ಅಕ್ಟೋಬರ್ ತಿಂಗಳ ಒಳಗಾಗಿ ನಗರದ ಹಳೆ ಡಿಸಿ ಕಚೇರಿಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ : ಐವನ್ ಡಿ’ಸೋಜಾ

Spread the love

ಅಕ್ಟೋಬರ್ ತಿಂಗಳ ಒಳಗಾಗಿ ನಗರದ ಹಳೆ ಡಿಸಿ ಕಚೇರಿಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆ : ಐವನ್ ಡಿ’ಸೋಜಾ

ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್‌ನ ಸಂಚಾರಿ ಪೀಠ ಅಥವಾ ಶಾಶ್ವತ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಕೇವಲ ವಕೀಲರದ್ದಲ್ಲ, ಇಡೀ ಕರಾವಳಿ ಭಾಗದ ಸಾರ್ವಜನಿಕರ ನ್ಯಾಯಸಮ್ಮತ ಹಕ್ಕಿನ ಬೇಡಿಕೆಯಾಗಿದ್ದು ಇದಕ್ಕೆ ಮನ್ನಣೆಯನ್ನು ರಾಜ್ಯದ ಮುಖ್ಯ ಮಂತ್ರಿಗಳು ನೀಡಿದ್ದು ಅಕ್ಟೋಬರ್ ತಿಂಗಳ ಒಳಗಾಗಿ ನಗರದ ಹಳೆ ಡಿಸಿ ಕಚೇರಿಯಲ್ಲಿ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪನೆಯಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ಸಂಚಾಲಕರಾದ ಐವನ್ ಡಿ’ಸೋಜಾ ತಿಳಿಸಿದರು .

ನಗರದ ಮನಪಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಹೈಕೋರ್ಟ್ ಪೀಠ ಸ್ಥಾಪನೆಗಾಗಿ ಕಳೆದ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಈ ಕುರಿತು ಸರ್ಕಾರಕ್ಕೆ ಅನೇಕ ಮನವಿಗಳನ್ನು ಸಲ್ಲಿಸಲಾಗಿದ್ದು, ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಚರ್ಚೆಗಳು ನಡೆದಿವೆ ಎಂದು ಹೇಳಿದರು.

ವಕೀಲರು, ಕಾನೂನು ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ಕಾರ್ಮಿಕ ಸಂಘಟನೆಗಳ ಮಟ್ಟದಲ್ಲಿಯೂ ಈ ವಿಷಯದ ಕುರಿತು ವ್ಯಾಪಕ ಚರ್ಚೆಗಳು ನಡೆದಿವೆ. ಪೋಸ್ಟ್‌ಕಾರ್ಡ್ ಚಳುವಳಿ, ಪ್ರತಿಭಟನೆ, ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಹೋರಾಟಗಳನ್ನು ನಡೆಸಲಾಗಿದೆ ಎಂದು ವಿವರಿಸಿದರು.

ಕಳೆದ ಬಜೆಟ್ ಅವಧಿಯಲ್ಲಿ ಹೈಕೋರ್ಟ್ ಪೀಠಕ್ಕಾಗಿ ಅನುದಾನ ಮೀಸಲಿಡುವ ವಿಚಾರವೂ ಪ್ರಸ್ತಾಪಗೊಂಡಿತ್ತು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿಗಳು ಮಂಗಳೂರಿನ ಸರ್ಕ್ಯೂಟ್ ಹೌಸ್‌ನಲ್ಲಿ ವಕೀಲರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಅಗತ್ಯವಿದೆ ಎಂಬ ಬೇಡಿಕೆ ನ್ಯಾಯಸಮ್ಮತವಾಗಿದೆ ಎಂದು ಒಪ್ಪಿಕೊಂಡಿದ್ದರು ಎಂದು ಹೇಳಿದರು.

ಕರಾವಳಿ ಭಾಗದ ಜನರು ಸಣ್ಣಪುಟ್ಟ ಪ್ರಕರಣಗಳಿಗೂ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಇದರಿಂದ ಸಮಯ ಹಾಗೂ ಆರ್ಥಿಕ ಹೊರೆ ಎರಡೂ ಹೆಚ್ಚುತ್ತಿದ್ದು, ವಿಶೇಷವಾಗಿ ಬಡ ಮತ್ತು ಮಧ್ಯಮ ವರ್ಗದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಹೈಕೋರ್ಟ್‌ನ ಸಂಚಾರಿ ಪೀಠ ಅಥವಾ ಶಾಶ್ವತ ಪೀಠವನ್ನು ಶೀಘ್ರದಲ್ಲೇ ಸ್ಥಾಪಿಸಬೇಕು ಎಂಬುದು ಕರಾವಳಿ ಭಾಗದ ಜನರ ಒಕ್ಕೊರಲಿನ ಆಗ್ರಹವಾಗಿದೆ. ಸರ್ಕಾರ ಕೇವಲ ಭರವಸೆ ನೀಡುವುದನ್ನು ಬಿಟ್ಟು, ಈ ಭಾಗದ ಜನರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ‌ರಾದ ಎಚ್ ವಿ ರಾಘವೇಂದ್ರ , ಪ್ರಧಾನ ಸರಕಾರಿ ವಕೀಲ ಎಂ.ಪಿ. ನರೊನ್ಹ , ಸಂಘದ ಪದಾಧಿಕಾರಿಗಳಾದ ಗಿರೀಶ್ ಶಟ್ಟಿ, ಶ್ರೀಧರ್, ಸುಜಿತ್ ಉಪಸ್ಥಿತರಿದ್ದರು .


Spread the love
Subscribe
Notify of

0 Comments
Inline Feedbacks
View all comments