ಕೊನೆಗೂ ನಡೆಯಿತು ಪಂಪ್ ವೆಲ್ ಮೇಲ್ಸೇತುವೆಯ ಅಣುಕು ಉದ್ಘಾಟನೆ!

Spread the love

ಕೊನೆಗೂ ನಡೆಯಿತು ಪಂಪ್ ವೆಲ್ ಮೇಲ್ಸೇತುವೆಯ ಅಣುಕು ಉದ್ಘಾಟನೆ!

ಮಂಗಳೂರು : ಸದಾ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುತ್ತಿದ್ದ ಪಂಪ್ ವೆಲ್ ಮೇಲ್ಸೇತುವೆಯ ಉದ್ಘಾಟನೆ ಇಂದು ನಡೆಯಿತು

ಸಂಸದ ನಳಿನ್ ಕುಮಾರ್ ಕಟೀಲು ಸೇರಿದಂತೆ ಜಿಲ್ಲೆಯ ಶಾಸಕರನ್ನು ಒಳಗೊಂಡ ಬಿಜೆಪಿಯ ಜನಪ್ರತಿನಿಧಿಗಳ ಮುಖವಾಡಗಳೊಂದಿಗೆ ಕಾಂಗ್ರೆಸ್ನ ನಾಯಕರು ಹಾಗೂ ಕಾರ್ಯಕರ್ತರು ಇಂದು ಹೀಗೊಂದು ವಿಭಿನ್ನ ಪ್ರತಿಭಟನೆಯ ಮೂಲಕ ಪಂಪ್ವೆಲ್ ಮೇಲ್ಸೇತುವೆ ಉದ್ಘಾಟನೆಯ ಅಣಕವಾಡಿದರು.

ಬಳಿಕ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, 10 ವರ್ಷಗಳು ಸಂದರೂ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗದ ಬಿಜೆಪಿಯ ಜನಪ್ರತಿನಿಧಿಗಳು ನಗರದ ಗೌರವವನ್ನು ಹರಾಜು ಹಾಕಿದ್ದಾರೆ ಎಂದು ಆರೋಪಿಸಿದರು.

ಪ್ರಪಂಚ, ದೇಶದ ಬಗ್ಗೆ ಮಾತನಾಡುವ ಸಂಸದರಿಗೆ ಮೇಲ್ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗದಿರುವುದು ನಾಚಿಕೆಗೇಡಿನ ಸಂಗತಿ. ಈ ಅವೈಜ್ಞಾನಿಕ ಮೇಲ್ಸೇತುವೆಯ ಉದ್ಘಾಟನೆಗೆ ಹಲವಾರು ದಿನಾಂಕಗಳನ್ನು ಈ ಹಿಂದೆ ನೀಡಲಾಗಿತ್ತು. ಆದರೆ ಕಳೆದ ಎರಡು ತಿಂಗಳ ಹಿಂದೆ ಡಿಸೆಂಬರ್ 31ಕ್ಕೆ ಪೂರ್ಣಗೊಳ್ಳುವುದಾಗಿ ಸಂಸದರೇ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಹೇಳಿಕೆ ನೀಡಿದ್ದ ಬಳಿಕ ಅವರಿಗೆ ಗೌರವ ನೀಡಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಅವರು ಕೊಟ್ಟ ಮಾತನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಅವರ ಜತೆಗೆ ನಗರದ ಮರ್ಯಾದಿಯನ್ನು ಹರಾಜು ಹಾಕಿದ್ದಾರೆ ಎಂದು ಐವನ್ ಡಿಸೋಜಾ ಆರೋಪಿಸಿದರು.

ತಲಪಾಡಿಯಲ್ಲಿ ಸಂಸದರು ಹಾಗೂ ಶಾಸಕರು ಟೋಲ್ ನಿಯಮ ಉಲ್ಲಂಘಿಸಿ ಗುತ್ತಿಗೆದಾರರನ್ನು ತಡೆಹಿಡಿದಿರುವುದು ಕೇವಲ ನಾಟಕ. ಟೋಲ್ ನೀಡದೆ ಪ್ರಯಾಣವನ್ನು ಜನರ ಪರವಾಗಿ ನಾವು ಸ್ವಾಗತಿಸುತ್ತೇವೆ. ಆದರೆ ನಾಳೆ ಏನು ಹಾಗೂ ಮುಂದೆ ಎಷ್ಟು ದಿನದವರೆಗೆ ಪ್ರಯಾಣಿಕರು ಟೋಲ್ ನೀಡದೆ ಪ್ರಯಾಣಿಸಬಹುದು ಎಂಬುದನ್ನು ಸಂಸದರು ತಿಳಿಸಬೇಕು. ಟೋಲ್ನ ಗುತ್ತಿಗೆದಾರರು ಬಿಜೆಪಿಯವರು, ಸಂಗ್ರಹ ಮಾಡುವವರು ಬಿಜೆಪಿಯವರೇ. ಅವರನ್ನೇ ಮುಂದಿಟ್ಟು ಟೋಲ್ ನೀಡದಂತೆ ನಾಟಕ ಮಾಡಿರುವುದು ಹಾಸ್ಯಾಸ್ಪದ. ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ವಿಳಂಬಕ್ಕೆ ಸಂಬಂಧಿಸಿ ಕಂಪನಿಯವರ ಮೇಲೆ ಎಫ್ಐಆರ್ ದಾಖಲಿಸಿರುವುದು ತಮ್ಮ ತಪ್ಪನ್ನು ಮುಚ್ಚಿ ಹಾಕುವ ಉದ್ದೇಶದಿಂದ ಎಂದವರು ಆರೋಪಿಸಿದರು.


Spread the love