ಉಡುಪಿ | “ನನ್ನ ಮತ – ನನ್ನ ಹಕ್ಕು” : ಪ್ರಜಾಸತ್ತಾತ್ಮಕ ಜಾಗೃತಿ ಮೂಡಿಸಿದ SIR ಕಾರ್ಯಗಾರ
ಉಡುಪಿ: ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಮತದಾನ ಹಕ್ಕಿನ ಮಹತ್ವವನ್ನು ಜನರಿಗೆ ತಿಳಿಸುವ ಉದ್ದೇಶದಿಂದ “ನನ್ನ ಮತ – ನನ್ನ ಹಕ್ಕು” ಶೀರ್ಷಿಕೆಯಡಿ SIR (Special Intensive Revision) ಕಾರ್ಯಗಾರವು ಶನಿವಾರ ಉಡುಪಿ ನಗರದ ಡಾನ್ ಬಾಸ್ಕೋ ಹಾಲ್ನಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ (ರಿ), ಶ್ರೀ ಸಾಮಾನ್ಯ ಆಯೋಗ, ಕಥೋಲಿಕ ಸ್ತ್ರೀ ಸಂಘಟನೆ ಉಡುಪಿ ಡಯಾಸಿಸ್ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ವೇದಿಕೆ ಉಡುಪಿ ಜಿಲ್ಲೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮದರ್ ಆಫ್ ಸಾರೋಸೋ ಚರ್ಚ್ನ ಧರ್ಮಗುರು ಫಾ. ಚಾರ್ಲ್ಸ್ ಮೆನೇಜಸ್ ಉದ್ಘಾಟಿಸಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಮುಹಮ್ಮದ್ ಯಾಸೀನ್ ಪ್ರಾಸ್ತಾವಿಕವಾಗಿ ಮಾತನಾಡಿ ಮತದಾನದ ಮಹತ್ವವನ್ನು ವಿವರಿಸಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಮೌಲಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಕೀಲರಾದ ವಿನಯ್ ಶ್ರೀನಿವಾಸ್ ಮತ್ತು ಐಶ್ವರ್ಯ ರವಿ ಕುಮಾರ್ ಅವರು SIR ಪ್ರಕ್ರಿಯೆಯ ಕುರಿತು ಸಮಗ್ರ ಮಾಹಿತಿ ನೀಡಿದರು. ಮತದಾರರ ಪಟ್ಟಿಯ ಪರಿಷ್ಕರಣೆ, ನೋಂದಣಿ ಮತ್ತು ಹಕ್ಕುಗಳ ಬಳಕೆ ಬಗ್ಗೆ ಅವರು ಮಾರ್ಗದರ್ಶನ ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಚಾರ್ಲ್ಸ್ ಅಂಬ್ಲರ್ ಸ್ವಾಗತಿಸಿದರು. ಕಥೋಲಿಕ ಸಭಾ ಉಡುಪಿ ಪ್ರದೇಶದ ಅಧ್ಯಕ್ಷ ಮೆಲ್ವಿನ್ ಅರಾಹ್ನ, ಸುಗಮ್ಯ ಮಹಿಳಾ ಸಂಘಟನೆಯ ಸಿಲ್ವಿಯಾ ಸುವಾರಿಸ್ ಹಾಗೂ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಸಹ ಸಂಚಾಲಕಿ ಶ್ರೀಮತಿ ರೋಶಿನಿ ಒಲಿವೆರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಜೆರಾಲ್ಡ್ ಪಿಂಟೋ ಧನ್ಯವಾದ ಅರ್ಪಿಸಿದರು. ಶಾಂತಿ ಪಿರೇರಾ ಮತ್ತು ಅಬ್ದುಲ್ ಅಜೀಜ್ ಉದ್ಯಾವರ ಕಾರ್ಯಕ್ರಮವನ್ನು ನಿರೂಪಿಸಿದರು. ವಿವಿಧ ಸಮುದಾಯಗಳ ಪ್ರತಿನಿಧಿಗಳು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.













