ಕದ್ರಿ ಪಾರ್ಕ್ ಬೀದಿ ಬದಿ ವ್ಯಾಪಾರಿಗಳ ತೆರವು ಖಂಡಿಸಿ ಸಿಐಟಿಯು ಪ್ರತಿಭಟನೆ
ಮಂಗಳೂರು: ನಗರದ ಕದ್ರಿ ಪಾರ್ಕ್ ಬಳಿ ಬೀದಿಬದಿ ವ್ಯಾಪಾರ ಮಾಡುತಿದ್ದ ಪಾಲಿಕೆಯ ಅಧಿಕೃತ ಐಡಿ ಕಾರ್ಡ್ ಹೊಂದಿರುವ ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸಿರುವ ನಗರ ಪಾಲಿಕೆಯ ಕ್ರಮವನ್ನು ಖಂಡಿಸಿ ಲಾಲ್‌ಬಾಗ್‌ನಲ್ಲಿರುವ ಮಹಾ ನಗರ ಪಾಲಿಕೆಯ ಮುಂದೆ ಸೋಮವಾರ ಸಿಐಟಿಯು ನೇತೃತ್ವದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, ಕದ್ರಿ ಪಾರ್ಕಿಗೆ ಬರುವ ವಿಹಾರಿಗಳಿಗೆ ತಂಪು ಪಾನೀಯ ನೀಡಿ, ತಿಂಡಿ ತಿನಿಸುಗಳನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಬಡ ಬೀದಿ ವ್ಯಾಪಾರಿಗಳ ಮೇಲೆ ಕಾನೂನು ಬಾಹಿರ ದಾಳಿ ನಡೆಯುತ್ತಿದೆ. ಬೀದಿ ವ್ಯಾಪಾರಿಗಳನ್ನು ಅಪರಾಧಿಗಳಂತೆ ಬಿಂಬಿಸಿ ಪಾಲಿಕೆ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ. ಆದರೂ ಜನಪ್ರತಿನಿಧಿಗಳು ಮೌನ ತಾಳಿದ್ದಾರೆ ಎಂದು ಆರೋಪಿಸಿದರು.
ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಝ್ ಮಾತನಾಡಿ, ಬೀದಿಬದಿ ವ್ಯಾಪಾರ ಕಾಯ್ದೆಯ ಪ್ರಕಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಕುಂದುಕೊರತೆ ನಿವಾರಣಾ ಸಮಿತಿಯ ರಚಿಸಬೇಕು. ಆದರೆ ಮಂಗಳೂರಿನಲ್ಲಿ ಈ ಸಮಿತಿ ಅಸ್ತಿತ್ವದಲ್ಲಿ ಇಲ್ಲ. ಅಲ್ಲದೆ ತಾತ್ಕಾಲಿಕ ಪಟ್ಟಣ ವ್ಯಾಪಾರ ಸಮಿತಿ ಅಸ್ತಿತ್ವದಲ್ಲಿಲ್ಲದ ಸಮಯದಲ್ಲಿ ಬೀದಿ ವ್ಯಾಪಾರಿಗಳ ಮೇಲೆ ಕಾರ್ಯಾಚರಣೆ ನಡೆಸುತ್ತಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ಯೋಗೀಶ್ ಜಪ್ಪಿನಮೊಗರು, ಸಂತೋಷ್ ಬಜಾಲ್, ತಯ್ಯುಬ್ ಬೆಂಗ್ರೆ, ಹನೀಫ್ ಬೆಂಗ್ರೆ, ರಿಝ್ವಾನ್ ಹರೇಕಳ, ಜಗದೀಶ್ ಬಜಾಲ್, ಸಂತೋಷ್ ಆರ್.ಎಸ್, ಮುಝಾಫರ್ ಅಹ್ಮದ್, ಹಂಝ ಮುಹಮ್ಮದ್, ಶಿವಪ್ಪ, ಹಸನ್ ಕುದ್ರೋಳಿ, ಅಬ್ದುಲ್ ಖಾದರ್, ಸ್ಟ್ಯಾನಿ ಡಿಸೋಜ, ವಿಶ್ವನಾಥ್ ಕದ್ರಿ, ಗಂಗಾಧರ್ ಕದ್ರಿ, ಬ್ರಹ್ಮ ಪುತ್ರ, ವಿಶ್ವರಾಜ್, ರಾಜೀವಿ, ಶಾಲಿನಿ, ಗಂಗಮ್ಮ, ಶೈಲಾ ಸುರತ್ಕಲ್, ಫೆಲಿಕ್ಸ್ ಸುರತ್ಕಲ್, ಬಾಲಕೃಷ್ಣ, ವಿಜಯ್ ಜೈನ್, ಸಿಕಂದರ್ ಬೇಗ್, ಕಾಜ ಮೊಹಿಯುದ್ದೀನ್, ರಫೀಕ್ ಪಾಂಡೇಶ್ವರ, ನೌಶಾದ್ ಕಣ್ಣೂರು, ರಿಯಾಝ್ ಮದಕ, ರಾಮಚಂದ್ರ ಭಟ್, ಚಂದ್ರಹಾಸ್ ಪಡೀಲ್ ಗುಡ್ಡಪ್ಪ, ಸೆಲ್ವರಾಜ್ ಪಾಲ್ಗೊಂಡಿದ್ದರು.












