ಧಾರ್ಮಿಕ ಚಿಂತನೆಗಳು ಮನಸ್ಸನ್ನು ಸದೃಢವಾಗಿಸುತ್ತದೆ: ರಾಜೇಶ್ ಕೆ.ಸಿ
ಬೈಂದೂರು: ಪುಣ್ಯ ಪ್ರವಚನಗಳು, ಭಜನಾ ಸಂಕೀರ್ತನೆಗಳು, ಉಪನ್ಯಾಸ, ಹರಿಕಥೆ, ಯಕ್ಷಗಾನಗಳಂತಹ ಧಾರ್ಮಿಕ ಚಿಂತನೆಗಳು ಮನುಷ್ಯನ ಮನಸ್ಸನ್ನು ಗಟ್ಟಿಗೊಳಿಸುತ್ತದೆ ಎಂದು ಕುಂದಾಪ್ರ ಕನ್ನಡ ಅಧ್ಯಯನ ಪೀಠದ ಸದಸ್ಯ ರಾಜೇಶ್ ಕೆ.ಸಿ ಅಭಿಪ್ರಾಯ ವ್ಯಕ್ತಪಡಿಸಿದರು.
ಉಪ್ಪುಂದದ ಮಾದಯ್ಯ ಶೆಟ್ರ ಮೂಲಮನೆಯ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಗಣೇಶ್ ಚೌತಿಯ ಉತ್ಸವದ ಅಂಗವಾಗಿ ಸಿದ್ದಮ್ಮ ಮಾದಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಐದು ದಿನಗಳ ಕಾಲ ಟ್ರಸ್ಟ್ ಅಧ್ಯಕ್ಷ ಯು.ಸೀತಾರಾಮ ಶೆಟ್ಟಿ ಅವರು ನಡೆಸಿದ, ಶ್ರೀಮದ್ಭಗವತ್ಸಂಕೀರ್ತನೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹರಿಕಥೆ ಕಾಲಕ್ಷೇಪಗಳ ಮೂಲಕ ಪುರಾಣ ಕಥೆಗಳನ್ನು ಶ್ರವಣ ಮಾಡಿದ ಪರಂಪರೆ ನಮ್ಮದು. ಭಗವಂತನನ್ನು ಕಾಣುವ ಸುಲಭ ಮಾರ್ಗದಲ್ಲಿ ಭಕ್ತಿ ಮಾರ್ಗವೂ ಒಂದು. ಇದರಲ್ಲಿ ಶ್ರವಣ ಭಕ್ತಿ ಅತ್ಯಂತ ಪುಣ್ಯವಾದುದು ಎನ್ನುವ ಅಭಿಪ್ರಾಯ ಹಿರಿಯರಲ್ಲಿ ಇದೆ. ಐದು ದಿನಗಳ ಕಾಲ ಸುಲಲಿತವಾಗಿ ಶೋತ್ರುಗಳಿಗೆ ಭಕ್ತಿಯ ರಸಧಾರೆಯನ್ನು ನೀಡಿದ ಸೀತಾರಾಮ ಶೆಟ್ಟಿಯವರ ಭಕ್ತಿಯ ಪಯಣ ಅಭಿಮಾನದ ಪದ ಪುಂಜಗಳಿಗೆ ಮೀರಿದ್ದಾಗಿದೆ ಎಂದರು.
ಅಂತಾರಾಷ್ಟ್ರೀಯ ಜಾದೂಗಾರ ಓಂ ಗಣೇಶ್ ಉಪ್ಪುಂದ ಮಾತನಾಡುತ್ತಾ, ಅಪೂರ್ವವಾದ ಧಾರ್ಮಿಕ ಜ್ಞಾನ ಹೊಂದಿರುವ ಸೀತಾರಾಮ ಶೆಟ್ಟಿಯವರು ನಮ್ಮೂರ ವರಪುತ್ರರು ಎನ್ನುವ ಅಭಿಮಾನ ನಮಗಿದೆ. ಅವರಲ್ಲಿನ ಆಗಾಧವಾದ ಜ್ಞಾನ ಸಂಪತ್ತು ಮುಂದಿನ ಪೀಳಿಗೆಗೆ ಉಳಿಯಲು ಶಾಶ್ವತವಾದ ಯೋಜನೆಗಳು ನಡೆಯಬೇಕು ಎಂದರು.
ಡಾ.ಎಂ.ಸಚ್ಚಿದಾನಂದ ಶೆಟ್ಟಿ ಯಡ್ತರೆ ಬೈಂದೂರು ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ನಿವೃತ್ತ ವಿಜ್ಞಾನಿ ಡಾ.ಆರ್.ಆರ್.ಕೊಂಗಾವಿ ಇದ್ದರು.
ಈ ಸಂದರ್ಭದಲ್ಲಿ ವೈದ್ಯಕೀಯ ನೆರವು ಹಸ್ತಾಂತರಿಸಲಾಯಿತು. ಚೌತಿ ಸಂಭ್ರಮದ ಅಂಗವಾಗಿ ನಡೆದ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸಿದ್ದಮ್ಮ ಮಾದಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉಪ್ಪುಂದ ಸೀತಾರಾಮ ಶೆಟ್ಟಿ ಸ್ವಾಗತಿಸಿದರು, ಗುತ್ತಿಗೆದಾರ ಬಿ.ಪ್ರಭಾಕರ ಶೆಟ್ಟಿ ವಿಜೇತರ ಪಟ್ಟಿ ವಾಚಿಸಿದರು, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎನ್.ದಿವಾಕರ ಶೆಟ್ಟಿ ನಿರೂಪಿಸಿದರು, ಶ್ರೀ ಉಮಾಮಹೇಶ್ವರ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಯು.ರವಿರಾಜ್ ಶೆಟ್ಟಿ ವಂದಿಸಿದರು.