ಕೊಣಾಜೆ: ಕಲಿತ ಶಾಲೆಯಲ್ಲೇ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ
ಕೊಣಾಜೆ: ಮುಡಿಪು ಸಮೀಪದ ಕುರ್ನಾಡುವಿನಲ್ಲಿ ಯುವಕನೋರ್ವ ತಾನು ಕಲಿತ ಶಾಲೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಕುರ್ನಾಡು ಹೂವಿನಕೊಪ್ಪಲ ನಿವಾಸಿ ದಿ.ರಾಮ ಎಂಬವರ ಪುತ್ರ ಸುಧೀರ್ (32) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಯುವಕ.
ವೃತ್ತಿಯಲ್ಲಿ ಪೈಂಟರ್ ಆಗಿರುವ ಈತ ರವಿವಾರ ಬೆಳಿಗ್ಗೆ ಮೊಬೈಲ್ ಹಾಗೂ ಪರ್ಸ್ ಮನೆಯಲ್ಲೆ ಬಿಟ್ಟು ತೆರಳಿದ್ದ. ಬಳಿಕ ಆತನ ತಾಯಿ ಮನೆ ಸಮೀಪದ ಶಾಲೆಯ ಬಳಿ ಹುಡುಕಾಡಿದಾಗ ಈತನ ಮೃತದೇಹ ಶಾಲೆಯ ಛಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಡೆತ್ ನೋಟು ದೊರೆತಿದ್ದು, ಇದರಲ್ಲಿ ಕೂದಲು ಉದುರುವ ಸಮಸ್ಯೆಯ ಬಗ್ಗೆ ಬರೆದಿದ್ದು ಮಾತ್ರವಲ್ಲದೆ ತನ್ನ ಕಿಡ್ನಿಯನ್ನು ಸಂಬಂಧಿಕರೊಬ್ಬರಿಗೆ ದಾನ ಮಾಡುವಂತೆ ತಿಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಈತ ಶ್ರೀ ದತ್ತಾತ್ರೇಯ ಅನುದಾನಿತ ಹಿ.ಪ್ರಾ.ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಹಾಗೂ ಶ್ರೀ ದತ್ತಾತ್ರೇಯ ಭಜನಾ ಹಾಗೂ ಯಕ್ಷಗಾನ ಸಂಘದ ಸದಸ್ಯನಾಗಿದ್ದ. ಈತನ ಸಹೋದರನಿಗೆ ಇದೇ ತಿಂಗಳ ಕೊನೆಯಲ್ಲಿ ಮದುವೆ ನಿಶ್ಚಯವಾಗಿತ್ತು.