ಉಡುಪಿ ನಗರ ಸಭೆಗೆ ಧಿಕ್ಕಾರ ಎಂಬ ಬ್ಯಾನರ್ ಅಳವಡಿಸಿ ಶ್ರಮದಾನಕ್ಕೆ ಸಿದ್ಧವಾಗಿರುವ 40 ಜನ ಯುವಕರ ತಂಡ

Spread the love

ಉಡುಪಿ ನಗರ ಸಭೆಗೆ ಧಿಕ್ಕಾರ ಎಂಬ ಬ್ಯಾನರ್ ಅಳವಡಿಸಿ ಶ್ರಮದಾನಕ್ಕೆ ಸಿದ್ಧವಾಗಿರುವ 40 ಜನ ಯುವಕರ ತಂಡ

ಉಡುಪಿ : ಉಡುಪಿ ತಾಲೂಕಿನ 76 ಬಡಗಬೆಟ್ಟು ಗ್ರಾಮದಲ್ಲಿ ಹಾದುಹೋಗುವ ಕುಕ್ಕಿಕಟ್ಟೆಯ ಮುಖ್ಯರಸ್ತೆಯಲ್ಲಿ ಕಳೆದ ಹಲವಾರು ವರ್ಷಗಳಿಂದ ಚರಂಡಿ ಸಮಸ್ಯೆ ತಲೆದೋರಿದೆ. ಇಲ್ಲಿ ಸಾರ್ವಜನಿಕರು ಹಾಗೂ ಸ್ಥಳೀಯರು ಹಗಲು-ರಾತ್ರಿಯೆನ್ನದೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಇದು ಉಡುಪಿ ನಗರ ಸಭೆಯ ವ್ಯಾಪ್ತಿಯಲ್ಲಿರುತ್ತದೆ. ರಸ್ತೆಯ ಒಂದು ಬದಿ ಇಂದಿರಾನಗರ ವಾರ್ಡ್ ಹಾಗೂ ಇನ್ನೊಂದು ಬದಿ ಚಿಟ್ಪಾಡಿ ವಾರ್ಡಿಗೆ ಸೇರಿದ್ದಾಗಿದ್ದು ಸಮಸ್ಯೆ ಬಗ್ಗೆ ಸಾರ್ವಜನಿಕರು ಹಾಗೂ ಸ್ಥಳೀಯರು ನಗರಸಭೆ ಅಧಿಕಾರಿಗಳು ಹಾಗೂ ನಗರಸಭಾ ಸದಸ್ಯರುಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ.

ಸಮಸ್ಯೆಯನ್ನು ಗಮನಿಸಿದ ಸಾಮಾಜಿಕ ಕಾರ್ಯಕರ್ತರಾದ ಅನ್ಸಾರ್ ಅಹಮದ್ ರವರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಪರಿಹಾರ ದೊರಕಿಸಿಕೊಡುವ ಸಂಕಲ್ಪವನ್ನು ಮಾಡಿರುತ್ತಾರೆ. ಸಮಸ್ಯೆ ಇರುವ ಸ್ಥಳದಲ್ಲಿ ಮೇಲ್ಕಾಣಿಸಿದ ಎರಡು ಬ್ಯಾನರ್ ಗಳನ್ನು ಅಳವಡಿಸಿ ಉಡುಪಿ ನಗರಸಭೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಜುಲೈ 18 ತಾರೀಖಿನವರೆಗೆ ಗಡುವನ್ನು ನೀಡಿದ್ದು ಅಲ್ಲಿಯ ತನಕ ಸಮಸ್ಯೆ ಪರಿಹಾರ ಕಾಣದಿದ್ದಲ್ಲಿ ಜುಲೈ 19 ರಂದು ಯುವಕರ ತಂಡದೊಂದಿಗೆ ಸೇರಿಕೊಂಡು ಉಡುಪಿ ನಗರ ಸಭೆ ಹಾಗೂ ಚುನಾಯಿತ ಜನ ಪ್ರತಿನಿಧಿಗಳಿಗೆ ಧಿಕ್ಕಾರ ಎಂಬ ಬ್ಯಾನರ್ ಅಳವಡಿಸಿ ಶ್ರಮದಾನ ಮಾಡುವ ಮೂಲಕ ಇಲ್ಲಿಯ ಸಮಸ್ಯೆಯನ್ನು ಬಗೆಹರಿಸುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. ಅದಕ್ಕೋಸ್ಕರ ಸುಮಾರು 40 ಜನರ ತಂಡವನ್ನು ರೂಪಿಸಿಕೊಂಡು ನಗರಸಭೆಗೆ ಸಡ್ಡು ಹೊಡೆಯಲು ಮುಂದಾಗಿದ್ದಾರೆ. ಮುಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಸಮಸ್ಯೆ ತಲೆದೋರಿದಾಗ ಶ್ರಮಾದಾನ ಮಾಡುವ ಮೂಲಕ ಪರಿಹಾರ ದೊರಕಿಸಿಕೊಡಲು ಸದಾ ಸಿದ್ದ ಎಂದು ಸಾಮಾಜಿಕ ಕಾರ್ಯಕರ್ತರಾದ ಅವರು ತಿಳಿಸಿರುತ್ತಾರೆ.


Spread the love