ಉಡುಪಿಯಲ್ಲಿ  ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿಗೆ ಸಕಲ ಸಿದ್ಧತೆ

Spread the love

ಉಡುಪಿಯಲ್ಲಿ  ಕೃಷ್ಣ ಜನ್ಮಾಷ್ಟಮಿ, ವಿಟ್ಲಪಿಂಡಿಗೆ ಸಕಲ ಸಿದ್ಧತೆ

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಗಸ್ಟ್ 23 ಮತ್ತು 24 ರಂದು ವಿಜೃಂಭಣೆಯಿಂದ ಜರಗಲಿದ್ದು, ಸಕಲ ಸಿದ್ಧತೆಗಳು ನಡೆಯುತ್ತಿವೆ. ವಿಶೇಷವಾಗಿ ಕೃಷ್ಣ ಮಠವನ್ನೊಳಗೊಂಡ ಅಷ್ಠಮಠಗಳಲ್ಲಿ ತಯಾರಿ ಭರದಿಂದ ಸಾಗಿದ್ದು, ಹಬ್ಬದ ಕಳೆ ಬಂದಿದೆ. ಈಗಾಗಲೇ ಅಷ್ಟಮಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿವೆ.

23ರಂದು ಮಧ್ಯರಾತ್ರಿ 12.12ಕ್ಕೆ ಚಂದ್ರೋದಯ ಕಾಲಕ್ಕೆ ಕೃಷ್ಣನಿಗೆ ಮಹಾಪೂಜೆ ನೆರವೇರಿಸಿ ಅರ್ಘ್ಯಪ್ರದಾನ ಮಾಡಲಾಗು ವುದು. ಚಂದ್ರನಿಗೂ ತುಳಸಿ ವೇದಿಕೆ ಸಮೀಪ ಅರ್ಘ್ಯ ಪ್ರದಾನ ನಡೆಯಲಿದೆ.

24ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದ್ದು, ಬೆಳಿಗ್ಗೆ ಮಹಾಪೂಜೆಯ ಬಳಿಕ ಭಕ್ತರಿಗೆ ಕೃಷ್ಣನ ಪ್ರಸಾದ ವಿತರಣೆ ಮಾಡಲಾಗುವುದು. ಮಧ್ಯಾಹ್ನ 3ಕ್ಕೆ ರಥಬೀದಿಯಲ್ಲಿ ಕೃಷ್ಣನ ಲೀಲೋತ್ಸವ ನಡೆಯಲಿದೆ. ಸದ್ಯ ಚಾತುರ್ಮಾಸ್ಯ ಇರುವ ಕಾರಣ ಮೂಲದೇವರನ್ನು ಹೊರಗೆ ತರುವಂತಿಲ್ಲ. ಹಾಗಾಗಿ, ಕೃಷ್ಣನ ಮೃಣ್ಮಯ ಮೂರ್ತಿಯನ್ನು ಬಂಗಾರದ ರಥದಲ್ಲಿ ಕೂರಿಸಿ ರಥಬೀದಿಯಲ್ಲಿ ಉತ್ಸವ ಮಾಡಲಾಗುವುದು.

ಮುಖ್ಯವಾಗಿ ಕಡೆಗೋಲು ಕೃಷ್ಣನಿಗೆ ಪ್ರಿಯವಾದ ಉಂಡೆ- ಚಕ್ಕುಲಿ ತಯಾರಿಸುವ ಕಾರ್ಯ ಕೃಷ್ಣ ಮಠದಲ್ಲಿ ನಡೆಯುತ್ತಿದೆ. ಸುಮಾರು ಒಂದು ಲಕ್ಷದಷ್ಟು ಚಕ್ಕುಲಿ ಮತ್ತು ಅಷ್ಟೇ ಪ್ರಮಾಣದ ಉಂಡೆ ತಯಾರಿಸಲಾಗುತ್ತಿದೆ. ಇದಕ್ಕಾಗಿ ನುರಿತ ಬಾಣಸಿಗರು ಸಿದ್ಧತೆಯಲ್ಲಿ ತೊಡಗಿದ್ದಾರೆ. ಬಾಯಲ್ಲಿ ನೀರೂರಿಸುವ ಚಕ್ಕುಲಿ ಮತ್ತು ಉಂಡೆ ಪ್ರಸಾದವನ್ನು ಅಷ್ಟಮಿಯಂದು ಕೃಷ್ಣನಿಗೆ ಅರ್ಪಿಸಲಾಗುತ್ತದೆ. ಆ ಬಳಿಕ ಕೃಷ್ಣಮಠಕ್ಕೆ ಬಂದ ಭಕ್ತರಿಗೆ ವಿತರಿಸಲಾಗುತ್ತದೆ. ಸಾರ್ವಜನಿಕರಿಗೆ ವಿಶೇಷ ಅನ್ನಸಂತರ್ಪಣೆ ಮಠದ ವತಿಯಿಂದ ನೀಡಲಾಗುತ್ತದೆ. ಬಿಸಿಯೂಟ ನೀಡುತ್ತಿರುವ   ಶಾಲೆಗಳ   ಮಕ್ಕಳಿಗೆ ಮುದ್ದುಕೃಷ್ಣ ವೇಷ ಸ್ಪರ್ಧೆಗಳನ್ನು ನಡೆಸಲಾಗುತ್ತಿದೆ. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಶಾಲೆಯಲ್ಲೇ ಬಹುಮಾನ ನೀಡಲಾಗುತ್ತಿದೆ.

ಈಗಾಗಲೇ ರಥಬಿದಿಯಲ್ಲಿ ಮೊಸರು ಕುಡಿಕೆಗೆ ಸಿದ್ದತೆ ಆರಂಭವಾಗಿದೆ. ಕೃಷ್ಣ ಮಠದ ಒಳಗೂ -ಹೊರಗೂ ಈ ಸಂಭ್ರಮ ಕಾಣಿಸಿಕೊಳ್ಳುವದರಿಂದ ಸಕಲ ಸಿದ್ದತೆ ಭರದಿಂದ ಸಾಗುತ್ತಿದೆ. ಹುಲಿವೇಷಧಾರಿಗಳು, ಮುದ್ದು ಕೃಷ್ಣ ವೇಷಾಧಾರಿಗಳು ಈ ಸಂಭ್ರಮವನ್ನು ಇಮ್ಮಡಿಗೊಳಿಸಲಿದ್ದಾರೆ.

ವಿಟ್ಲಪಿಂಡಿಯ ಸಂಜೆ ರಾಜಾಂಗಣದಲ್ಲಿ ಹುಲಿ ವೇಷ ಕುಣಿತ ನಡೆಯಲಿದ್ದು, ಬಹುಮಾನ ನೀಡಲಾಗುವುದು. ಕೃಷ್ಣಾಷ್ಟಮಿ ಅಂಗವಾಗಿ ಚಿಣ್ಣರಿಗೆ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಗುವುದು. ಜತೆಗೆ, ಶಾಲೆಗೆ ಲಡ್ಡು ಮತ್ತು ಚಕ್ಕುಲಿಯನ್ನು ತಲುಪಿಸಲಾಗುತ್ತದೆ.

ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಬೆಳಿಗ್ಗಿನಿಂದ ರಾತ್ರಿಯವರೆಗೆ ಭಜನೆ, ಪಾರಾಯಣ, ಲಕ್ಷಾರ್ಚನೆ, ಮಹಾಪೂಜೆ, ಲಡ್ಡು ಸೇವೆ, ರಾತ್ರಿಪೂಜೆ, ಪ್ರವಚನಗಳು ನಡೆಯಲಿವೆ.

Click Here To View More Photos


Spread the love