂದ ದೂರುರದಾರ ಆತ್ಮಹತ್ಯೆಗೆ ಯತ್ನಿಸುವ ಹಂತಕ್ಕೆ ತಲುಪಿದ್ದರು ಎನ್ನಲಾಗಿದೆ.
ಸುಮಾರು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್ ಅವರನ್ನು ಭೇಟಿಯಾಗಿ ಗೆದ್ದ ₹15 ಲಕ್ಷ ಹಣ ವಾಪಸ್ಸು ಕೇಳಿದಾಗ, ಆರೋಪಿಗಳು ಹಣ ನೀಡಲು ನಿರಾಕರಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 11/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2), 316(2), 112, 351(2), 3(5) ಹಾಗೂ ಐಟಿ ಕಾಯ್ದೆ ಕಲಂ 66(D), ಕೆಪಿ ಆಕ್ಟ್ ಕಲಂ 78ರಂತೆ ಪ್ರಕರಣ ದಾಖಲಿಸಲಾಗಿದೆ.













