ಹಿಜಾಬ್ ವಿಚಾರದಲ್ಲಿ ದ್ವೇಷ ರಾಜಕಾರಣ ಬೇಡ, ಅಭಿವೃದ್ಧಿಯ ವೈಫಲ್ಯ ಮುಚ್ಚಲು ಸಮಾಜ ವಿಭಜನೆ ನಿಲ್ಲಿಸಿ: ಆಸಿಫ್ ಕೋಟೆಶ್ವರ
ಹಿಜಾಬ್ ನಿಷೇಧವನ್ನು ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು “ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣ” ಎಂದು ಟೀಕಿಸಿರುವ ಶಾಸಕ ಯಶ್ ಪಾಲ್ ಸುವರ್ಣ ಅವರ ಹೇಳಿಕೆಯನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷರಾದ ಆಸಿಫ್ ಕೋಟೆಶ್ವರ ತಿಳಿಸಿದ್ದಾರೆ.
ಹಿಜಾಬ್ ಎನ್ನುವುದು ಸಂವಿಧಾನಬದ್ಧ ಧಾರ್ಮಿಕ ಹಕ್ಕಾಗಿದ್ದು, ಅದನ್ನು ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣ ಎಂದು ಬಣ್ಣಿಸುವುದು ಅತ್ಯಂತ ದುರುದ್ದೇಶಪೂರಿತ ಹಾಗೂ ಸಮಾಜದಲ್ಲಿ ದ್ವೇಷ ಬಿತ್ತುವ ಪ್ರಯತ್ನವಾಗಿದ್ದು,
ಬಿಜೆಪಿಯ ನಾಯಕರಿಗೆ ಜನರ ನೈಜ ಸಮಸ್ಯೆಗಳಿಗಿಂತ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುವ ರಾಜಕೀಯವೇ ಮುಖ್ಯವಾಗಿರುವುದು ಈ ಹೇಳಿಕೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.
ಉಡುಪಿ ಜಿಲ್ಲೆಯಲ್ಲಿ ಶಿಕ್ಷಣ, ಉದ್ಯೋಗ, ಮೂಲಸೌಕರ್ಯ, ಮೀನುಗಾರರ ಸಮಸ್ಯೆ, ಬೆಲೆ ಏರಿಕೆ ಹಾಗೂ ಯುವಕರ ಭವಿಷ್ಯದಂತಹ ಪ್ರಮುಖ ವಿಚಾರಗಳ ಬಗ್ಗೆ ಗಮನಹರಿಸಬೇಕಾದ ಶಾಸಕರು ನಿರಂತರವಾಗಿ ಧಾರ್ಮಿಕ ವಿಚಾರಗಳನ್ನು ಕೆದಕಿ ರಾಜಕೀಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಅಭಿವೃದ್ಧಿಯ ವಿಚಾರದಲ್ಲಿ ಸಂಪೂರ್ಣ ವಿಫಲರಾದ ಉಡುಪಿಯ ಶಾಸಕರು ಇದೀಗ ಮತ್ತೆ ಹಿಜಾಬ್ ವಿಚಾರವನ್ನು ಮುಂದಿಟ್ಟುಕೊಂಡು ಸಮಾಜದ ಸಾಮರಸ್ಯ ಹಾಳು ಮಾಡಲು ಹೊರಟಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಹಿಜಾಬ್ ವಿವಾದದ ಸಂದರ್ಭದಲ್ಲಿ ಕೇಸರಿ ಶಾಲುಗಳನ್ನು ಹಾಕಿಸಿ ವಿದ್ಯಾರ್ಥಿಗಳ ನಡುವೆ ವಿಭಜನೆ ಉಂಟುಮಾಡಿದ ಘಟನೆಗಳನ್ನು ಜಿಲ್ಲೆಯ ಜನತೆ ಇನ್ನೂ ಮರೆತಿಲ್ಲ. ಉಡುಪಿಯ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಮಾಡಿದ ಪುಂಡಾಟಿಕೆ ವಿಚಾರಕ್ಕೆ ಕೋಮು ಬಣ್ಣ ಹಚ್ಚಿ ಅದನ್ನು ರಾಜ್ಯ ಮಟ್ಟದ ವಿವಾದವನ್ನಾಗಿ ಮಾಡಿ ಉಡುಪಿ ಜಿಲ್ಲೆಗೆ ಕಪ್ಪು ಚುಕ್ಕೆ ತರುವ ಕೆಲಸವನ್ನು ಶಾಸಕರು ಮಾಡಿದ್ದಾರೆ.
ಇದಲ್ಲದೆ, ಜಿಲ್ಲೆಯ ಕುಂಜಾಲುವಿನಲ್ಲಿ ದನದ ರುಂಡ ಪತ್ತೆಯಾದ ಸಂದರ್ಭದಲ್ಲಿಯೂ ಅದನ್ನು ದೊಡ್ಡ ವಿವಾದವನ್ನಾಗಿ ಮಾಡಲು ಪ್ರಯತ್ನಿಸಿದ್ದು, ಬಳಿಕ ಆರೋಪಿಗಳು ಅನ್ಯಧರ್ಮೀಯರಲ್ಲ ಎಂಬುದು ಬಹಿರಂಗವಾದಾಗ ಶಾಸಕರು ಮುಜುಗರಕ್ಕೀಡಾದ ಘಟನೆ ಜನತೆ ಇನ್ನೂ ಮರೆತಿಲ್ಲ ಎಂದು ಅವರು ತಿಳಿಸಿದ್ದಾರೆ.
ಜಿಲ್ಲೆಯ ಸಾಮರಸ್ಯವನ್ನು ಹಾಳು ಮಾಡಲು ನಿರಂತರ ಪ್ರಯತ್ನಗಳು ನಡೆಯುತ್ತಿದ್ದು, ಜನರು ಈ ರೀತಿಯ ಷಡ್ಯಂತ್ರ ರಾಜಕಾರಣವನ್ನು ಅರ್ಥ ಮಾಡಿಕೊಂಡಿದ್ದಾರೆ ಎಂದು ಆಸಿಫ್ ಕೋಟೇಶ್ವರ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ, ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮವನ್ನು ಎಸ್‌ಡಿಪಿಐ ಉಡುಪಿ ಜಿಲ್ಲಾ ಸಮಿತಿ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ, ಹಿಜಾಬ್ ಎನ್ನುವುದು ಕೇವಲ ಉಡುಪು ಅಲ್ಲ; ಅದು ಮುಸ್ಲಿಂ ಮಹಿಳೆಯರ ಧಾರ್ಮಿಕ ನಂಬಿಕೆ, ವೈಯಕ್ತಿಕ ಗೌರವ ಹಾಗೂ ಸಂವಿಧಾನಬದ್ಧ ಹಕ್ಕಿನ ಪ್ರತೀಕವಾಗಿದೆ. ಈ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆದ ಸಂದರ್ಭದಲ್ಲಿ ರಾಜ್ಯಾದ್ಯಂತ ನಡೆದ ಹೋರಾಟಗಳಲ್ಲಿ ಎಸ್‌ಡಿಪಿಐ ಪಕ್ಷವು ಮುಂಚೂಣಿಯಲ್ಲಿ ನಿಂತು ನಿರಂತರ ಹೋರಾಟ ನಡೆಸಿತ್ತು. ವಿದ್ಯಾರ್ಥಿನಿಯರ ಶಿಕ್ಷಣದ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಹಾಗೂ ಸಂವಿಧಾನದ ಮೌಲ್ಯಗಳ ರಕ್ಷಣೆಯ ಉದ್ದೇಶದಿಂದ ಪಕ್ಷವು ಪ್ರತಿಭಟನೆಗಳು, ಜನಜಾಗೃತಿ ಕಾರ್ಯಕ್ರಮಗಳು ಹಾಗೂ ಕಾನೂನು ಹೋರಾಟಗಳಿಗೆ ಬಲವಾದ ಬೆಂಬಲ ನೀಡಿತ್ತು ಎಂದು ಅವರು ಹೇಳಿದ್ದಾರೆ.
ಮುಂದೆಯೂ ಸಂವಿಧಾನಬದ್ಧ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಅಲ್ಪಸಂಖ್ಯಾತರ ಹಕ್ಕುಗಳ ಪರವಾಗಿ ಎಸ್‌ಡಿಪಿಐ ತನ್ನ ಹೋರಾಟವನ್ನು ಮತ್ತಷ್ಟು ಬಲವಾಗಿ ಮುಂದುವರಿಸಲಿದೆ ಎಂದು ಆಸಿಫ್ ಕೋಟೇಶ್ವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ













