ಮೇ 31ರಂದು ಸುಮನಸಾ ರಜತ ಮಹೋತ್ಸವಕ್ಕೆ ಚಾಲನೆ

Spread the love

ಮೇ 31ರಂದು ಸುಮನಸಾ ರಜತ ಮಹೋತ್ಸವಕ್ಕೆ ಚಾಲನೆ

ಉಡುಪಿ: ಸಾಮಾಜಿಕ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಕಳೆದ 25 ವರ್ಷಗಳಿಂದ ಗುರುತಿಸಿಕೊಂಡಿರುವ ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಮಹೋತ್ಸವ ವರ್ಷದ ಕಾರ್ಯಕ್ರಮಗಳಿಗೆ ಮೇ 31ರಂದು ಚಾಲನೆ ದೊರೆಯಲಿದೆ ಎಂದು ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ತಿಳಿಸಿದರು.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 31ರಂದು ಸಂಜೆ 5 ಗಂಟೆಗೆ ಕುಂಜಿಬೆಟ್ಟು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರಜತ ಮಹೋತ್ಸವ ವರ್ಷದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಪಡುಬಿದ್ರಿಯ ಯಸ್ಸೆನ್ ಸ್ಪೆಷಲ್ ಎಕನಾಮಿಕ್ ಝೋನ್‌ನ ಮುಖ್ಯಸ್ಥ ಹಾಗೂ ಹಿರಿಯ ಮಹಾ ಪ್ರಬಂಧಕ ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಡುಪಿ ಶಾಸಕ ಯಶಪಾಲ್ ಸುವರ್ಣ ರಜತ ಸಂಭ್ರಮದ ಲೋಗೊ ಅನಾವರಣಗೊಳಿಸಲಿದ್ದಾರೆ ಎಂದು ವಿವರಿಸಿದರು.

ಬುಡ್ನಾರು ಯಕ್ಷ ಸಂಜೀವ ಟ್ರಸ್ಟ್‌ನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಂಗವಾಗಿ ಸಂಜೆ 5 ಗಂಟೆಗೆ ‘ಸುಮಲಹರಿ’ ರಂಗಗೀತಾ ಗಾಯನ ನಡೆಯಲಿದ್ದು, ಸುಮನಸಾ ಇದುವರೆಗೆ ಪ್ರದರ್ಶಿಸಿದ ಆಯ್ದ ನಾಟಕಗಳ ಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಲಿದ್ದಾರೆ. ರಾತ್ರಿ 7 ಗಂಟೆಗೆ ಮಕ್ಕಳ ರಂಗಶಿಬಿರ ‘ಅಟ್ಟಮುಟ್ಟ’ದಲ್ಲಿ ಸಿದ್ಧಗೊಂಡಿರುವ ‘ರಿಟಯರ್ಡ್ ಬೆಕ್ಕು’ ಹಾಗೂ ‘ಸೂಪರ್ ಹೀರೋಸ್ ಆಫ್ ಸುಮನಸಾ’ ನಾಟಕಗಳ ಪ್ರದರ್ಶನ ನಡೆಯಲಿದೆ. ನಾಟಕಗಳನ್ನು ಚರಿತ್ ಸುವರ್ಣ ರಚಿಸಿ ನಿರ್ದೇಶಿಸಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸುಮನಸಾ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಗೌರವಾಧ್ಯಕ್ಷ ಎಂ.ಎಸ್. ಭಟ್, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಉಪಾಧ್ಯಕ್ಷ ವಿನಯ್ ಕಲ್ಮಾಡಿ ಉಪಸ್ಥಿತರಿದ್ದರು.


Spread the love
Subscribe
Notify of

0 Comments