ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಕರ್ನಾಟಕ ಸೇನೆಯಿಂದ ಅಭಿನಂದನೆ
ಉಡುಪಿ: ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸುತ್ತಿರುವ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಂಜುನಾಥ್ ಅವರನ್ನು ನಮ್ಮ ಕರ್ನಾಟಕ ಸೇನೆ ವತಿಯಿಂದ ಅಭಿನಂದಿಸಲಾಯಿತು.
ಶುಕ್ರವಾರ (ಜು.17) ನಮ್ಮ ಕರ್ನಾಟಕ ಸೇನೆ ಉಡುಪಿ ಜಿಲ್ಲಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸುಜಯ್ ಪೂಜಾರಿ ಅವರ ನೇತೃತ್ವದಲ್ಲಿ ಆಯುಕ್ತರ ಕಚೇರಿಗೆ ಭೇಟಿ ನೀಡಿದ ಪದಾಧಿಕಾರಿಗಳು, ಮಂಜುನಾಥ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸುಮಾರು 600ಕ್ಕೂ ಹೆಚ್ಚು ಕಡತಗಳನ್ನು ವಿಲೇವಾರಿ ಮಾಡುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿರುವ ಆಯುಕ್ತರು ಜನಪರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಸಂಘಟನೆ ತಿಳಿಸಿದೆ.
ಇಂತಹ ಜನಪರ ಅಧಿಕಾರಿಯ ವಿರುದ್ಧ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಸುಳ್ಳು ಆರೋಪಗಳನ್ನು ಮಾಡಿ ಅವರ ಆತ್ಮಸ್ಥೈರ್ಯ ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಅಪಪ್ರಚಾರಗಳಿಗೆ ಸಾರ್ವಜನಿಕರು ಕಿವಿಗೊಡದೆ, ತಮ್ಮ ಕೆಲಸಗಳಿಗಾಗಿ ನೇರವಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ, ಜಿಲ್ಲಾ ಸಲಹೆಗಾರ ತೇಜಸ್ ರಾವ್, ಜಿಲ್ಲಾ ಉಪಾಧ್ಯಕ್ಷ ನಾಗರಾಜ್, ಜಿಲ್ಲಾ ಕಾರ್ಯದರ್ಶಿ ಸರ್ವೋತ್ತಮ್, ಜಿಲ್ಲಾ ಕಾರ್ಮಿಕ ಅಧ್ಯಕ್ಷ ಸಿದ್ದಣ್ಣ ಎಸ್. ಪೂಜಾರಿ, ಜಿಲ್ಲಾ ಕಾರ್ಮಿಕ ಉಪಾಧ್ಯಕ್ಷ ಮೊಹಮ್ಮದ್ ಜಾಫರ್, ತಾಲೂಕು ಆಟೋ ಚಾಲಕರ ಅಧ್ಯಕ್ಷ ಸತೀಶ್ ಹಾಗೂ ಜಿಲ್ಲಾ ಸದಸ್ಯರಾದ ಮಂಜು, ಪಾಂಡು, ಸಿದ್ದು, ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.













