ತಾಯಿ, ಶಿಶು ಮರಣ ಪ್ರಮಾಣವನ್ನು ನಿಯಂತ್ರಿಸಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್.

Spread the love

ತಾಯಿ, ಶಿಶು ಮರಣ ಪ್ರಮಾಣವನ್ನು ನಿಯಂತ್ರಿಸಲು ಕ್ರಮ ವಹಿಸಿ: ಜಿಲ್ಲಾಧಿಕಾರಿ ಡಾ.ಕೆ.ಜಿ.ಜಗದೀಶ್

ಮ0ಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ತಾಯಿ ಮರಣ ಮತ್ತು ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡುವ ಹಿನ್ನೆಲೆಯಲ್ಲಿ ಸಮರ್ಪಕ ಹೆರಿಗೆ ನಿರ್ವಹಣೆ ಮತ್ತು ಹೆರಿಗೆ ನಂತರದ ಹಂತಗಳ ನಿರ್ವಹಣೆಯ ಬಗ್ಗೆ ಖಾಸಗಿ ಮತ್ತು ಸರ್ಕಾರಿ ವೈದ್ಯರುಗಳಿಗೆ ಕಾರ್ಯಾಗಾರವನ್ನು ಆರೋಗ್ಯ ಮತ್ತು ಕು.ಕ ಇಲಾಖೆಯ ವತಿಯಿಂದ ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಕಂಕನಾಡಿ, ಮಂಗಳೂರು ಇವರ ಸಹಯೋಗದೊಂದಿಗೆ ಇತ್ತೀಚೆಗೆ ಫಾದರ್ ಮುಲ್ಲರ್ಸ್ ಆಸ್ಪತ್ರೆ, ಕಂಕನಾಡಿ ಮಂಗಳೂರು ಇಲ್ಲಿ ಆಯೋಜಿಸಲಾಯಿತು.

ಜಿಲ್ಲೆಯ ವಿವಿಧ ಆಸ್ಪತ್ರೆಗಳ ಒಟ್ಟು 60 ಪ್ರಸೂತಿ ತಜ್ಞರು/ಮಕ್ಕಳ ತಜ್ಞರು ಭಾಗವಹಿಸಿದ ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ|| ಕೆ.ಜಿ ಜಗದೀಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ಕøಷ್ಟ ಆರೋಗ್ಯ ಸೇವಾ ಸೌಲಭ್ಯ ಹೊಂದಿದ್ದರೂ ತಾಯಿ ಮರಣ ಮತ್ತು ಶಿಶು ಮರಣ ಸಂಭವಿಸುತ್ತಿರುವುದು ಖೇದಕರ. ಖಾಸಗಿ, ಸರ್ಕಾರಿ ಎನ್ನದೇ ಎಲ್ಲಾ ವೈದ್ಯ ಮಿತ್ರರು ತಾಯಿ ಮತ್ತು ಮಗುವಿನ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿ ತಾಯಿ ಮರಣ ಮತ್ತು ಶಿಶುಮರಣ ತಡೆಗಟ್ಟಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿಕೊಂಡರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯ ಡೀನ್ ಡಾ|| ಜಯಪ್ರಕಾಶ್ ಆಳ್ವ ಮಾತನಾಡುತ್ತಾ ತಾಯಿ ಮರಣ ಮತ್ತು ಶಿಶುಮರಣ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಕಾರ್ಯಗಾರವನ್ನು ಆಯೋಜಿಸುವ ಮೂಲಕ ಉತ್ತಮ ಹೆಜ್ಜೆಯನ್ನು ಇಟ್ಟಿದ್ದು, ಸಾರ್ವಜನಿಕ ಕಳಕಳಿಯಿಂದ ಮುಂದಿನ ದಿನಗಳಲ್ಲಿ ಆಯೋಜಿಸುವ ಎಲ್ಲಾ ಕಾರ್ಯಕ್ರಮಗಳಿಗೂ ಸಂಪೂರ್ಣ ಸಹಕಾರವನ್ನು ನೀಡುವ ಭರವಸೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ|| ರಾಮಕೃಷ್ಣ ರಾವ್,ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಅಶೋಕ್.ಹೆಚ್ ,ಫಾದರ್ ಮುಲ್ಲರ್ಸ್ ವೈದ್ಯಕೀಯ ಮಹಾವಿದ್ಯಾಲಯ ಇದರ ಪ್ರಸೂತಿ ಮತ್ತು ಹೆರಿಗೆ ವಿಭಾಗದ ಮುಖ್ಯಸ್ಥರಾದ ಡಾ|| ಪ್ರೇಮಾ ಡಿ’ಕುನ್ಹಾ,ಯೂನಿಟ್ ಚೀಫ್ ಡಾ|| ಸುಜಯ್ ರಾವ್, ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ|| ರಾಜೇಶ್ವರಿದೇವಿ, ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈಧ್ಯಕೀಯ ಅಧೀಕ್ಷಕರಾದ ಡಾ|| ಸವಿತಾ ಮುಂತಾದವರು ಉಪಸ್ಥಿತರಿದ್ದರು. ಡಾ|| ಪ್ರಜ್ಞಾ ವಂದಿಸಿದರು. ಡಾ|| ಯಜ್ಞಾ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಡಾ|| ಅಶೋಕ್ ಹೆಚ್, ಡಾ|| ವಿದ್ಯಾಶ್ರೀ, ಡಾ|| ಶನ್ನೋನ್, ಡಾ|| ಸೌಮ್ಯ, ಡಾ|| ಚೇತನಾ ಮತ್ತು ಡಾ|| ದೀಪಾ ಭಾಗವಹಿಸಿದರು.


Spread the love