ಅಂತರ್ ರಾಜ್ಯ ಮನೆಕಳ್ಳತನ ಜಾಲ ಭೇದಿಸಿದ ಮಣಿಪಾಲ ಪೊಲೀಸರು: ‘TATTO-313’ ಗ್ಯಾಂಗ್ನ ಇಬ್ಬರು ಆರೋಪಿಗಳ ಬಂಧನ

Spread the love

ಅಂತರ್ ರಾಜ್ಯ ಮನೆಕಳ್ಳತನ ಜಾಲ ಭೇದಿಸಿದ ಮಣಿಪಾಲ ಪೊಲೀಸರು: ‘TATTO-313’ ಗ್ಯಾಂಗ್ನ ಇಬ್ಬರು ಆರೋಪಿಗಳ ಬಂಧನ

ಮಣಿಪಾಲ: ಅಂತರ್ರಾಜ್ಯ ಮಟ್ಟದಲ್ಲಿ ಮನೆಕಳ್ಳತನ ಕೃತ್ಯಗಳಲ್ಲಿ ತೊಡಗಿದ್ದ ‘TATTO-313’ ಗ್ಯಾಂಗ್ನ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಮಣಿಪಾಲ ಪೊಲೀಸರು ಯಶಸ್ವಿಯಾಗಿದ್ದು, ಅವರಿಂದ ₹7.90 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಳ್ಳಿ ಗ್ರಾಮದ ಕುಂಜಿಬೆಟ್ಟು ಮಂಚಿಕೋಡಿ ನಿವಾಸಿ ಅಮಿತ್ ಡ್ಯಾನಿಯಲ್ ಅವರ ಮನೆಯಲ್ಲಿ ಫೆಬ್ರವರಿ 3 ಮತ್ತು 4ರ ನಡುವೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಕೈಗೊಳ್ಳಲಾಗಿತ್ತು. ಫೆಬ್ರವರಿ 3ರಂದು ಮನೆಗೆ ಬೀಗ ಹಾಕಿ ತೆರಳಿದ್ದ ವೇಳೆ, ಕಳ್ಳರು ಮನೆಯೊಳಗೆ ನುಗ್ಗಿ ಸುಮಾರು 75 ಗ್ರಾಂ ತೂಕದ ₹7 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದರು. ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 15/2026ರಡಿ ಪ್ರಕರಣ ದಾಖಲಾಗಿತ್ತು.

ಜೂನ್ 6ರಂದು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ಪಿಎಸ್ಐ (ತನಿಖೆ) ಶಂಭುಲಿಂಗಯ್ಯ ಹಾಗೂ ಸಿಬ್ಬಂದಿ ಇಂದ್ರಾಳಿ ರೈಲ್ವೆ ಗೋದಾಮು ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಬಂಧಿತರನ್ನು ಬೆಂಗಳೂರಿನ ಸಿಂಗಸಂದ್ರ ನಿವಾಸಿ ದರ್ಶನ್ ಆರ್. (21) ಹಾಗೂ ದಾವಣಗೆರೆ ಜಿಲ್ಲೆಯ ಬಸವನಹಾಳ ನಿವಾಸಿ ಚಂದ್ರು (26) ಎಂದು ಗುರುತಿಸಲಾಗಿದೆ.

ವಿಚಾರಣೆ ವೇಳೆ ಆರೋಪಿಗಳು ರೈಲ್ವೆ ಹಳಿಗಳ ಸಮೀಪದ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು ಬಾಗಿಲು ಒಡೆದು ಕಳ್ಳತನ ನಡೆಸುತ್ತಿದ್ದುದಾಗಿ ಹಾಗೂ ಮತ್ತೊಂದು ಕಳ್ಳತನಕ್ಕೆ ಸಿದ್ಧತೆ ನಡೆಸುತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಬಳಿಯಿದ್ದ ಕಳ್ಳತನಕ್ಕೆ ಬಳಸುವ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡರು.

ಆರೋಪಿಗಳನ್ನು ಠಾಣೆಗೆ ಕರೆತಂದು ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ವಿಚಾರಣೆ ನಡೆಸಿದಾಗ, ಅವರು ಮಣಿಪಾಲ ಠಾಣೆಯ ಕಳ್ಳತನ ಪ್ರಕರಣದ ಆರೋಪಿಗಳು ಎಂಬುದು ದೃಢಪಟ್ಟಿತು. ಬಳಿಕ ನ್ಯಾಯಾಲಯದ ಅನುಮತಿ ಪಡೆದು ಪೊಲೀಸ್ ಕಸ್ಟಡಿಗೆ ಪಡೆದ ಪೊಲೀಸರು ಆರೋಪಿಗಳ ಮಾಹಿತಿ ಆಧರಿಸಿ ಶಿವಮೊಗ್ಗದ ಲಾಡ್ಜ್ ಒಂದರಲ್ಲಿ ಅಡಗಿಸಿಟ್ಟಿದ್ದ ಚಿನ್ನಾಭರಣಗಳನ್ನು ಪತ್ತೆಹಚ್ಚಿದರು.

ವಶಪಡಿಸಿಕೊಂಡ ಸೊತ್ತುಗಳಲ್ಲಿ 39.70 ಗ್ರಾಂ ತೂಕದ ಚಿನ್ನದ ಕರಿಮಣಿ ಸರ, 13.30 ಗ್ರಾಂ ತೂಕದ ಚಿನ್ನದ ನೆಕ್ಲೆಸ್, 3.15 ಗ್ರಾಂ ತೂಕದ ಚಿನ್ನದ ಕಿವಿಯೋಲೆ ಹಾಗೂ 3.87 ಗ್ರಾಂ ತೂಕದ ಚಿನ್ನದ ಚೈನ್ ಸೇರಿ ಒಟ್ಟು 60 ಗ್ರಾಂ ತೂಕದ ₹7.90 ಲಕ್ಷ ಮೌಲ್ಯದ ಚಿನ್ನಾಭರಣಗಳಿವೆ. ಜೊತೆಗೆ ಎರಡು ಮೊಬೈಲ್ ಫೋನ್ಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ತನಿಖೆಯಲ್ಲಿ ಆರೋಪಿಗಳು ತಮ್ಮ ಕೈಗಳ ಮೇಲೆ ‘TATTO-313’ ಎಂಬ ಅಚ್ಚೆ ಹಾಕಿಸಿಕೊಂಡು ಇದೇ ಹೆಸರಿನ ಗ್ಯಾಂಗ್ನ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದುದಾಗಿ ಬೆಳಕಿಗೆ ಬಂದಿದೆ. ಕರ್ನಾಟಕ, ತಮಿಳುನಾಡು ಹಾಗೂ ಆಂಧ್ರಪ್ರದೇಶ ರಾಜ್ಯಗಳ ರೈಲ್ವೆ ನಿಲ್ದಾಣಗಳ ಸಮೀಪದ ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿಕೊಂಡು, ರಾತ್ರಿ ವೇಳೆ ಮುಖಕ್ಕೆ ಮಾಸ್ಕ್, ಕೈಗಳಿಗೆ ಗ್ಲೌಸ್ ಹಾಗೂ ಕಾಲಿಗೆ ಸಾಕ್ಸ್ ಧರಿಸಿ ಕಳ್ಳತನ ನಡೆಸುವುದು ಇವರ ಕಾರ್ಯವೈಖರಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಕರ್ನಾಟಕ ಹಾಗೂ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅಲ್ಲದೆ, 2025ರ ಸೆಪ್ಟೆಂಬರ್ನಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯೂ ಕಳ್ಳತನ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರು ಆರೋಪಿಗಳ ಬಂಧನ ಬಾಕಿ ಇದ್ದು, ಅವರ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.


Spread the love
Subscribe
Notify of

0 Comments