ಜನಮನ ಸೆಳೆದ ನಾಟ್ಕ ಮುದ್ರಾಡಿ 34ನೇ ವರ್ಷದ ಸಂಭ್ರಮ

Spread the love

ಜನಮನ ಸೆಳೆದ ನಾಟ್ಕ ಮುದ್ರಾಡಿ 34ನೇ ವರ್ಷದ ಸಂಭ್ರಮ

ನಮ ತುಳುವೆರ್ ಕಲಾ ಸಂಘಟನೆ (ರಿ.) ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿರುವ ನಾಟ್ಕದೂರು, ಮುದ್ರಾಡಿಯಲ್ಲಿ 19ನೇ ವರ್ಷದ ನವರಂಗೋತ್ಸವ ಅಖಿಲ ಭಾರತ ರಂಗೋತ್ಸವ ಹಾಗೂ ನಾಟ್ಕ ಮುದ್ರಾಡಿಯ 34ನೇ ವರ್ಷದ ಸಂಭ್ರಮ ಹಾಗೂ ಕರ್ನಾಟ ನಾಡ ಪೋಷಕ/ಪೋಷಕಿ ಪ್ರಶಸ್ತಿ 2019 ಸೆಪ್ಟೆಂಬರ್ 29ನೇ ತಾರೀಕಿನಿಂದ ಅಕ್ಟೋಬರ್ 8ನೇ ತಾರೀಕಿನವರೆಗೆ ಅಯೋಜಿಸಲಾಗಿದ್ದು ಉದ್ಘಾಟನಾ ಸಮಾರಂಭ `ಬಿ. ವಿ. ಕಾರಂತ’ ಬಯಲು ರಂಗ ಸ್ಥಳದಲ್ಲಿ ನೆರವೇರಿಸಲಾಯಿತು.

ನಮ ತುಳುವೆರ್ ಕಲಾ ಸಂಘಟನೆ ಅಧ್ಯಕ್ಷರಾದ ಸುಕುಮಾರ್ ಮೋಹನ್ ರವರು ಸರ್ವರನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಧಿಕೃತವಾಗಿ ಚೆಂಡೆ ಬಾರಿಸುವುದರೊಂದಿಗೆ, ಶಂಕರ್ ವಿಠಲ್ ಮೋಟಾರ್ ಕಂಪೆನಿ ಚೇರ್ ಮೇನ್ ಮತ್ತು ಮ್ಯಾನೆಜ್ ಮೆಂಟ್ ಡೈರೆಕ್ಟರ್ ಡಾ. ಅರೂರು ಪ್ರಸಾದ್ ರಾವ್ ರವರು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾಗಿರುವ ಅಂಬಾತನಯ ಮುದ್ರಾಡಿ ವಹಿಸಿದ್ದರು.

“ಕರ್ನಾಟ ನಾಡ ಪೋಷಕ/ಪೋಷಕಿ ಪ್ರಶಸ್ತಿ” ಪ್ರದಾನ
ಕಲಾಸೇವೆ, ಸಾಹಿತ್ಯ ಹಾಗೂ ಸಮಾಜ ಸೇವೆಗಾಗಿ ದುಬಾಯಿಂದ ಶ್ರೀ ಬಿ. ಕೆ. ಗಣೇಶ್ ರೈ, ರಂಗಭೂಮಿ ಮತ್ತು ಸಮಾಜ ಸೇವೆಯಲ್ಲಿ ಕಾರ್ಕಳದ ಶ್ರೀ ಚಂದ್ರಹಾಸ ಸುವರ್ಣ, ನಾಟಕ, ಚಲನಚಿತ್ರ ವಿಭಾಗದಲ್ಲಿ ಕೊಡಿಯಾಲ್ ಬೈಲ್ ಶ್ರೀ ಪಮ್ಮಿ, ಸಾಹಿತ್ಯ ವಿಭಾಗದಲ್ಲಿ ಮೈಸೂರಿನ ಶ್ರೀಮತಿ ಲಕ್ಷ್ಮೀ, ಕಾವ್ಯ ವಿಭಾಗದಲ್ಲಿ ಶ್ರೀಮತಿ ಶಾಂತಾ ಕುಂಟನಿ, ಪಡ್ನೂರ್, ಪುತ್ತೂರು ಇವರುಗಳನ್ನು “ಕರ್ನಾಟ ನಾಡ ಪೋಷಕ/ಪೋಷಕಿ ಪ್ರಶಸಿ”್ತ ನೀಡಿ ಸನ್ಮಾನಿಸಿ ಗೌರವಿಸಲಾಯಿತು.

ಪ್ರಥಮ ದಿನದ ರಂಗ ನಾಟಕ “ಸತ್ಯಾಯನ ಹರಿಶ್ಚಂದ್ರ”
ಪ್ರಥಮ ದಿನದ ನಾಟಕ ಶ್ರೀ ಭುವನೇಂದ್ರ ಕಾಲೇಜು ಕಾರ್ಕಳ ತಂಡ “ಭುವನ ರಂಗ” ವಿದ್ಯಾರ್ಥಿ ಕಲಾವಿದರು “ಸತ್ಯಾಯನ ಹರಿಶ್ಚಂದ್ರ” ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದರು.

ಒಂಬತ್ತು ದಿನಗಳ ಕಾಲ ಆಯೋಜಿಸಲಾಗಿರುವ ನವರಂಗೋತ್ಸವ ಕಾರ್ಯಕ್ರಮಗಳಲ್ಲಿ ಇನ್ನು ಉಳಿದಿರುವ ಎಂಟು ದಿನಗಳಲ್ಲಿ ಹಲವಾರು ಗಣ್ಯಾತಿ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಪ್ರತಿದಿನ ರಾತ್ರಿ ಏಳು ಗಂಟೆಯಿಂದ ಬಿ. ವಿ. ಕಾರಂತ ಬಯಲು ರಂಗ ಸ್ಥಳದಲ್ಲಿ ನಡೆಯಲಿದ್ದು 30ನೇ ತಾರೀಕಿನಂದು ಸಮಸ್ತರು ಹರಪನ ಹಳ್ಳಿ ತಂಡದ ನಾಟಕ “ನಿಜಶರಣ ಅಂಬಿಗರ ಚೌಡಯ್ಯ”, ಅಕ್ಟೋಬರ್ 1ನೇ ತಾರೀಕಿನಂದು ಆದರ್ಶ ಮಹಿಳಾ ಮಂಡಳಿ ತಂಡದ ನಾಟಕ “ಏಕಲವ್ಯ” ಯಕ್ಷಗಾನ (ಮೂಡಲಪಾಯ ಯಕ್ಷಗಾನ), 2ನೇ ತಾರೀಕು ಸಂಪ್ರದಾಯ ಟ್ರಸ್ಟ್ ತಂಡದ “ವಧೂಟಿ”, 3ನೇ ತಾರೀಕು ಪರ್ಕಳ , ವಿಟ್ಲ ಜೋಷಿ ಪ್ರತಿಷ್ಠಾನ ತಂಡದ ನಾಟಕ “ನನ್ನೊಳಗಿನ ಅವಳು”, 4ನೇ ತಾರೀಕು ಉಡುಪಿ ರಂಗಭೂಮಿ (ದಿ) ತಂಡದ “ಐಸಿಯು” , 5ನೇ ತಾರೀಕು ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ತಂಡದ “ಆಹಲ್ಯ”, 6ನೇ ತಾರೀಕು ಮಕ್ಕಳ ಕಾರ್ಯಕ್ರಮ ಮತ್ತು ತುಳು ಚಲನಚಿತ್ರ ಪ್ರದರ್ಶನ, 7ನೇ ತಾರೀಕು ಮುದ್ರಾಡಿ ನಾಟ್ಕ ತಂಡದ “ದಶಾನನ ಸ್ವಪ್ನ ಸಿದ್ಧಿ”, 8ನೇ ತಾರೀಕು ಸಮಾರೋಪ ಸಮಾರಂಭದಲ್ಲಿ ಶ್ರೀ ಅಂಬಾ ಯಕ್ಷ ಸಭಾ ಸಾಣೂರು ಮತ್ತು ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ವಿಭಿನ್ನ ಶೈಲಿಯಲ್ಲಿ “ಸಂಪೂರ್ಣ ದೇವಿ ಮಹಾತ್ಮೆ” ಪ್ರದರ್ಶನಾಗಲಿದೆ.

`


Spread the love