ಮಲ್ಪೆ: ಖಾರದ ಪುಡಿ ಎರಚಿ ಸುಲಿಗೆ ಚಿನ್ನದ ಸರ ದೋಚಿದ ಆರೋಪಿಯ ಬಂಧನ

Spread the love

ಮಲ್ಪೆ: ಖಾರದ ಪುಡಿ ಎರಚಿ ಸುಲಿಗೆ ಚಿನ್ನದ ಸರ ದೋಚಿದ ಆರೋಪಿಯ ಬಂಧನ

ಉಡುಪಿ: ಮಲ್ಪೆ ಬಂದರು ಸಮೀಪ ಖಾರದ ಪುಡಿ ಎರಚಿ ಮೀನು ವ್ಯಾಪಾರಿಯನ್ನು ಬೆದರಿಸಿ ಚಿನ್ನದ ಸರ ಸುಲಿಗೆ ಮಾಡಿದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕೊಪ್ಪಳ ನಿವಾಸಿ ಮುತ್ತಣ್ಣ (20) ಎಂದು ಗುರುತಿಸಲಾಗಿದೆ.

ದಯಾನಂದ ಕುಂದರ್ ಅವರು ನೀಡಿದ ದೂರಿನ ಪ್ರಕಾರ, ಅವರು ಮಲ್ಪೆ ಬಂದರಿನಲ್ಲಿ ಮೀನು ವ್ಯಾಪಾರ ಕೆಲಸ ಮಾಡುತ್ತಿದ್ದು, ಫೆಬ್ರವರಿ 20ರಂದು ಬೆಳಿಗ್ಗೆ 3 ಗಂಟೆಗೆ ಕೆಲಸಕ್ಕೆ ತೆರಳಿದ್ದರು. ಬೆಳಿಗ್ಗೆ 4.30ರ ಸುಮಾರಿಗೆ ಶೌಚಾಲಯಕ್ಕೆ ಹೋಗಿ ವಾಪಸು ಬಂದರು ಕಡೆಗೆ ಹೊರಟಾಗ ಸಾಹುಕಾರ್ ಬಾರ್ ಬಳಿಯಲ್ಲಿ ಬೆಳಿಗ್ಗೆ ಸುಮಾರು 4.40ಕ್ಕೆ ಓರ್ವ ವ್ಯಕ್ತಿ ಮೀನಿನ ಬಗ್ಗೆ ವಿಚಾರಿಸಿ ಅಕಸ್ಮಾತ್ ಅವರ ಮುಖಕ್ಕೆ ಖಾರದ ಪುಡಿ ಎರಚಿದ್ದಾನೆ.

ನಂತರ ಸ್ವಲ್ಪ ದೂರ ಎಳೆದುಕೊಂಡು ಹೋಗಿ, ಇನ್ನಿಬ್ಬರು ಆರೋಪಿಗಳು ಸೇರಿ ಚಾಕು ತೋರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ನೀಡುವಂತೆ ಬೆದರಿಕೆ ಹಾಕಿದ್ದಾರೆ. ಸರ ನೀಡಲು ನಿರಾಕರಿಸಿದಾಗ ಮೂವರು ಆರೋಪಿಗಳು ಸೇರಿ ಹಲ್ಲೆ ನಡೆಸಿ, ಅಂದಾಜು 6 ಪವನ್ ತೂಕದ (ಸುಮಾರು ರೂ.6 ಲಕ್ಷ ಮೌಲ್ಯದ) ಚಿನ್ನದ ಸರವನ್ನು ಸುಲಿಗೆ ಮಾಡಿದ್ದಾರೆ. ಅಲ್ಲದೆ, ಘಟನೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆಯನ್ನು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಬೆಳ್ಳಿಯಪ್ಪ ಹಾಗೂ ಮಲ್ಪೆ ವೃತ್ತದ ಸಿಪಿಐ ರಾಮಚಂದ್ರ ನಾಯಕ್ ಮಾರ್ಗದರ್ಶನದಲ್ಲಿ, ಮಲ್ಪೆ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಈರಣ್ಣ ಶಿರಗುಂಪಿ ನೇತೃತ್ವದಲ್ಲಿ ಕೈಗೊಳ್ಳಲಾಗಿದ್ದು ಪತ್ತೆ ಕಾರ್ಯಾಚರಣೆಯ ವೇಳೆ ಮಲ್ಪೆ ಪೊಲೀಸ್ ಠಾಣೆಯ ಪಿಎಸ್ಐ ಹುಸೇನ್ ಸಾಬ್ ಚಪ್ಪರಕರ್ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ಆದರ್ಶ ಮತ್ತು ಪಿಸಿ ಬಸವರಾಜ ಹೈದ್ರಿ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.

ಆರೋಪಿಯಿಂದ ಸುಲಿಗೆ ಮಾಡಿದ್ದ 37.570 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love