ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಸಿಂಗಾರಗೊಂಡಿದೆ 10 ಪಿಂಕ್ ಮತಗಟ್ಟೆಗಳು

Spread the love

ಉಡುಪಿ ಜಿಲ್ಲೆಯಲ್ಲಿ ಮಹಿಳಾ ಮತದಾರರನ್ನು ಆಕರ್ಷಿಸಲು ಸಿಂಗಾರಗೊಂಡಿದೆ 10 ಪಿಂಕ್ ಮತಗಟ್ಟೆಗಳು

ಉಡುಪಿ: ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಒಟ್ಟು 10 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಮತಗಟ್ಟೆಗಳು ಅತ್ಯಾಕರ್ಷಣೀಯವಾಗಿ ಶೃಂಗಾರಗೊಂಡು ಮತದಾರರನ್ನು ಆಕರ್ಷಿಸುತ್ತಿವೆ.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಾಪಶಿಯವರು, ಕುರ್ಕಾಲು ಪಿಂಕ್ ಮತಗಟ್ಟೆ ಮುಂತಾದ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಲ್ಲ ಪಿಂಕ್ ಮತಗಟ್ಟೆಗಳು ಪಿಂಕ್ ಬಣ್ಣದಿಂದ ಕಂಗೊಳಿಸುತ್ತಿದ್ದು, ಬಲೂನ್, ತೋರಣ, ಫ್ಲೆಕ್ಸ್ ಗಳಿಂದ ಕಂಗೊಳಿಸುತ್ತಿವೆ. ಮಹಿಳಾ ಮತದಾರರ ಸಂಖ್ಯೆ ಶೇ. 50ಕ್ಕಿಂತಲೂ ಅಧಿಕವಿರುವ ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಲಿ ಚುನಾವಣಾಧಿಕಾರಿ ಸೇರಿದಂತೆ ಎಲ್ಲ ಸಿಬ್ಬಂದಿಗಳು ಮಹಿಳೆಯರೇ ಇರುತ್ತಾರೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಕಲ್ಪನೆಯನ್ನು ಅಳವಡಿಸಲಾಗಿದೆ.

ಬೈಂದೂರು ಕ್ಷೇತ್ರದ ಶಿರೂರು ಗ್ರಾಮ ಪಂಚಾಯತ್ ಕಚೇರಿಯಲ್ಲಿ 396 ಮಹಿಳಾ ಮತದಾರರು, ಕುಂದಾಪುರ ವಡೇರಹೋಬಳಿ ಪಿ.ವಿ.ಎಸ್ ಸರೋಜಿನಿ ಮಧುಸೂದನ ಕುಶೆ ಸರಕಾರಿ ಪ್ರೌಢಶಾಲೆಯಲ್ಲಿ 552 ಮಹಿಳಾ ಮತದಾರರು, ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿನ ಒಟ್ಟು 3 ಮತಗಟ್ಟೆಗಳಲ್ಲಿ 1247 ಮಹಿಳಾ ಮತದಾರರು, ಕನ್ನರ್ಪಾಡಿಯ ಸೈಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಯ ಉತ್ತರ ಭಾಗದ ಮತಗಟ್ಟೆಯಲ್ಲಿ 546 ಮಹಿಳಾ ಮತದಾರರು ಹಾಗೂ ದಕ್ಷಿಣ ಭಾಗದ ಮತಗಟ್ಟೆಯಲ್ಲಿ 356 ಮಹಿಳಾ ಮತದಾರರು, ಕಾಪು ವಿಧಾನಸಭಾ ಕ್ಷೇತ್ರದ ಕುರ್ಕಾಲು ಗ್ರಾಮ ಪಂಚಾಯತ್ ಕಚೇರಿ ಮತಗಟ್ಟೆಯಲ್ಲಿ 648 ಮಹಿಳಾ ಮತದಾರರು, ಕಾರ್ಕಳ ಕ್ಷೇತ್ರದ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉತ್ತರ ಭಾಗದ ಮತಗಟ್ಟೆಯಲ್ಲಿ 665 ಹಾಗೂ ದಕ್ಷಿಣ ಭಾಗದ ಮತಗಟ್ಟೆಯಲ್ಲಿ 553 ಮಹಿಳಾ ಮತದಾರರಿದ್ದು, ಇಲ್ಲಿ ಈ ಪಿಂಕ್ ಮತಗಟ್ಟೆಗಳನ್ನು ನಿರ್ಮಿಸಲಾಗಿದೆ.

ಎಲ್ಲರೂ ಪಿಂಕ್ ಬಣ್ಣದ ಉಡುಪು ಧರಿಸಿರುತ್ತಾರೆ, ಮಹಿಳಾ ಮತದಾರರಿಗೆ ಮಾತ್ರ ಮೀಸಲಾದ ಈ ಮತಗಟ್ಟೆಯಲ್ಲಿ, ಅಶಕ್ತ ಮಹಿಳೆಯರಿಗೆ ವೀಲ್ ಚೇರ್ ಸೌಲಭ್ಯ ಹಾಗೂ ಮತದಾನ ಮಾಡಲು ಮಹಿಳೆಯರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ.

ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ಪ್ರೇರೇಪಿಸಲು ಈ ಸಖಿ ಪಿಂಕ್ ಮತಗಟ್ಟೆಗಳನ್ನು ಚುನಾವಣಾ ಆಯೋಗದ ನಿರ್ದೇಶನದಂತೆ , ಮಹಿಳಾ ಮತದಾರರು ಅಧಿಕ ಸಂಖ್ಯೆಯಲ್ಲಿರುವ ಮತಗಟ್ಟೆಗಳಲ್ಲಿ ಪ್ರಾರಂಭಿಸಲಾಗಿದೆ.


Spread the love