ಸುರತ್ಕಲ್: ಲಕ್ಕಿ ಸ್ಕೀಂ ಹೆಸರಲ್ಲಿ 15 ಕೋಟಿ ರೂ. ಅಧಿಕ ವಂಚನೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ
ಮಂಗಳೂರು: ಸುರತ್ಕಲ್ ವ್ಯಾಪ್ತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಲಕ್ಕಿ ಸ್ಕೀಂ ಹೆಸರಲ್ಲಿ ಸಾವಿರಾರು ಗ್ರಾಹಕರಿಗೆ 15 ಕೋ.ರೂ. ಅಧಿಕ ವಂಚನೆ ಮಾಡಿದ ಆರೋಪದಲ್ಲಿ ಸುರತ್ಕಲ್ ಮತ್ತು ಬಜ್ಪೆಯ ನಾಲ್ವರನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ಮಾಡಿ ವಂಚಿಸಿದ್ದ ಕಾಟಿಪಳ್ಳ ಒಂದನೇ ಬ್ಲಾಕ್‌ನ ಮಹಾಕಾಳಿ ದೈವಸ್ಥಾನ ಬಳಿಯ ನಿವಾಸಿ ಅಹ್ಮದ್ ಖುರೇಶಿ (34), ಕಾಟಿಪಳ್ಳ ಎರಡನೇ ಬ್ಲಾಕ್‌ನ ಕೋರ್ದಬ್ಬು ದ್ವಾರದ ಬಳಿಯ ನಿವಾಸಿ ನಝೀರ್ ಯಾನೆ ನಾಸಿರ್ (39) ಹಾಗೂ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್‌ನಲ್ಲಿ ವಂಚನೆ ಮಾಡಿದ್ದ ಬಜ್ಪೆ ನಿವಾಸಿ ಮುಹಮ್ಮದ್ ಅಶ್ರಫ್ (43), ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ಹನೀಫ್ (50) ಬಂಧಿತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನ್ಯೂ ಶೈನ್ ಎಂಟರ್‌ಪ್ರೈಸಸ್ ಎಂಬ ಲಕ್ಕೀ ಸ್ಕೀಮ್ ಹೆಸರಲ್ಲಿ ಆಕರ್ಷಕ ಹಾಗೂ ಬಂಪರ್ ಬಹುಮಾನ ಕಾರು, ಬೈಕ್, ಪ್ಲಾಟ್, ಚಿನ್ನ ಕೊಡುವುದಾಗಿ ನಂಬಿಸಿ 9 ತಿಂಗಳು 1 ಸಾವಿರ ರೂ.ಯಂತೆ ಪಾವತಿಸಿ ಕೊನೆಯ 2 ತಿಂಗಳು 1500 ರೂ. ಯಂತೆ ಸುಮಾರು 11ತಿಂಗಳ ಕಾಲ ಆರೋಪಿಗಳು ಹಣ ಕಟ್ಟಿಸಿಕೊಂಡಿದ್ದರು. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಸುಮಾರು 3 ಸಾವಿರ ಮಂದಿಗೆ ಸ್ಕೀಮ್ ಮುಗಿದ ಬಳಿಕ ಬಹುಮಾನ ಅಥವಾ ಕಟ್ಟಿದ ಹಣವನ್ನೂ ನೀಡದೆ 4.20 ಕೋಟಿ ರೂ. ಅಧಿಕ ವಂಚನೆ ಮಾಡಿದ್ದಾರೆ ಎಂದು ಸುರತ್ಕಲ್ ಸೂರಿಂಜೆ ನಿವಾಸಿ ಶಿವಪ್ರಸಾದ್ ಎಂಬವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಸುರತ್ಕಲ್ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಆ.25ರ ತನಕ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳು ವ್ಯವಹಾರ ನಡೆಸಿದ್ದ ಆಯಿಷಾ ಕಾಂಪ್ಲೆಕ್ಸ್ ನ ಕಚೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ಕಚೇರಿ ಹಾಗೂ ಶೈನ್ ಮಾರ್ಟ್ ಕಚೇರಿಯಲ್ಲಿ ಕೃತ್ಯಕ್ಕೆ ಉಪಯೋಗಿಸಿದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್‌ಗಳು, ಡಿವಿಆರ್ ಗಳನ್ನು ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ ಹಾಗೂ ಇನ್ನಿತರ ದಾಖಲಾತಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಂಧಿತ ಆರೋಪಿಗಳ ಪೈಕಿ ಅಹ್ಮದ್ ಖುರೇಶಿ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಕೊಲೆ ಯತ್ನ ಪ್ರಕರಣಗಳು ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ 1 ಪ್ರಕರಣ ದಾಖಲಾಗಿರುತ್ತದೆ. ಆರೋಪಿ ನಝೀರ್ ಯಾನೇ ನಾಸಿರ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
ಇನ್ನೊಂದು ವಂಚನೆ ಪ್ರಕರಣದಲ್ಲಿ ನ್ಯೂ ಇಂಡಿಯಾ ರಾಯಲ್ ಸ್ಕೀಮ್ ಗ್ರೀನ್ ಲೈಟ್ ಲಕ್ಕಿ ಸ್ಕೀಮ್ ಹೆಸರಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಫ್ಲ್ಯಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ನೀಡುವುದಾಗಿ ನಂಬಿಸಿ ಪ್ರತೀ ತಿಂಗಳು 1000 ರೂ. ನಂತೆ 1 ವರ್ಷದ ಅವಧಿಗೆ ಹಣ ಕಟ್ಟಿಸಿಕೊಂಡು ಮೋಸ ಮಾಡಿದ್ದಾರೆ. ಈ ಸ್ಕೀಮ್ ಗೆ ದ.ಕ., ಉಡುಪಿ ಜಿಲ್ಲೆಯ ಸುಮಾರು 13 ಸಾವಿರ ಜನರಿಗೆ ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಅಥವಾ ಬಹುಮಾನಗಳನ್ನು ನೀಡದೇ ವಂಚಿಸಲಾಗಿದೆ ಎಂದು ಭುಜಂಗ ಎ. ಪೂಜಾರಿ ಎಂಬವರು ಸುರತ್ಕಲ್ ಠಾಣೆಗೆ ದೂರು ನೀಡಿದ್ದರು.
ಈ ಸಂಬಂಧ ಕಾರ್ಯಾಚರಣೆ ನಡೆಸಿದ ಸುರತ್ಕಲ್ ಪೊಲೀಸರು ಆರೋಪಿಗಳಾದ ಬಜ್ಪೆ ನಿವಾಸಿ ಮುಹಮ್ಮದ್ ಅಶ್ರಫ್ (43), ಕೃಷ್ಣಾಪುರ 7ನೇ ಬ್ಲಾಕ್ ನಿವಾಸಿ ಮುಹಮ್ಮದ್ ಹನೀಫ್ (50) ಎಂಬವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ, ನಿವೇಶನ, ವಾಹನ, ಬೋಳೂರು ಗ್ರಾಮದ ಮನೆ, ಬಜ್ಪೆಯಲ್ಲಿರುವ ಮನೆ, ಬಜ್ಪೆ ತಾರಿಕಂಬ್ಳದಲ್ಲಿರುವ 5 ಪ್ಲ್ಯಾಟ್ ಗಳು, ಕಾಟಿಪಳ್ಳ ಸಂಶುದ್ದೀನ್ ವೃತ್ತದ ಬಳಿಯ ಬಿಎಂಆರ್ ಕಟ್ಟಡದಲ್ಲಿದ್ದ ಕಂಪ್ಯೂಟರ್ ಉಪಕರಣಗಳು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಗಳ ಬಂಧನ ಕಾರ್ಯಾಚರಣೆಯಲ್ಲಿ ಸುರತ್ಕಲ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಅವರ ನೇತೃತ್ವದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕ ರಘುನಾಯಕ್, ರಾಘವೇಂದ್ರ ನಾಯ್ಕ, ಜನಾರ್ಧನ ನಾಯ್ಕ, ಶಶಿಧರ ಶೆಟ್ಟಿ, ಎಎಸ್ಸೈ ತಾರನಾಥ, ರಾಜೇಶ್ ಆಳ್ವಾ ಹಾಗೂ ಸಿಬ್ಬಂದಿ ರಾಜೇಂದ್ರ ಪ್ರಸಾದ್, ಧನಂಜಯ ಮೂರ್ತಿ, ಅಜಿತ್ ಮ್ಯಾಥ್ಯೂ, ತಿರುಪತಿ, ಕಾರ್ತಿಕ್, ವಿನೋದ್ ಕುಮಾರ್, ಸಂಜೀವ ಕುಮಾರ್, ಓಂಪ್ರಕಾಶ್ ಬಿಂಗಿ, ಮಂಜುನಾಥ ಆಯಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.