ಟ್ಯಾಬೋ ಮೈಕ್ ಆಫ್! ನಡುರಾತ್ರಿ ಉಳ್ಳಾಲದಲ್ಲಿ ಕಿರಿಕ್, ಶಾರದೆಯನ್ನ ರಸ್ತೆಯಲ್ಲಿರಿಸಿ ಪ್ರತಿಭಟನೆ
ಮಂಗಳೂರು: ಉಳ್ಳಾಲದಲ್ಲಿ ನಿನ್ನೆ ರಾತ್ರಿ ನಡೆದ ದಸರಾ ಶೋಭಾಯಾತ್ರೆಯಲ್ಲಿ ಮಧ್ಯರಾತ್ರಿ ಆಗುತ್ತಿದ್ದಂತೆ ಪೊಲೀಸರು ಟ್ಯಾಬ್ಲೊಗಳ ಧ್ವನಿವರ್ಧಕ ಸ್ಥಗಿತಗೊಳಿಸಿದ್ದು ಈ ವೇಳೆ ಪೋಲೀಸರು ಮತ್ತು ಸಾರ್ವಜನಿಕರ ನಡುವೆ ಘರ್ಷಣೆ ನಡೆದಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮೂವರು ಯುವಕರನ್ನ ಉಳ್ಳಾಲ ಪೊಲೀಸರು ವಶಕ್ಕೆ ಪಡೆದಿದ್ದು ಬಂಧಿತರನ್ನ ಬಿಡುಗಡೆ ಮಾಡಲು ಆಗ್ರಹಿಸಿ ಶೋಭಾಯಾತ್ರೆ ಸ್ಥಗಿತಗೊಳಿಸಿ ಠಾಣೆಯ ಎದುರಲ್ಲಿ ಪ್ರತಿಭಟನೆ ನಡೆಸಿದ ಪ್ರಸಂಗ ನಡೆದಿದೆ. ಬಳಿಕ ಬಿಜೆಪಿ ಮುಖಂಡರ ಮಧ್ಯಪ್ರವೇಶದಿಂದ ಪೊಲೀಸರು ಇಬ್ಬರು ಯುವಕರನ್ನ ಬಿಡುಗಡೆಗೊಳಿಸಿದ್ದಾರೆ.
ಉಳ್ಳಾಲದ ಶಾರದಾ ನಿಕೇತನದಲ್ಲಿ ಪೂಜಿಸಲ್ಪಟ್ಟ ಸಾರ್ವಜನಿಕ ಶಾರದಾ ವಿಗ್ರಹದ ಜಲಸ್ತಂಭನದ ಪ್ರಯುಕ್ತ ನಡೆದ ಶೋಭಾಯಾತ್ರೆ ಉಳ್ಳಾಲ ಪೇಟೆ, ವಿದ್ಯಾರಣ್ಯ ನಗರ, ಚೀರುಂಭ ಭಗವತೀ ಕ್ಷೇತ್ರದ ಒಳರಸ್ತೆಯಾಗಿ ಉಳ್ಳಾಲ ಪೊಲೀಸ್ ಠಾಣೆಯ ಬಳಿಯ ಅಬ್ಬಕ್ಕ ವೃತ್ತಕ್ಕೆ ಬಂದಿತ್ತು. ಕೆಲವು ಟ್ಯಾಬ್ಲೊಗಳು ಠಾಣೆಯ ಮುಂಭಾಗದಿಂದ ಹಾದು ಹೋಗಿದ್ದು, ರಾತ್ರಿ ಒಂದು ಗಂಟೆ ಸುಮಾರಿಗೆ ಪೊಲೀಸರು ಬಾಕಿ ಉಳಿದ ಟ್ಯಾಬ್ಲೊಗಳ ಧ್ವನಿವರ್ಧಕಗಳನ್ನ ಸ್ಥಗಿತಗೊಳಿಸಿದ್ದಾರೆ. ಈ ವೇಳೆ ನೆರೆದಿದ್ದ ಯುವಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ಉಂಟಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ರಕ್ಷಿತ್, ಆಶಿಶ್ ಮತ್ತು ಅಶ್ವತ್ಥ ಎಂಬ ಮೂವರು ಯುವಕರನ್ನ ಪೊಲೀಸರು ವಶಕ್ಕೆ ಪಡೆದು ಉಳ್ಳಾಲ ಠಾಣೆಯಲ್ಲಿರಿಸಿದ್ದರು. ಇದರಿಂದ ಆಕ್ರೋಶಗೊಂಡ ಜನರು ಶೋಭಾಯಾತ್ರೆಯನ್ನ ಸ್ಥಗಿತಗೊಳಿಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಠಾಣೆಯ ಮುಂಭಾಗದಲ್ಲಿ ಜಮಾಯಿಸಿದ ಮೊಗವೀರ ಮಹಿಳೆಯರು ಯುವಕರನ್ನ ಬಿಡುಗೊಳಿಸಿದರೆ ಮಾತ್ರ ಶೋಭಾಯಾತ್ರೆ ನಡೆಸುವುದಾಗಿ ಪ್ರತಿಭಟಿಸಿ ಘೋಷಣೆ ಕೂಗಿದ್ದಾರೆ. ತಕ್ಷಣವೇ ಠಾಣೆಗೆ ಭೇಟಿ ನೀಡಿದ ಡಿಸಿಪಿ ಮಿಥುನ್ ಹೆಚ್.ಎನ್ ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನ ಕರೆಸಿಕೊಂಡಿದ್ದಾರೆ. ಶಾರದೋತ್ಸವ ಆಯೋಜಕರಲ್ಲಿ ಡಿಸಿಪಿ ಮಿಥುನ್ ಮಾತುಕತೆ ನಡೆಸಿದರೂ ಪ್ರತಿಭಟನಾಕಾರರ ಮನವೊಲಿಸಲು ಸಾಧ್ಯವಾಗಲಿಲ್ಲ.
ನಸುಕಿನ ವೇಳೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಸಂತೋಷ್ ಬೋಳಿಯಾರ್, ಮೊಗವೀರ ಸಮಾಜದ ಅಧ್ಯಕ್ಷ ಯಶವಂತ ಅಮೀನ್ ಠಾಣೆಗೆ ಆಗಮಿಸಿ ಡಿಸಿಪಿ ಜೊತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಡಿಸಿಪಿಯವರು ಬಂಧಿತರಲ್ಲಿ ರಕ್ಷಿತ್ ಎಂಬಾತನ ವಿರುದ್ಧ ಹಳೆ ಪ್ರಕರಣಗಳಿದ್ದು, ಆತ ಪೊಲೀಸರನ್ನ ಅವಾಚ್ಯವಾಗಿ ನಿಂದಿಸಿದ್ದಾನೆ. ಆತನನ್ನು ಬಿಟ್ಟು ಉಳಿದ ಇಬ್ಬರನ್ನ ಬಿಟ್ಟು ಕಳುಹಿಸುತ್ತೇವೆ, ಶೋಭಾಯಾತ್ರೆ ಮುಂದುವರಿಸುವಂತೆ ಬಿಜೆಪಿ ನಾಯಕರಲ್ಲಿ ವಿನಂತಿಸಿದ್ದಾರೆ. ಬಳಿಕ ಬಿಜೆಪಿ ನಾಯಕರ ಮಧ್ಯಸ್ಥಿಕೆಯಲ್ಲಿ ಮುಂಜಾನೆ 4.30ರ ವೇಳೆ ಶಾರದಾ ಮಾತೆಯ ಶೋಭಾಯಾತ್ರೆ ಮುಂದುವರಿದಿದೆ.
ಇತ್ತ ಶೋಭಾಯಾತ್ರೆ ತೆರಳಿದರೆ, ಡಿಸಿಪಿ ಮಾತಿನ ಮೇರೆಗೆ ಬಿಜೆಪಿ ನಾಯಕರು ಆಶಿಶ್ ಮತ್ತು ಅಶ್ವತ್ ಎಂಬವರ ಬಿಡುಗಡೆಗಾಗಿ ಠಾಣೆಯಲ್ಲಿ ಕಾದುಕುಳಿತ್ತಿದ್ದರು. ಶೋಭಾಯಾತ್ರೆ ಮತ್ತು ಡಿಸಿಪಿ ಸ್ಥಳದಿಂದ ತೆರಳಿದ ನಂತರ ಠಾಣೆಯೊಳಗೆ ಬಂದ ಎಸಿಪಿ ವಿಜಯಕ್ರಾಂತಿ ಬಂಧಿತ ಮೂವರಲ್ಲದೆ, ಪ್ರತಿಭಟನೆ ನಡೆಸಿದ 80-100 ರಷ್ಟು ಜನರ ವಿರುದ್ಧ ಕಾನೂನು ಪ್ರಕಾರ ಎಫ್ಐಆರ್ ದಾಖಲಿಸುವುದಾಗಿ ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಬಿಜೆಪಿ ಮುಖಂಡರು, ನಮಗೆ ಅಷ್ಟು ಮರ್ಯಾದೆ ಇಲ್ವಾ. ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿ ಠಾಣೆಯಿಂದ ಹೊರನಡೆದಿದ್ದಾರೆ. ಮತ್ತೆ ಪರಿಸ್ಥಿತಿ ವಿಕೋಪಕ್ಕೆ ತಿರುಗದಂತೆ ಎಚ್ಚೆತ್ತ ಎಸಿಪಿ ಇಬ್ಬರು ಯುವಕರನ್ನ ಬಿಟ್ಟು ಕಳುಹಿಸಿದ್ದಾರೆ. ಇತ್ತೀಚೆಗೆ ತೊಕ್ಕೊಟ್ಟು ಮೊಸರು ಕುಡಿಕೆ ಉತ್ಸವದ ಘರ್ಷಣೆಯಲ್ಲೂ ಉಳ್ಳಾಲ ಪೊಲೀಸರು ಅಮಾಯಕರನ್ನ ಬಂಧಿಸಿದ ಆರೋಪ ಕೇಳಿಬಂದಿತ್ತು. ಈ ಸಲ ಶಾರದೋತ್ಸವಕ್ಕು ಮತ್ತೆ ಕಿರಿಕ್ ಆಗಿದೆ.
ಪೊಲೀಸರಿಗೆ ಮಂಗಳಾರತಿ ನಿರಾಕರಣೆ
ದಸರಾ ಶೋಭಾಯಾತ್ರೆಯಲ್ಲಿ ಉಳ್ಳಾಲ ಪೊಲೀಸರು ಠಾಣೆಯ ಮುಂಭಾಗದಲ್ಲಿ ಶಾರದಾ ಮಾತೆಗೆ ಹೂ ಹಣ್ಣು ಸಮರ್ಪಿಸಿ ಮಂಗಳಾರತಿ ಸಲ್ಲಿಸುವುದು ವಾಡಿಕೆಯಾಗಿದೆ. ಈ ಬಾರಿ ಪೊಲೀಸರು ಟ್ಯಾಬ್ಬೋ ಸಂಚಾರಕ್ಕೆ ಅಡ್ಡಿಪಡಿಸಿದ್ದರಿಂದ ಅಸಮಧಾನಗೊಂಡಿದ್ದ ಶಾರದೆಯ ಪಲ್ಲಕ್ಕಿ ಹೊತ್ತಿದ್ದ ಭಜಕರ ತಂಡವು ಪೊಲೀಸ್ ಠಾಣೆಯ ಮುಂದೆ ಮಂಗಳಾರತಿಗೆ ಅವಕಾಶ ನೀಡದೆ ಮುಂದಕ್ಕೆ ತೆರಳಿದ್ದಾರೆ.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಕೇಸು
ಟ್ಯಾಬ್ಲೊಗಳನ್ನು ನಿಲ್ಲಿಸಿ ನರ್ತನ ಮಾಡುತ್ತಿದ್ದುದಲ್ಲದೆ, ಸಂಚಾರಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ಯುವಕರು ಪೊಲೀಸರ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಪಿಎಸ್ಐ ಕೃಷ್ಣ ಅವರ ಮೇಲೆ ಕೈಮಾಡಿದ್ದಾರೆಂದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಲ್ಲಾಪು ಸೇವಂತಿಗುಡ್ಡೆ ನಿವಾಸಿ ರಕ್ಷಿತ್ ಶೆಟ್ಟಿ(27) ಮತ್ತು ಇತರರು ಸೇರಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಪ್ರಕರಣ ದಾಖಲಾಗಿದೆ. ಪಿಎಸ್ ಐ ಕೃಷ್ಣ ಅವರ ದೂರಿನ ಮೇರೆಗೆ ಕರ್ತವ್ಯಕ್ಕೆ ಅಡ್ಡಿ ಕೇಸು ದಾಖಲಿಸಲಾಗಿದೆ.
ಉಳ್ಳಾಲದಲ್ಲಿ ಎಸಿಪಿಯಿಂದ ಹಿಡಿದು ಬಹುತೇಕ ಪೊಲೀಸ್ ಅಧಿಕಾರಿಗಳು ಹೊಸಬರಾಗಿದ್ದು, ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯುವಲ್ಲಿ ಎಡವುತ್ತಿದ್ದಾರೆ. ಇದರಿಂದ ಸಣ್ಣ ಪುಟ್ಟ ವಿಚಾರದಲ್ಲೂ ಕಿರಿಕ್ ಆಗಲು ಆಸ್ಪದ ಕೊಡುತ್ತಿದ್ದಾರೆಂಬ ಮಾತು ಕೇಳಿಬರುತ್ತಿದೆ.