ಕಾಂಗ್ರೆಸ್ ಕಚೇರಿ ನಮಗೆ ದೇವಸ್ಥಾನವಿದ್ದಂತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

Spread the love

ಕಾಂಗ್ರೆಸ್ ಕಚೇರಿ ನಮಗೆ ದೇವಸ್ಥಾನವಿದ್ದಂತೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

  • ವಂಡ್ಸೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ

ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಂಡ್ಸೆ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಶುಕ್ರವಾರ ಸಂಜೆ ಜಿಲ್ಲಾ ಉಸ್ತುವಾರಿ‌ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ ನೀಡಿದರು.

ಇಂದಿರಾ ಗಾಂಧಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಜಿಲ್ಲೆಯ ಐದು ವಿಧಾನ ಸಭಾ ಕ್ಷೇತ್ರಗಳಲ್ಲಿ ನಾವು ಸೋತಿರಬಹುದು. ಆದರೆ ಕಾರ್ಯಕರ್ತರು ನಮ್ಮೊಂದಿಗೆ ಗಟ್ಟಿಯಾಗಿ ನಿಂತಿದ್ದಾರೆ. ಕಾಂಗ್ರೆಸ್ ಕಚೇರಿ ಎಂದರೆ ನಮಗೆ ದೇವಸ್ಥಾನವಿದ್ದಂತೆ. ಇಲ್ಲಿಗೆ ಬರುವುದೆಂದರೆ ದೇವಸ್ಥಾನಕ್ಕೆ ಬಂದಂತೆ ಖುಷಿ ಇರುತ್ತದೆ ಎಂದರು.

ಇಂದಿರಾ ಗಾಂಧಿಯವರು ಕೇವಲ ಮಹಿಳೆಯರಿಗಷ್ಟೇ ಆದರ್ಶವಲ್ಲ. ಭಾರತ ದೇಶವನ್ನು ವಿಶ್ವ ಮಟ್ಟದಲ್ಲಿ ಬಲಿಷ್ಠಗೊಳಿಸಲು ತಮ್ಮ ಪ್ರಾಣವನ್ನೇ ಅರ್ಪಣೆ ಮಾಡಿದ ಧೀಮಂತ ನಾಯಕಿ. ದೇಶ ಬಡತನದಲ್ಲಿ ನರಳುತ್ತಿರುವ ಸಂದರ್ಭದಲ್ಲಿ ಹಸಿರು ಕ್ರಾಂತಿಯನ್ನು ಮಾಡಿ ರೈತರಿಗೆ ಅನುಕೂಲ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಬ್ಯಾಂಕ್ ರಾಷ್ಟ್ರೀಕರಣ, ಉಳುವವನೆ ಹೊಲದೊಡೆಯ, ಇಪ್ಪತ್ತು ಅಂಶದ ಕಾರ್ಯಕ್ರಮಗಳು, ಬಡತನ ತೊಲಗಿಸಿಯಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದ ದಿಟ್ಟ ನಾಯಕಿ. ಆದರೆ ಇಂದಿನ ಕಾಲಮಾನದಲ್ಲಿ ಪ್ರಸ್ತುತ ಸರ್ಕಾರ ಬಡವರನ್ನೇ ತೊಲಗಿಸಿ ಎನ್ನುವ ಘೋಷವಾಕ್ಯದಡಿಯಲ್ಲಿ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಕೆಲವೇ ಕೆಲವು ಬಂಡವಾಳಶಾಹಿಗಳನ್ನು ಬೆಳೆಸಲು ಬಡವರನ್ನೇ ಕೊಲ್ಲಿ ಎನ್ನುವ ಪ್ರಸ್ತುತ ರಾಜಕಾರಣದಲ್ಲಿ ನಾವಿದ್ದೇವೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಭಾರತ ದೇಶದ ಅಖಂಡತೆಗೆ, ಭದ್ರತೆಗೆ ಸಾಕಷ್ಟು ಕೊಡುಗೆ ನೀಡಿದವರು ಸರ್ದಾರ್ ವಲ್ಲಭಬಾಯಿ ಪಟೇಲ್. ಅವರ ವ್ಯಕ್ತಿತ್ವ, ವಿಚಾರಧಾರೆ ಎಂದಿಗೂ ಶಾಶ್ವತ. ಈ ಇಬ್ಬರು ಮಹಾನ್ ನಾಯಕರು ನಮ್ಮ ಪಕ್ಷದೊಳಗಿದ್ದು ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಕಟ್ಟಿ ಬೆಳಿಸಿದ ಪಕ್ಷದಲ್ಲಿ ಇಂದು ನಾವೆಲ್ಲರೂ ಇದ್ದೇವೆ ಎನ್ನುವುದಕ್ಕೆ ನಮಗೆ ಹೆಮ್ಮೆಯಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಿಂದ ಇಲ್ಲಿಯವರೆಗೆ ನಮ್ಮ ಪಕ್ಷ ಬದ್ದತೆಯಿಂದ ಸಾಮಾಜಿಕ ನ್ಯಾಯದಲ್ಲಿ ಕಾಳಜಿ, ವಿಶ್ವಾಸವಿಟ್ಟು ಕಷ್ಟದ ಪರಿಸ್ಥಿತಿಯಲ್ಲಿ ಸಾಮಾನ್ಯ ಜನರ ಸಂಕಷ್ಟಕ್ಕೆ ಧ್ವನಿಯಾಗುತ್ತಿರುವುದು ಸಂತಸದ ವಿಚಾರ ಎಂದರು.

ವಂಡ್ಸೆ ಬ್ಲಾಕ್‌ ಕಾಂಗ್ರೆಸ್ ಕಚೇರಿಗೆ ಮೊದಲ‌ ಬಾರಿಗೆ ಆಗಮಿಸಿದ ಅವರನ್ನು ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು ಸನ್ಮಾನಿಸಿದರು.

ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ರಾಜು ಪೂಜಾರಿ, ಬಾಬು ಹೆಗ್ಡೆ ತಗ್ಗರ್ಸೆ, ಕೆರಾಡಿ ಪ್ರಸನ್ನ ಶೆಟ್ಟಿ, ರಾಜೇಶ್ ಕಾರಂತ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿಗಳಾದ ಶರತ್ ಕುಮಾರ್ ಶೆಟ್ಟಿ, ಸದಾಶಿವ ಶೆಟ್ಟಿ, ಉದಯ್ ಪೂಜಾರಿ, ಜಿ.ಪಂ‌ ಮಾಜಿ ಸದಸ್ಯರಾದ ಜ್ಯೋತಿ ಪುತ್ರನ್, ಜ್ಯೋತಿ ಅಚ್ಚುತ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.


Spread the love
Subscribe
Notify of

0 Comments
Inline Feedbacks
View all comments