ಅಸಹಿಷ್ಣುತೆ, ಅಸಮಾನತೆ, ಅಭಿವೃದ್ಧಿ

Spread the love

ಇಂದು ದೇಶದ ಉದ್ದಗಲಕ್ಕೂ ಅಸಹಿಷ್ಣುತೆಯ ಆಕೃತಿಗಳು ಅಂಗೈಮೇಲಿನ ನಲ್ಲಿಕಾಯಿಯಷ್ಟು ಸ್ಪಷ್ಟವಾಗಿ ಕಾಣುತ್ತಿವೆ. ಈ ಸತ್ಯವನ್ನು ರಾಜಕೀಯ ವ್ಯಕ್ತಿಗಳು ಮರೆ ಮಾಚುವುದು ಅಥವಾ ವಿರೋಧ ಪಕ್ಷಗಳು ಬಂಡವಾಳ ಮಾಡಿಕೊಳ್ಳುವುದು ನಮಗೆ ಅಂತಹ ಆಶ್ಚರ್ಯಕರ ವಿಷಯವಾಗಿ ಕಾಣುವುದಿಲ್ಲ. ಆದರೆ ಅನೇಕ ಪ್ರತಿಭಾವಂತ ಬರಹಗಾರರು, ಬುದ್ಧಿಜೀವಿಗಳು ‘ಅಸಹಿಷ್ಣುತೆ ಎಂಬುದು ಎಲ್ಲಿದೆ? ಕೆಲವು ಅಹಿತಕರ ಘಟನೆಗಳಿಗೆ ಬಣ್ಣಕಟ್ಟಿ ದೇಶದ ಮಾನವನ್ನು ಹರಾಜಿಗಿಡಬೇಡಿ, ನಮ್ಮದು ಸಹಿಷ್ಣುತೆಯ ದೇಶ, ಈಗ ಎಲ್ಲೆಲ್ಲೂ ಸಹಿಷ್ಣುತೆ ತುಂಬಿ ತುಳುಕುತ್ತಿದೆ’ ಎಂದು ಹೇಳಿಕೆ ನೀಡುತ್ತ ತಮ್ಮ ಆತ್ಮಸಾಕ್ಷಿಯನ್ನು ಕಸದ ಬುಟ್ಟಿಗೆ ಎಸೆದಿದ್ದಾರೆ.

ಈ ಸಂದರ್ಭದಲ್ಲಿ ಹಿಂದೆ ನಡೆದ ವಚನ ಚಳವಳಿ ಕುರಿತಾದ ವಾಗ್ವಾದ ನೆನಪಾಗುತ್ತದೆ. ಶಿವಶರಣರ ವಚನಗಳು ‘ಜಾತಿ ವಿರೋಧಿ ಅಲ್ಲ’ ಎಂಬ ಸಂಶೋಧನೆ ಈ ವಚನ ಸಾಹಿತ್ಯ ಸಂವಾದಕ್ಕೆ ಕಾರಣವಾಯಿತು. ಹೀಗೆ ವಚನಗಳು ಜಾತಿ ವಿರೋಧಿ ಅಲ್ಲ ಎಂಬ ನಿಲುವು ತಳೆದ ಬಣ ತನ್ನ ಆತ್ಮಸಾಕ್ಷಿಗೆ ಎಳ್ಳಷ್ಟೂ ದನಿಗೊಡದೆ ಕಲುಷಿತ ತಾಂತ್ರಿಕತೆಯನ್ನು ಅಪ್ಪಟ ವೈಜ್ಞಾನಿಕ ವಿಧಾನ ಎಂಬಂತೆ ತನ್ನ ವಾದವನ್ನು ಸಮರ್ಥಿಸಲು ಪ್ರಯತ್ನಿಸುತ್ತಿತ್ತು. ತನ್ನ ಸಂಶೋಧನೆಗೆ ಅಂಕಿ ಅಂಶಗಳ ಪುರಾವೆ ಇದೆ. ಹಾಗಾಗಿ ಇದೊಂದು ನಿಷ್ಕಳಂಕ ಸತ್ಯ ಎಂಬುದು ಅವರ ತರ್ಕ. ಹಾಗೆ ನೋಡಿದರೆ ಈ ಸಂಶೋಧನೆಯನ್ನು ಪ್ರಶ್ನಿಸಿದ ಚಿಂತಕರು ಅತ್ಯಂತ ಸಂಯಮದಿಂದಲೇ ತಮ್ಮ ಚಿಂತನೆಯನ್ನು ಹರಿಯಬಿಟ್ಟರು. ಏಕೆಂದರೆ ಅವರು ಎದುರಿಸುತ್ತಿದ್ದುದು ಕೇವಲ ಒಂದು ಮನೋಧರ್ಮವನ್ನಷ್ಟೇ ಅಲ್ಲ.

ವೈಜ್ಞಾನಿಕತೆಯ ಹೆಸರಿನಲ್ಲಿ ಸಂಶೋಧಕರು ಬಳಸಿದ ತಾಂತ್ರಿಕತೆ ಇವರಿಗೆ ದೊಡ್ಡ ಸವಾಲಾಗಿತ್ತು. ಈ ಸಂಶೋಧಕರು ವಚನಗಳು ಜಾತಿವಿರೋಧಿ ಅಲ್ಲ ಎಂದು ರುಜುವಾತು ಮಾಡಲು ಸಂಶೋಧನೆಯ ನೆರವು ಪಡೆಯಬೇಕಾಯಿತು. ಏಕೆಂದರೆ ವಚನ ಚಳವಳಿಯ ಜಾತಿವಿರೋಧಿ ನಿಲುವು ಇಂದಿನ ಅಸಹಿಷ್ಣುತೆಯಷ್ಟೇ ಸ್ಪಷ್ಟವಾಗಿ ಕಾಣುತ್ತಿತ್ತು. ಹಿಂದೆ ಶಾಸ್ತ್ರಗಳನ್ನು ಆಧರಿಸಿ ಮಾಡುತ್ತಿದ್ದ ಪ್ರತಿಪಾದನೆಗಳು ಈಗ ತಾಂತ್ರಿಕತೆ ಆಧಾರದ ಮೇಲೆ ಪ್ರತಿಪಾದನೆಯಾಗುತ್ತವೆ!

ಈ ವಾದ ಪ್ರತಿವಾದಗಳ ಅಂತರಾಳದಲ್ಲಿ ನನೆಗುದಿಗೆ ಬಿದ್ದಿರುವ ವಿಷಯ ಎಂದರೆ ಅದು ಅಸಮಾನತೆಯ ಪ್ರಶ್ನೆ. ತಾನು ಕಳೆದುಕೊಳ್ಳುವುದು ಏನೂ ಇಲ್ಲ ಎನ್ನುವ ಬಣ ಅಸಮಾನತೆಯನ್ನು ಗಮನಿಸಿಯೂ ಗಮನಿಸದಂತೆ ಇರಲು ಪ್ರಯತ್ತಿಸುತ್ತದೆ. ಅಸಹಿಷ್ಣುತೆಯ ಪ್ರಶ್ನೆ ಎದು ರಾಗಿರುವ ಈ ಸಂದರ್ಭವನ್ನೇ ನೋಡಿ! ಅಸಹಿಷ್ಣುತೆ ಇಲ್ಲ ಎಂದು ವಾದಿಸುತ್ತಿರುವ ಪ್ರತಿಭಾವಂತರು ಈಗ ಅಭಿವೃದ್ಧಿಯ ಮೊರೆ ಹೋಗುತ್ತಿದ್ದಾರೆ. ಅವರು ಹೇಳುತ್ತಾರೆ- ‘ಅಭಿವೃದ್ಧಿ ಸಹಿಸದ ವಿಚಾರವಾದಿಗಳು ದೇಶದ ಮುನ್ನಡೆಯನ್ನು ಕಂಡು ಅಸೂಯೆ ಪಡುತ್ತಿದ್ದಾರೆ. ನಾವಾದರೋ ಅಭಿವೃದ್ಧಿ ಪಥದಲ್ಲಿರುವವರು; ನಮಗೆ ಅಭಿವೃದ್ಧಿ ಬೇಕು. ಜಗತ್ತು ಪ್ರಗತಿಪಥದಲ್ಲಿ ಸಾಗುತ್ತಿರುವಾಗ ನಾವೇಕೆ ಹಿಂದಿರಬೇಕು, ಈ ದೇಶದಲ್ಲಿ ಯಾರೆಲ್ಲರಿಗೂ ಮುಂದೆ ಬರುವ ಶಕ್ತಿ ಇದೆಯೋ ಅವರೆಲ್ಲ ಮುಂದೆ ಬರಲಿ’.

ಈ ಸಂದರ್ಭದಲ್ಲಿ ನಮ್ಮೆದುರಿಗೇ ಸ್ಪಷ್ಟವಾಗಿ ಕಾಣುವ ಸತ್ಯ ಎಂದರೆ-ಈಗಾಗಲೆ ಬಲಶಾಲಿಗಳಾಗಿರುವವರು ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಿದ್ದಾರೆ. ಆದ್ದರಿಂದ ಅವರು ಮಾತ್ರ ಮೇಲೆ ಬರುತ್ತಾರೆ. ಇದೆಲ್ಲದರ ಫಲವಾಗಿ ಅಸಮಾನತೆ ಹೆಚ್ಚುವುದಷ್ಟೇ ಅಲ್ಲ ಅದು ಮುಂದುವರಿಯುತ್ತಲೇ ಇರುತ್ತದೆ. ನ್ಯಾಯ ನಿಷ್ಠವಾದ ಮನಸ್ಸು ಈ ಅಸಮಾನತೆಗೆ ಸ್ಪಂದಿಸಬೇಕಲ್ಲವೇ? ಆದರೆ ಅಭಿವೃದ್ಧಿ ಪರವಾದ ಈ ಪ್ರತಿಭಾವಂತರಿಗೆ ಅಸಮಾನತೆಯನ್ನು ನೋಡದೆ ಇರಬಲ್ಲ ಜಾಣಕುರುಡಿನ ಕಲೆ ಚಾರಿತ್ರಿಕವಾಗಿ ಕರಗತವಾಗಿದೆ. ಶಾಸ್ತ್ರಗಳು ಔಟ್‌ಡೇಟೆಡ್ ಆದರೇನು? ವಿಜ್ಞಾನ-ತಾಂತ್ರಿಕತೆಗಳನ್ನು ಬಳಸಬಹುದಲ್ಲ!

ಅಭಿವೃದ್ಧಿ- ಅಸಮಾನತೆ-ಅಸಹಿಷ್ಣುತೆಗಳು ಹೇಗೆ ಒಂದಕ್ಕೊಂದು ತಳಕು ಹಾಕಿಕೊಂಡಿವೆ! ಇವುಗಳ ನಡುವೆ ಆಳವಾದ ಸಂಬಂಧವಿದೆ. ಇದರ ಅಂತರಾಳ ದಲ್ಲಿ ಹುದುಗಿರುವ ಮೂಲ ಮನೋಧರ್ಮವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ಹೊಸ ಕಾಲಮಾನದಲ್ಲಿ ಇದು ಯಾವುದೋ ಒಂದು ಜಾತಿಗೆ ಸೀಮಿತವಾಗಿರುವ ರೋಗ ಎಂದು ಭಾವಿಸಬೇಕಾಗಿಲ್ಲ. ಜಾಗತೀಕರಣದ ಈ ಸಂದರ್ಭದಲ್ಲಿ ಈ ರೋಗ ಜಾತ್ಯತೀತವಾಗಿ ಹಬ್ಬಿದೆ. ಅಸಹಿಷ್ಣುತೆ ಈ ರೋಗದ ಒಂದು ಕುರುಹು ಮಾತ್ರ.

ಟೈಫಾಯ್ಡ್‌ನಂತಹ ರೋಗ ಬಂದರೆ ಅದರ ಪರಿಣಾಮ ವಾಗಿ ಹೊಟ್ಟೆನೋವು, ಜ್ವರ, ಭೇದಿಗಳು ಕಾಣಿಸಿಕೊಳ್ಳು ತ್ತವೆ. ಆದರೆ ಔಷಧಿ ಕೊಡಬೇಕಾದುದು ಟೈಫಾಯ್ಡ್‌ ರೋಗಕ್ಕೆ. ಈ ಪ್ರತಿಭಾವಂತರು ಅಸಮಾನತೆ ಇದ್ದರೂ ಚಿಂತೆಯಿಲ್ಲ, ಅಸಹಿಷ್ಣುತೆ ಹೆಚ್ಚಾದರೂ ಚಿಂತೆಯಿಲ್ಲ ‘ಅಭಿ ವೃದ್ಧಿ’ ಮಾತ್ರ ಬೇಕು ಎಂದು ಬಯಸುತ್ತಾರೆ. ಈ ಬಯ ಕೆಯ ಹಿಂದಿರುವ ಆ ಮನೋಧರ್ಮ ಯಾವುದು? ಈ ಪ್ರಲೋಭನೆಗೆ ಧಾರ್ಮಿಕ ಸಂಸ್ಥೆಗಳು, ಆರ್ಥಿಕ ಸಂಸ್ಥೆ ಗಳು, ಸ್ವಯಂ ಸೇವಾ ಸಂಸ್ಥೆಗಳೂ ಸುಲಭವಾಗಿ ಒಳಗಾ ಗುತ್ತಿವೆ. ಈ ಕುರಿತು ಆಳವಾದ ಚರ್ಚೆ ಅಗತ್ಯ.

ಅಸಹಿಷ್ಣುತೆಯ ವಿರುದ್ಧ ದನಿಎತ್ತಿ ಪ್ರಶಸ್ತಿ ಹಿಂತಿರುಗಿಸಿದವರಲ್ಲಿ ಅನೇಕರು ತಾವು ಬಿಜೆಪಿಯನ್ನಷ್ಟೇ ಗುರಿಯಾಗಿಟ್ಟುಕೊಂಡು ಪ್ರಶಸ್ತಿ ಹಿಂತಿರುಗಿಸುತ್ತಿಲ್ಲವೆಂದೂ, ತಾವು ಪ್ರಶಸ್ತಿ ಹಿಂತಿರುಗಿಸುತ್ತಿರುವುದಕ್ಕೂ ಕಾಂಗ್ರೆಸ್-ಬಿಜೆಪಿ ಸಂಘರ್ಷಕ್ಕೂ ಸಂಬಂಧವಿಲ್ಲವೆಂದೂ, ತಮ್ಮ ನಿಲುವು ಈ ಎಲ್ಲವನ್ನೂ ಮೀರಿದ್ದೆಂದು ಹೇಳುತ್ತಿದ್ದಾರೆ.

ಈ ನಿಲುವು ಉದ್ದೇಶಿಸುತ್ತಿರುವ ಆ ಮನೋಧರ್ಮದ ಕುರಿತು ಸ್ಪಷ್ಟನೆ ಬೇಕಾಗಿದೆ. ಅತ್ಯಂತ ಜಟಿಲವೂ ಸಂಕೀರ್ಣವೂ ಆದ ಈ ವಿದ್ಯಮಾನದ ಕೇಂದ್ರದಲ್ಲಿ ಹರಳುಗಟ್ಟಿದ ಮನೋಧರ್ಮ ಒಂದಿದೆ. ಅದು ‘ಎಲ್ಲರೂ ಜೊತೆಗೂಡಿ ಎಲ್ಲರ ವಿಕಾಸ’ ಎಂದು ಹೇಳುತ್ತಲೇ ಅಸಮಾನತೆಯ ಸೋಪಾನದ ಮೇಲೆ ಅಭಿವೃದ್ಧಿಯನ್ನು ಕಟ್ಟಬಯಸುತ್ತದೆ. ಮೋದಿ ಕಲ್ಪನೆಯ ಈ ಅಭಿವೃದ್ಧಿ ಆತ್ಮವಂಚನೆಯ ಅಭಿವೃದ್ಧಿಯಲ್ಲದೆ ಮತ್ತೇನು?

ಸಂಪತ್ತಿನ ಸಮಾನ ಹಂಚಿಕೆಯ ಆದರ್ಶವನ್ನು ನೆಪ ಮಾಡಿಕೊಂಡು ಕಮ್ಯುನಿಸ್ಟ್ ವಾದಿಗಳನ್ನು ತಮಾಷೆ ಮಾಡುತ್ತಿದ್ದ ಕಾಲ ಒಂದಿತ್ತು. ಅದಕ್ಕೇನಂತೆ, ಸಂಪತ್ತನ್ನು ಸಮಾನವಾಗಿ ಹಂಚಿ, ಎಲ್ಲರಿಗೂ ತಲಾ ಮೂರು ನಯಾಪೈಸೆ ಬರುತ್ತದೆ ಎಂದು ಲೇವಡಿ ಮಾಡುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ಸಮಾನ ಹಂಚಿಕೆಯಿಂದ ಸುಭಿಕ್ಷ ಸಾಧ್ಯವಾಗುವಷ್ಟು ಸಂಪತ್ತು ನಮ್ಮಲ್ಲಿದೆ. ಆದರೆ ಇಂದು ಅಭಿವೃದ್ಧಿಯ ಹೆಸರಿನಲ್ಲಿ ಕೆಲವೇ ಮಂದಿ ಕುಬೇ ರರಾಗಿದ್ದಾರೆ. ಇವರಲ್ಲಿ ಶೇಖರವಾಗಿರುವ ಸಂಪತ್ತು ವಿಧ್ವಂಸಕಕಾರಿಯಾಗಿ ಕೆಲಸ ಮಾಡುತ್ತಿದೆ.

ದೇಶದ ಉದ್ದಗಲಕ್ಕೂ ವಿಚ್ಛಿದ್ರಕಾರಿ ಶಕ್ತಿಗಳು ಅನೈತಿಕ ಹಣ ಬಲದಿಂದ ಅಸಮಾನತೆ, ಅನ್ಯಾಯ, ಅಸಹಿಷ್ಣುತೆಗಳು ವಿಜೃಂಭಿಸುವಂತೆ ಮಾಡುತ್ತವೆ. ಎಲ್ಲರಲ್ಲೂ ವಾಮಮಾರ್ಗದ ಯಶಸ್ಸಿನ ಕನಸನ್ನು ಬಿತ್ತುತ್ತವೆ. ಇಡೀ ದೇಶ ಕೊಳೆತುಗೊಬ್ಬರವಾದಾಗ ಮೋದಿ ಕೃಪಾಪೋಷಿತ ಕುಬೇರ ಹೆಮ್ಮರಗಳು ಆಕಾಶದೆತ್ತರಕ್ಕೆ ಬೆಳೆಯುತ್ತವೆ.

ಇಂದು ನಮಗೆ ಬೇಕಿರುವುದು ಅಭಿವೃದ್ಧಿಯಲ್ಲ. ಬೃಹತ್ ಕೈಗಾರಿಕೆ, ಸ್ಮಾರ್ಟ್‌ಸಿಟಿಗಳೂ ಅಲ್ಲ. ಸಾವಿರ ವರ್ಷಗಳ ಹಿಂದಿನ ಕವಿರಾಜಮಾರ್ಗದ ಆಶಯ- ‘ಕಸವರ (ಚಿನ್ನ) ಮೆಂಬುದು ನೆರೆಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಸಾಧ್ಯವಾಗುವ ವಾತಾವರಣ. ಇದರ ಅರ್ಥ ಚಿನ್ನ ಅಥವಾ ಸಂಪತ್ತು ಎಂಬುದು ಪರಧರ್ಮ, ಪರವಿಚಾರಗಳನ್ನು ತಾಳಿಕೊ ಳ್ಳುವ ವಿಶಾಲ ಮನೋಧರ್ಮವಲ್ಲದೆ ಮತ್ತೇನೂ ಅಲ್ಲ.


Spread the love