ಜುಲೈ 14 ರಂದು ಬನ್ನಂಜೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಯ ಸಂಭ್ರಮಾಚರಣೆ
2023 ನೇ ಸಾಲಿನಿಂದ ಕರ್ನಾಟಕದ ಸಿದ್ದರಾಮಯ್ಯ ಸರ್ಕಾರದ ಬಹು ನಿರೀಕ್ಷಿತ ಮತ್ತು ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿ, ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ.
ಐದು ಗ್ಯಾರಂಟಿ ಯೋಜನೆಗಳ ಪೈಕಿ ಶಕ್ತಿ ಯೋಜನೆಯನ್ನು ಮೊಟ್ಟಮೊದಲಿಗೆ ಸರ್ಕಾರ ಜಾರಿಗೊಳಿಸಿದೆ. ಶಕ್ತಿ ಯೋಜನೆಯನ್ನು ಜೂನ್ 11, 2023 ರಿಂದ ಜಾರಿಗೊಳಿಸುವ ಮೂಲಕ ರಾಜ್ಯದ ಎಲ್ಲಾ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪ ಸಂಖ್ಯಾತರು ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಒದಗಿಸಿದೆ. ಈ ಶಕ್ತಿ ಯೋಜನೆಯ ಫಲಾನುಭವಿಗಳ ಪ್ರಯಾಣದ ಸಂಖ್ಯೆ ಈಗ 500 ಕೋಟಿ ಗಡಿಯನ್ನು ದಾಟಿರುತ್ತದೆ. ಇದೊಂದು ಸಂಭ್ರಮದ ಸಂಗತಿ. ಹೆಣ್ಣುಮಕ್ಕಳಿಗೆ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಕಲ್ಪಿಸಿರುವಂತಹ ಏಕೈಕ ಸರ್ಕಾರ ಕರ್ನಾಟಕ ಸರ್ಕಾರವಾಗಿದೆ.
ಶಕ್ತಿ ಯೋಜನೆಯಡಿಯಲ್ಲಿ ನಾಡಿನ ಹೆಣ್ಣು ಮಕ್ಕಳು ರಾಜ್ಯದ ಸರ್ಕಾರಿ ಸ್ವಾಮ್ಯದ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಿರುವ ಹೆಗ್ಗಳಿಕೆಯ ಸಂಭ್ರಮವನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಹಾಗೂ ತಾಲ್ಲೂಕು ಸಮಿತಿ ಆಚರಿಸುತ್ತಿದೆ.
ಆದ್ದರಿಂದ, ರಾಜ್ಯದಲ್ಲಿ ಶಕ್ತಿ ಯೋಜನೆ ಅಡಿಯಲ್ಲಿ ಫಲಾನುಭವಿಗಳು 500 ಕೋಟಿ ಪ್ರಯಾಣ ಮಾಡಿರುವುದು ಸಾಂಕೇತಿಕವಾಗಿ ಜುಲೈ 14, 2025 ರಂದು ಬೆಳಿಗ್ಗೆ 9:00 ಗಂಟೆಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಹಾಗೂ ತಾಲ್ಲೂಕುಗಳ ಕೆ.ಎಸ್.ಆರ್.ಟಿ.ಸಿ ಬಸ್ ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಸಮಿತಿಯ ಸದಸ್ಯರುಗಳು ಒಂದು ಬಸ್ಸಿಗೆ ಪೂಜೆಯನ್ನು ಸಲ್ಲಿಸಿ, ಪ್ರಯಾಣಿಕರಿಗೆ ಗುಲಾಬಿ ಹೂವು ಹಾಗೂ ಸಿಹಿ ಹಂಚುವುದರೊಂದಿಗೆ ಆಚರಿಸಲಿದ್ದಾರೆ.
ಅದರಂತೆ ಉಡುಪಿ ಜಿಲ್ಲೆಯ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಉಡುಪಿಯ ಬನ್ನಂಜೆಯ ಕೆ.ಎಸ್.ಆರ್. ಟಿ.ಸಿ.ಬಸ್ ನಿಲ್ದಾಣದಲ್ಲಿ ಬಸ್ ಪೂಜೆ ಹಾಗೂ ಸಾರ್ವಜನಿಕರಿಗೆ ಸಹಿ ಹಂಚುವ ಮೂಲಕ ಸಂಭ್ರಮಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರುಗಳು , ಸದಸ್ಯರುಗಳು, ವಿವಿಧ ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.