ಧೈರ್ಯವಿದ್ದರೆ ಹಿಂದೂ ನಾಯಕರನ್ನು ಬಂಧಿಸಲಿ ನಳಿನ್‍ಕುಮಾರ್ ಕಟೀಲ್ ಸವಾಲು

Spread the love

ಧೈರ್ಯವಿದ್ದರೆ ಹಿಂದೂ ನಾಯಕರನ್ನು ಬಂಧಿಸಲಿ ನಳಿನ್‍ಕುಮಾರ್ ಕಟೀಲ್ ಸವಾಲು

ಮಂಗಳೂರು: ಹಿರಿಯ ಆರ್‍ಎಸ್‍ಎಸ್ ನಾಯಕ ಡಾ.ಪ್ರಭಾಕರ ಭಟ್ ಅವರನ್ನು ಬಂಧಿಸುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅವರಿಗೆ ಒತ್ತಡ ಹಾಕಿರುವುದನ್ನು ಕೆಲವು ಕಾಂಗ್ರೆಸ್ ನಾಯಕರು ಸಮರ್ಥಿಕೊಳ್ಳುತ್ತಿರುವುದು ನಾಚಿಕೆಗೇಡಿನ ವಿಚಾರ. ಸಚಿವರಿಗೆ ಧೈರ್ಯವಿದ್ದರೆ ಹಿಂದೂ ನಾಯಕರನ್ನು ಬಂಧಿಸಲಿ ಎಂದು ಸಂಸದ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ.
ಹಿಂದೂ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಡಾ.ಪ್ರಭಾಕರ ಭಟ್ ಅವರನ್ನು ಎಕವಚನದಿಂದ ನಿಂದಿಸಿರುವ ಸಚಿವರ ದರ್ಪಕ್ಕೆ ಜಿಲ್ಲೆಯ ಜನತೆ ಆಕ್ರೋಶಿತರಾಗಿದ್ದಾರೆ. ಅಲ್ಪಸಂಖ್ಯಾತರನ್ನು ಓಲೈಸುವ ಏಕೈಕ ಉದ್ದೇಶದಿಂದ ಸಚಿವರು ಹಿಂದೂ ನಾಯಕರ ಬಂಧನಕ್ಕೆ ಒತ್ತಡ ಹೇರುತ್ತಿದ್ದಾರೆ. ಸಚಿವರ ಒತ್ತಡಕ್ಕೆ ಮಣಿದು ವಿನಾ ಕಾರಣ ಡಾ.ಪ್ರಭಾಕರ ಭಟ್ ವಿರುದ್ಧ ಕೇಸು ದಾಖಲಿಸಿದರೆ ಮುಂದೆ ನಡೆಯಬಹುದಾದ ಅನಾಹುತಗಳಿಗೆ ಸಚಿವರೇ ನೇರ ಹೊಣೆಯಾಗಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೇತ್ರಾವತಿ ಹೋರಾಟಗಾರರನ್ನು ಬಂಧಿಸುವಂತೆ ಉಸ್ತುವಾರಿ ಸಚಿವರು ಹೇಳಿರುವುದು ಅಹಂಕಾರದ ಪರಮಾವಧಿಯಾಗಿದೆ. ಸಂಘಪರಿವಾರದ ಮನಸ್ಥಿತಿಯ ಪೋಲೀಸರನ್ನು ಎತ್ತಂಗಡಿ ಮಾಡಿಲ್ಲ ಯಾಕೆಂದು ಸಚಿವರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ತಾಳಕ್ಕೆ ತಕ್ಕಂತೆ ಪೋಲೀಸ್ ಇಲಾಖೆ ಕುಣಿಯಬೇಕೆಂದು ಬಯಸುವ ಇಂತಹ ಸಚಿವರು ಇರುವ ತನಕ ಶಾಂತಿ ನೆಲೆಸಲು ಸಾಧ್ಯವೇ ಎಂದು ಸಂಸದರು ಪ್ರಶ್ನಿಸಿದ್ದಾರೆ.


Spread the love