ಜಮೀರ್ ಫಂಡಿಂಗ್ ಆರೋಪ ತಳ್ಳಿ ಹಾಕಿದ SDPI ಅಬ್ದುಲ್ ಮಜೀದ್

Spread the love

ಜಮೀರ್ ಫಂಡಿಂಗ್ ಆರೋಪ ತಳ್ಳಿ ಹಾಕಿದ SDPI ಅಬ್ದುಲ್ ಮಜೀದ್

ಮಂಗಳೂರು: SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಅವರು ದಾವಣಗೆರೆ ದಕ್ಷಿಣ ಉಪಚುನಾವಣೆ ಹಿನ್ನೆಲೆ ಸಚಿವ ಜಮೀರ್ ಅಹಮ್ಮದ್ ಅವರಿಂದ ಫಂಡಿಂಗ್ ಪಡೆಯಲಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಜಮೀರ್ ಅಹಮ್ಮದ್ ಅವರು ಒಂದು ರಾಜಕೀಯ ಪಕ್ಷದ ಸಚಿವರು. ಅವರು ನಮಗೆ ಏಕೆ ಫಂಡಿಂಗ್ ಮಾಡಬೇಕು?” ಎಂದು ಪ್ರಶ್ನಿಸಿದರು. “ನಾವು ಕ್ರೌಡ್ ಫಂಡಿಂಗ್ ಮೂಲಕವೇ ಚುನಾವಣೆ ನಡೆಸುತ್ತೇವೆ. ನಮ್ಮ ಕಾರ್ಯಕರ್ತರು ಮತ್ತು ಜನರು ನಮಗೆ ಹಣ ಸಹಾಯ ಮಾಡುತ್ತಾರೆ. ಜನರು ನಮಗೆ ನೋಟು ಕೊಟ್ಟಿದ್ದಾರೆ, ವೋಟು ಕೊಟ್ಟಿದ್ದಾರೆ. ಆ ರೀತಿಯ ವ್ಯವಸ್ಥೆಯೇ ನಮ್ಮಲ್ಲಿದೆ, ಹೊರಗಿನ ಫಂಡಿಂಗ್ ಪಡೆಯುವ ವ್ಯವಸ್ಥೆ ಇಲ್ಲ” ಎಂದು ಸ್ಪಷ್ಟಪಡಿಸಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು 70 ಶೇಕಡಾ ಅಹಿಂದ ಮತಗಳಿದ್ದು, ಅದರಲ್ಲಿ 38 ಶೇಕಡಾ ಮುಸ್ಲಿಂ ಮತಗಳಿವೆ ಎಂದು ತಿಳಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಮುಸ್ಲಿಂ ನಾಯಕರಿಗೆ ಟಿಕೆಟ್ ನೀಡುವಂತೆ ಸ್ಥಳೀಯರು ಬೇಡಿಕೆ ಇಟ್ಟಿದ್ದರು. ಆದರೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಜನರು ಅಸಮಾಧಾನಗೊಂಡು ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಿದ್ದು, SDPI ಅಭ್ಯರ್ಥಿಗೆ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷವು ಮುಸ್ಲಿಂ ನಾಯಕತ್ವವನ್ನು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದು, ಇದು ಗಂಭೀರ ರಾಜಕೀಯ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದರು. ಅಲ್ಪಸಂಖ್ಯಾತ ನಾಯಕರ ಮೇಲೆ ಮಾತ್ರ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದ್ದು, ಪ್ರಭಾವಿ ನಾಯಕರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗುತ್ತಿಲ್ಲ ಎಂದು ಆರೋಪಿಸಿದರು.

ರಾಜ್ಯದಲ್ಲಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಇನ್ನೂ ನಡೆಯದಿರುವುದನ್ನು ಉಲ್ಲೇಖಿಸಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸುವ ಬಗ್ಗೆ ರಾಜ್ಯ ಸರ್ಕಾರ ಬದ್ಧತೆಯನ್ನು ತೋರಿಸಬೇಕು. ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


Spread the love
Subscribe
Notify of

0 Comments
Inline Feedbacks
View all comments