ಕುವೈತ್ ಕನ್ನಡ ಕೂಟದ ವಾರ್ಷಿಕ ಸಭೆ ಮತ್ತು ಗಾನ ಸಂಚಯ

Spread the love

ಕುವೈತ್ ಕನ್ನಡ ಕೂಟದ ವಾರ್ಷಿಕ ಸಭೆ ಮತ್ತು ಗಾನ ಸಂಚಯ

ಕುವೈತ್‌ :  ಕುವೈತ್ ಕನ್ನಡ ಕೂಟದ ವಾರ್ಷಿಕ ಸರ್ವ ಸದಸ್ಯ ಸಭೆ ಮತ್ತು ಗೀತ ಸಂಚಯ ನವ ವರ್ಷಾಚರಣೆ ಇದೇ ಶುಕ್ರವಾರ ಖೇತಾನ್‌ ನ ಇಂಡಿಯನ್ ಕಮ್ಯೂನಿಟಿ ಶಾಲೆಯ ಸಭಾಂಗಣದಲ್ಲಿ ಸಂಪನ್ನಗೊಂಡಿತು. ಕೂಟದ ೨೦೧೯ ರ ಸಾಲಿನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಡಾ. ಶಶಿಕಿರಣ್‌ ಪ್ರಭು ರವರು ವರ್ಷವಿಡೀ ಹುರುಪು, ಹುಮ್ಮಸ್ಸು ಉತ್ಸಾಹ ಮತ್ತು ಕಾರ್ಯತತ್ಪರತೆಯ ಮೂಲಕ ಕೂಟದ ಎಲ್ಲ ಕಾರ್ಯಕ್ರಮಗಳ ಸಮರ್ಪಕ ನಿರ್ವಣೆಗೆ ಸಹಾಯಕರಾಗಿ ಕಾರ್ಯಕಾರಿಣಿಯ ಹೆಗಲಿಗೆ ಹೆಗಲು ಕೊಟ್ಟ ಎಲ್ಲ ಸಮಿತಿಗಳ ಸಹಕಾರವನ್ನು ಸ್ಮರಿಸಿ ವಂದಿಸುತ್ತಾ ವರ್ಷಾಂತ್ಯ ಮಹಾ ಸಭೆಗೆ ಎಲ್ಲರನ್ನೂ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ವಿಶೇಷ ಸಂಗೀತ-ಗೀತ ರೋಮಾಂಚನದ ಸಿಂಚನವನ್ನೀಯಲು ವಿಶೇಷವಾಗಿ ಆಹ್ವಾನಿತರಾಗಿದ್ದ ʻಕನ್‌ ಫ್ಯೂಶನ್‌ ʻ ಸಂಗೀತ -ಗಾಯನ ತಂಡವನ್ನೂ ಪುಷ್ಪಾರ್ಪಣೆಯ ಮೂಲಕ ಸ್ವಾಗತಿಸಿದರು. ಕಾರ್ಯಕ್ರಮದ ಶುಭಾರಂಭ ಶ್ರೀಮತಿ ಮಾಧವಿ ಕುಲಕರ್ಣಿ ಮತ್ತು ಶ್ರೀಮತಿ ವಸಂತ ಅಶೋಕ್ ರವರ ಸುಮಧುರ ಯುಗಳ ಪ್ರಾರ್ಥನೆಯೊಂದಿಗೆ ಆಯಿತು. ನಂತರ ಕಾರ್ಯಕಾರಿ ಸಮಿತಿ ಕುಟುಂಬದೊಂದಿಗೆ ಮಂಗಳ ದೀಪವನ್ನು ಬೆಳಗುವ ಮೂಲಕ ಸಂಜೆಯ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಿತು.

ವಾಡಿಕೆಯಂತೆ ವರ್ಷವಿಡೀ ನಡೆದ ಕಾರ್ಯಕ್ರಮಗಳ ಆಯೋಜನೆಗೆ ಸಹಕರಿಸಿದ ಎಲ್ಲರ ಕೊಡುಗೆಯನ್ನು ಸ್ಮರಿಸಿ ಧನ್ಯವಾದ ಮತ್ತು ನೆನನಪಿನ ಕಾಣಿಕೆಗಳ ಮೂಲಕ ಅಭಿನಂದಿಸಲಾಯಿತು. ಕೂಟದ ಪ್ರಮುಖ ವಾರ್ಷಿಕ ಕಾರ್ಯಕ್ರಮವಾದ ರಾಜ್ಯೋತ್ಸವದ ವಿವಿಧ ಪ್ರಹಸನ, ದೃಶ್ಯ-ನೃತ್ಯಗಳಿಗೆ ದಿಶಾ ನಿರ್ದೇಶನ ನೀಡಿದ ಎಲ್ಲ ನಿರ್ದೇಶಕ, ಸಹ-ನಿರ್ದೇಶಕ ಮತ್ತು ಮಕ್ಕಳನ್ನು ಅಭಿನಂದಿಸಿ ಗೌರವಿಸಲಾಯಿತು. ನಂತರ ವರ್ಷದ ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಎಲ್ಲ ಸಮಿತಿಗಳನ್ನು ಗೌರವಿಸಲಾಯಿತು. ಕೂಟದ ಕ್ರೀಡಾ ಚಟುವಟಿಕೆ ಮತ್ತು ಸ್ಪರ್ಧೆಗಳ ವಿಜೇತ ತಂಡವಾದ ~ನೇತ್ರಾವತಿ ಮತ್ತು ದ್ವಿತೀಯ ಸ್ಥಾನ ಪಡೆದ ಶರಾವತಿ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ಸಮಿತಿಯ ಶ್ರೀ ಗಿರೀಶ್‌ ಶೆಣೈ ತಮ್ಮ ಸಮಿತಿಯ ಎಲ್ಲ ಸದಸ್ಯರ ಹಾಗೂ ತಂಡಗಳ ನಾಯಕಿಯರ ಸಹಕಾರ ಮತ್ತು ಸಹಯೋಗವನ್ನು ಸ್ಮರಿಸಿ ಧನ್ಯವಾದ ಸಲ್ಲಿಸಿ ಎಲ್ಲ ಕ್ರೀಡಾ ಚಟುವಟಿಕೆಗಳ ಸಮಗ್ರ ವರದಿಯನ್ನು ನೀಡಿದರು. ಮರಳ ಮಲ್ಲಿಗೆ ಸಮಿತಿಯ ಸಂಚಾಲಕಿ ಶ್ರೀಮತಿ ಸುಗುಣಾ ಮಹೇಶ್‌ ರವರನ್ನು ವರ್ಷಾಂತ್ಯ ಮರಳ ಮಲ್ಲಿಗೆ -ಇ ಸಂಚಿಕೆಯನ್ನು ಕೂಟಕ್ಕೆ ಪರಿಚಯಿಸಲು ಕೋರಲಾಯಿತು. ಚೊಕ್ಕವಾಗಿ ಮೂಡಿಬಂದ ಸಂಚಿಕೆಯ ಪಕ್ಷಿನೋಟವನ್ನೂ ಸಭಿಕರು ವೀಕ್ಷಿಸಿದರು.

ಕೂಟದ ವರ್ಷವಿಡೀ ನಡೆದ ಕಾರ್ಕ್ರಮಗಳ ಹಿನ್ನೋಟವನ್ನು ಸುಂದರ ಚಿತ್ರ ಮತ್ತು ವೀಡಿಯೋ ಮಾಲಿಕೆಯ ಮೂಲಕ ಕೂಟದ ಕಾರ್ಯದರ್ಶಿಗಳಾದ ಶ್ರೀ ರವಿಕಿರಣ್‌ ಪ್ರಸ್ತುತಪಡಿಸಿದರೆ ಕೂಟದ ಖಜಾಂಚಿಗಳಾದ ಶ್ರೀ ರಮೇಶ್‌ ನಾಯಕ್ ಲೆಕ್ಕ-ಪತ್ರ ಮಂಡನೆಯನ್ನು ಸವಿಸ್ತಾರವಾಗಿ ಮಾಡಿ ಸರ್ವಸದಸ್ಯರ ಅನುಮೋದನೆಯನ್ನು ಪಡೆದರು.

ಪದ್ಧತಿಯಂತೆ ಈ ಸಲವೂ ಕೂಟದ ಬರುವ ವರ್ಷದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯ ನಡೆಗೆ ಚಾಲನೆಯಿತ್ತ ಹಿರಿಯ ಸದಸ್ಯರಾದ ಶ್ರೀ ಗುರುರಾಜ ರಾವ್‌ ರವರು ಚುನಾವಣಾ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ಅದರಂತೆ ಶ್ರೀ ರಾಜೇಶ್‌ ವಿಟ್ಠಲ್‌ ರು ಅಧ್ಯಕ್ಷರಾಗಿಯೂ, ಶ್ರೀ ಸಂದೀಪ್‌ ಛಬ್ಬ ಉಪಾಧ್ಯಕ್ಷರಾಗಿಯೂ, ಶ್ರೀ ಪ್ರವೀಣ್‌ ಕುಮಾರ್‌ ಶೆಟ್ಟಿ ಕಾರ್ಯದರ್ಶಿಗಳಾಗಿಯೂ ಹಾಗೂ ಶ್ರೀ‌ ಪ್ರದೀಪ್‌ ರಾವ್‌ ರವರು ಖಜಾಂಚಿಗಳಾಗಿಯೂ ಸರ್ವಾನುಮತದಿಂದ ಆಯ್ಕೆಯಾದರು. ನೂತನ ಅಧ್ಯಕ್ಷರು ಎಲ್ಲರಿಗೂ ಹೊಸವರ್ಷದ ಶುಭಕೋರಿ ಎಲ್ಲ ರೀತಿಯಲ್ಲೂ ಸದಸ್ಯರು ಮತ್ತು ಸಮಿತಿಗಳು ಸಹಕಾರ ನೀಡುವರೆಂದು ಆಶಿಸಿ ತಮ್ಮ ಮೊದಲ ಮಾತನ್ನು ಹಂಚಿಕೊಂಡರು.

ಕೂಟದ ಸಂಸ್ಥಾಪಕ ಸದಸ್ಯ ಮತ್ತು ಪೂರ್ವ ಅಧ್ಯಕ್ಷರಾದ ಶ್ರೀ ವಾಸುಕಿಯವರು ಕೂಟದ ಕಾರ್ಯಕಾರಿಣಿಯಲ್ಲಿ ಜವಾಬ್ದಾರಿಗೆ ಸದಸ್ಯರು ತಾವಾಗೇ ಮುಂಬರಲು ಹಿಂಜರಿಯುವ ಕಾರಣದಿಂದ ಪೂರ್ವ ಅಧ್ಯಕ್ಷರ ಮತ್ತು ಪೂರ್ವ ಕಾರ್ಯಕಾರಿಣಿಗಳ ಬಳಗ ಪೂರವಾಯ್ಕೆಯ ಅಧ್ಯಕ್ಷರನ್ನು ಹೆಸರಿಸುವ ಹೊಸ ಕಾರ್ಯವಿಧಾನವನ್ನು ಸೂಚಿಸಿ ಅದಕ್ಕೆ ಸದಸ್ಯರ ಅನುಮೋದನೆ ಪಡೆದರು ಅದರಂತೆ ಮುಂಬರುವ ಕಾರ್ಯಕಾರಿ ಸಮಿತಿಯ ಅಧ್ಯಕ್ಷರ ಆಯ್ಕೆಯಾಗುವ ವಿಧಾನಕ್ಕೆ ಅನುಮೋದನೆ ನೀಡಲಾಯಿತು. ನಂತರ ವಾಸುಕಿಯವರು ಕನ್ನಡ ಕೂಟ ಮತ್ತು ಕುವೈತ್‌ ಕನ್ನಡ ಕೂಟ ಕ್ಷೇಮಾಭ್ಯುದಯ ಸಂಘಗಳ ನಡುವಿನ ಅವಿನಾಭಾವ ಸಂಬಂಧಗಳ ವಿವರಣೆ ನೀಡಿ ಕ್ಷೇಮಾಭ್ಯುದಯ ಸಂಘದ ನಿಯಮಾವಳಿಯಲ್ಲಿ ಕೆಲ ತಿದ್ದುಪಡಿಗೆ ಸರ್ವ ಸದಸ್ಯರ ಅನುಮೋದನೆ ಪಡೆದು ಸಂಘವು ಕರ್ನಾಟಕದಲ್ಲಿ ತಾನು ಹಮ್ಮಿಕೊಂಡ ಹಲವು ಕಲ್ಯಾಣ ಕಾರ್ಯಕ್ರಮಗಳ ಪರಿಚಯವನ್ನು ನೀಡಿದರು. ಆಗಸ್ಟ್‌ ನಲ್ಲಿ ನಡೆದ ಸಂಘದ ಮೊದಲ ಸಭೆಯ ವಿವರಣೆಯನ್ನು ಚಿತ್ರಾವಳಿಯ ಮೂಲಕ ನೀಡಿ ಸಂಘದ –“ನೆನಪಿನ ಬಳ್ಳಿ”- ಪುಸ್ತಿಕೆಯನ್ನು ಹೊರತರುವಲ್ಲಿ ಶ್ರಮಿಸಿದ ಕೂಟದ ಎಲ್ಲ ಸೃಜನಶೀಲ ಪದಸಂಪನ್ನರ ಕೊಡುಗೆಯನ್ನು ಶ್ಲಾಘಿಸಿ ಅಭಿನಂದಿಸಿದರು. ತದನಂತರ ಮಾತನಾಡಿದ ಶ್ರೀ ಪ್ರಶಾಂತ್‌ ಶೆಟ್ಟಿಯವರು ಕೆಲವು ಆಡಳಿತಾತ್ಮಕ ನಡಾವಳಿಗಳಿಗೆ ಅನುಕೂಲ ಆಗುವಂತಹ ಸಮಿತಿಗಳ ಪುನ-ರಚನೆಯ ವಿವರ ನೀಡಿ ಸಮಿತಿಗಳ ರೂಪುರೇಶೆ ಮತ್ತು ಮುಂಬರುವ ವರ್ಷದ ಆಯಾ ಸಮಿತಿಗಳ ಪರಿಚಯ ನೀಡಿದರು.

ಸಂಜೆಯ ಎಲ್ಲರ ನಿರೀಕ್ಷೆಯ ಗಾನಸಂಚಯದ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಾ ಕಾರ್ಯಕಾರಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪ್ರಭು ಆಚಾರ್ ಮೊದಲಿಗೆ “ಕನ್ ಫ್ಯೂಶನ್” ತಂಡದ ಸಂಸ್ಥಾಪಕ ಶ್ರೀ ವಿಶ್ವೇಶ್ ಭಟ್ ಅವರ ಶ್ರೀಮತಿ ಅಶ್ವಿನಿ ಭಟ್ ಹಾಗೂ ಮಗಳಾದ ಕುಮಾರಿ ಅರಭಿ ಭಟ್ ತಂಡದ ವಾದ್ಯ ವಿಶೇಷಜ್ಞರಾದ ಶ್ರೀ ಸುಶೃತ್ ಕಾನತುರ್ (ರಿದಮ್ಸ್) ಮತ್ತು ಶ್ರೀ ಸರ್ವೋತ್ತಮ್ ರಾಮನ್ ಕಾಮತ್ (ಕೀಬೋರ್ಡ್) ರವರನ್ನು ಸ್ವಾಗತಿಸಿ ಅವರ ಪರಿಚಯ ಮಾಡಿಕೊಟ್ಟರು. ನಂತರ ವಿಘ್ನವಿನಾಶಕ ಗಣಪತಿ ವಂದನಾಗಾಯನದೊಂದಿಗೆ ಪ್ರಾರಂಭವಾದ ಶ್ರೀ ವಿಶ್ವೇಶ್ ಭಟ್ ರವರ ಗಾನಸಂಚಯದ ಗಾನಸುಧೆಯ ಘಮ ಬೇಗ ಸಭಾಂಗಣವನ್ನು ಆವರಿಸಿ ಸಭಿಕರನ್ನು ಸಂಗೀತಾಸ್ವಾದನೆಯ ಬೇರೊಂದು ಲೋಕಕ್ಕೇ ಕರೆದೊಯ್ಯಿತು. ಶ್ರೀಮತಿ ಅಶ್ವಿನಿ ಭಟ್ ರವರ ವೀಣಾವಾದನ ಮತ್ತು ಈ ದಂಪತಿಗಳ ಪ್ರತಿಭಾವಂತ ಮಗಳಾದ ಕುಮಾರಿ ಅರಭಿ ಭಟ್ ತಾನೇನೂ ಕಡಿಮೆಯಿಲ್ಲ ಎನ್ನುವಂತೆ ಹಾಸ್ಯಭರಿತ ಸಂಭಾಷಣೆಯ ಮೂಲಕ ವೇದಿಕೆಗೆ ಆಗಮಿಸಿ ಹಾಡುಗಾರಿಕೆಯ ಮೂಲಕ ಮನೋರಂಜನೆ ನೀಡಿದರು.

ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ರವಿಕಿರಣ್ ರವರು ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರಾಯೋಜಕರು, ಸಮಿತಿಗಳ ಸಂಚಾಲಕರು, ಖೇತಾನ್ ಇಂಡಿಯನ್ ಕಮ್ಯುನಿಟಿ ಶಾಲೆಯ ಪ್ರಬಂಧಕರು ಮತ್ತು ಎಲ್ಲ ಸದಸ್ಯರನ್ನು ವಂದಿಸಿದರು. ಕಾರ್ಯಕಾರಿ ಸಮಿತಿ “ಕನ್ ಫ್ಯೂಶನ್” ತಂಡವನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಿ ಗೌರವಿಸಿದ ನಂತರ ರಾತ್ರಿಯ ಪುಷ್ಕಳ ಭೋಜನದೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಅಂತ್ಯ ಹಾಡಲಾಯಿತು.


Spread the love