ಕನಕ ನಡೆ ಕಾರ್ಯಕ್ರಮಕ್ಕೂ ಚಲೋ ಉಡುಪಿಗೂ ಯಾವುದೇ ಸಂಬಂಧವಿಲ್ಲ: ಪೇಜಾವರ ಸ್ವಾಮೀಜಿ

Spread the love

ಕನಕ ನಡೆ ಕಾರ್ಯಕ್ರಮಕ್ಕೂ ಚಲೋ ಉಡುಪಿಗೂ ಯಾವುದೇ ಸಂಬಂಧವಿಲ್ಲ: ಪೇಜಾವರ ಸ್ವಾಮೀಜಿ

ಉಡುಪಿ: ಕನಕ ನಡೆ ಕಾರ್ಯಕ್ರಮಕ್ಕೂ ಚಲೋ ಉಡುಪಿಗೂ ಯಾವುದೇ ಸಂಬಂಧವಿಲ್ಲ ಎಂದು ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಷತೀರ್ಥ ಸ್ವಾಮೀಜಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸ್ವಚ್ಚ ಭಾರತ್ ಅಭಿಯಾನ ಮಠದ ಪರಿಸರದಲ್ಲಿ ನಡೆಸುವಂತೆ ಪರ್ಯಾಯದ ಮೊದಲು ಮತ್ತು ಬಳಿಕವೂ ಕೂಡ ತಿಳಿಸಿದ್ದೆ. ಸ್ವಚ್ಚತೆ ಮಾಡುವುದಕ್ಕಾಗಿ ಕನಕ ನಡೆ ಮಾಡುತ್ತೇವೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ . ಇದರ ಹೊರತಾಗಿ ಕನಕ ನಡೆಯ ಬಗ್ಗೆ ನಮಗೇನು ಹೆಚ್ಚಿನ ಮಾಹಿತಿ ಇಲ್ಲ ಅಲ್ಲದೆ ಇದನ್ನು ಮಾಡಿಸುವುದು ನಾನಲ್ಲ ಎಂದರು.

ಚಲೋ ಉಡುಪಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಯಾವುದೇ ವಿವಾದ ಆಗುವುದು ಬೇಡ ಎಂಬ ಕಾರಣಕ್ಕೆ ಚಲೋ ಉಡುಪಿ ಮೆರವಣಿಗೆ ನಡೆಸಿದ ಬೀದಿ ಬೇಡ ಬದಲಾಗಿ ಶ್ರೀಕೃಷ್ಣಮಠದ ಸುತ್ತಮುತ್ತ ಮಾಡಲು ತಿಳಿಸಲಾಗಿದೆ ಎಂದರು.

ಪ್ರಮೋದ್ ಮಧ್ವರಾಜ್ ಅವರ ಶ್ರೀರಾಮ ಹಾಗೂ ಕೃಷ್ಣ ಮಾಂಸಹಾರಿಗಳಾಗಿದ್ದರು ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು ಪ್ರಮೋದ್ ಮಧ್ವರಾಜ್ ಹೇಳಿರುವುದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ಮಧ್ವರಾಜ್ ಅವರಿಗೆ ಮಠದ ಬಗ್ಗೆ ಹಾಗೂ ಧರ್ಮದ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನು ಹೊಂದಿದ್ದಾರೆ. ಅವರಿಗೆ ದೇವರ ಅದರಲ್ಲೂ ವಿಶೇಷವಾಗಿ ಕೃಷ್ಣನ ಬಗ್ಗೆ ವಿಶೇಷ ಭಕ್ತಿ ಇದೆ. ಶ್ರೀರಾಮ – ಕೃಷ್ಣ ಮಾಂಸಹಾರಿಗಳು ಹೌದೋ ಅಲ್ಲವೋ ಎಂಬ ಬಗ್ಗ ಸ್ಪಷ್ಟ ಉಲ್ಲೇಖ ಇಲ್ಲ. ಅವರು ಮಾಂಸಹಾರ ಸ್ವೀಕಾರ ಮಾಡಿದ್ದಕ್ಕೆ ಸ್ಪಷ್ಟ ಆಧಾರಗಳಿಲ್ಲ. ಅವರು ಕ್ಷತ್ರಿಯರು ಮಾಂಸಹಾರಿಗಳು ಎಂಬುದು ನಿಜ. ವಾಲ್ಮೀಕಿಯ ಬೇಡನಾಗಿರುವಾಗ ಮಾಂಸ ಸೇವಿಸಿರಬಹುದು ಆದರೆ ತಪಸ್ವಿಗಳಾದ ಮೇಲೆ ಮಾಂಸಹಾರ ಸ್ವೀಕಾರ ಮಾಡಿರಲಿಕ್ಕಿಲ್ಲ ಎಂದರು.

ಬ್ರಾಹ್ಮಣರು ಮದ್ಯ ಮಾಂಸ ಸ್ವೀಕರಿಸಬಾರದು, ಉಳಿದವರು ಮಾಂಸಹಾರ ತಿನ್ನುವುದಕ್ಕೆ ತಮ್ಮ ವಿರೋಧವಿಲ್ಲ ಆದರೆ ಗೋಮಾಂಸ ತಿನ್ನುವುದಕ್ಕೆ ಮಾತ್ರ ನಮ್ಮ ಸ್ಪಷ್ಪ ವಿರೋಧ ಇದೆ ಎಂದು ಸ್ವಾಮೀಜಿ ಹೇಳಿದರು.


Spread the love